ಹಾಲಿ ಟಿ20 ಚಾಂಪಿಯನ್ ಎಂಬ ಪಟ್ಟದೊಂದಿಗೆ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸ ಮಾಡಿದ್ದ ಟೀಂ ಇಂಡಿಯಾ (Team India), ಒಂದೇ ಒಂದು ಗೆಲುವಿಗಾಗಿ ಹಾತೋರೆಯುವಂತ್ತಾಗಿದೆ. ಇದುವರೆಗೆ 6 ಟಿ20 ಪಂದ್ಯಗಳನ್ನಾಡಿರುವ ಶ್ರೇಯಸ್ ಅಯ್ಯರ್ (Shreyas Iyer) ಪಡೆ 5 ಪಂದ್ಯಗಳನ್ನು ಸೋತಿದ್ದು, ಉಳಿದ ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಅಂದರೆ ಈ ಎರಡೂ ಪ್ರವಾಸಗಳಲ್ಲಿ ಭಾರತಕ್ಕೆ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ. ತಂಡದ ಈ ಕಳಪೆ ಪ್ರದರ್ಶನ ವಿಶ್ವ ಕ್ರಿಕೆಟ್ನ ದೊಡ್ಡಣ್ಣ ಬಿಸಿಸಿಐಗೆ ದೊಡ್ಡ ತಲೆನೋವು ತಂದಿದೆ. ತಂಡದ ಈ ಕಳಪೆ ಪ್ರದರ್ಶನವನ್ನು ಆರಂಭದಲ್ಲೇ ಸರಿಪಡಿಸದಿದ್ದರೆ, ಅದು ತನ್ನ ಆದಾಯದ ಮೂಲಕ್ಕೆ ದೊಡ್ಡ ಹೊಡೆತ ನೀಡಲಿದೆ ಎಂಬುದು ಬಿಸಿಸಿಐಗೆ ಗೊತ್ತು. ಹೀಗಾಗಿ ಎರಡು ಸರಣಿ ಸೋಲುಗಳ ಬಳಿಕ ಎಚ್ಚೆತ್ತುಕೊಂಡಿರುವ ಬಿಸಿಸಿಐ, ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅವರೊಂದಿಗೆ ಪರಿಶೀಲನಾ ಸಭೆ ನಡೆಸಲು ತೀರ್ಮಾನಿಸಿದೆ.
ಪರಿಶೀಲನಾ ಸಭೆ
ಟೀಂ ಇಂಡಿಯಾದ ಪ್ರದರ್ಶನದ ಬಗ್ಗೆ ತಮಗೆ ಕಳವಳವಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸರಣಿ ಮುಗಿದ ನಂತರ ನಾಯಕ ಶ್ರೇಯಸ್ ಅಯ್ಯರ್ ಮತ್ತು ತರಬೇತುದಾರ ಗೌತಮ್ ಗಂಭೀರ್ ಅವರೊಂದಿಗೆ ಪರಿಶೀಲನಾ ಸಭೆ ನಡೆಸಲಿದ್ದು, ತಂಡದಲ್ಲಿರುವ ನ್ಯೂನತೆಗಳನ್ನು ಸರಿಪಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಈ ಮೂಲಕ ಭಾರತ ಟಿ20 ತಂಡವು ತನ್ನ ಹಳೆಯ ಲಯಕ್ಕೆ ಮರಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸೈಕಿಯಾ ತಿಳಿಸಿರುವುದಾಗಿ ವರದಿ ಮಾಡಿದೆ.
ಐರ್ಲೆಂಡ್‌ನಲ್ಲಿ ಕ್ಲೀನ್ ಸ್ವೀಪ್
ಟೀಂ ಇಂಡಿಯಾದ ಯುಕೆ ಪ್ರವಾಸವು ಐರ್ಲೆಂಡ್ ವಿರುದ್ಧದ ಟಿ20 ಸರಣಿಯೊಂದಿಗೆ ಪ್ರಾರಂಭವಾಯಿತು. ಅಲ್ಲಿ ಭಾರತ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಮುಜುಗರಕ್ಕೀಡಾಯಿತು. ಶ್ರೇಯಸ್ ಅಯ್ಯರ್ ನಾಯಕನಾಗಿ ನಡೆದ ಮೊದಲ ಟಿ20 ಸರಣಿಯಲ್ಲಿ ಟೀಂ ಇಂಡಿಯಾ, ಐರ್ಲೆಂಡ್ ವಿರುದ್ಧ ಟಿ20 ಪಂದ್ಯ ಮತ್ತು ಸರಣಿ ಸೋತ ಬೇಡದ ದಾಖಲೆ ಬರೆದಿತ್ತು.
IND vs ENG: 14 ವರ್ಷಗಳ ನಂತರ ಭಾರತದ ವಿರುದ್ಧ ಟಿ20 ಸರಣಿ ಗೆದ್ದ ಇಂಗ್ಲೆಂಡ್
ಇಂಗ್ಲೆಂಡ್‌ನಲ್ಲೂ ಸರಣಿ ಸೋಲು
ಐರ್ಲೆಂಡ್ ನಂತರ ಟೀಂ ಇಂಡಿಯಾ ಇಂಗ್ಲೆಂಡ್‌ಗೆ ಪ್ರಯಾಣಿಸಿತ್ತು. ಆದರೆ ಅಲ್ಲಿಯೂ ಪರಿಸ್ಥಿತಿ ಬದಲಾಗಲಿಲ್ಲ. ಐದು ಪಂದ್ಯಗಳ ಟಿ20 ಸರಣಿಯನ್ನು ಭಾರತ 3-0 ಅಂತರದಿಂದ ಕಳೆದುಕೊಂಡಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿದ್ದರೆ, ಇಂಗ್ಲೆಂಡ್ ಮೂರು ಪಂದ್ಯಗಳನ್ನು ಗೆದ್ದುಕೊಂಡಿದೆ. ಈಗ, ಟೀಂ ಇಂಡಿಯಾ ಕ್ಲೀನ್ ಸ್ವೀಪ್ನಿಂದ ಪಾರಾಗಲು ಮತ್ತು ಟಿ20 ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಳ್ಳಬೇಕೆಂದರೆ ಉಳಿದಿರುವ ಕೊನೆಯ ಪಂದ್ಯದಲ್ಲಿ ಗೆಲ್ಲಲೇಬೇಕಿದೆ.