ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ‘ದಿ ಹಂಡ್ರೆಡ್‘ ಲೀಗ್ ಟೂರ್ನಿಯಲ್ಲಿ ಟ್ರೆಂಟ್ ರಾಕೆಟ್ಸ್ ತಂಡ ರೋಚಕ ಜಯ ಸಾಧಿಸಿದೆ. ಈ ರೋಚಕ ಗೆಲುವಿನ ರೂವಾರಿ ಮೊಹಮ್ಮದ್ ಅಮಿರ್. ನಾಟಿಂಗ್ಹ್ಯಾಮ್ನ ಟ್ರೆಂಟ್ ಬಿಡ್ಜ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸನ್ರೈಸರ್ಸ್ ಲೀಡ್ಸ್ ಹಾಗೂ ಟ್ರೆಂಟ್ ರಾಕೆಟ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಟ್ರೆಂಟ್ ರಾಕೆಟ್ಸ್ ತಂಡದ ನಾಯಕ ಸ್ಯಾಮ್ ಬಿಲ್ಲಿಂಗ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟ್ರೆಂಟ್ ರಾಕೆಟ್ಸ್ ತಂಡವು 100 ಎಸೆತಗಳಲ್ಲಿ 4 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು ಕೇವಲ 146 ರನ್ಗಳು ಮಾತ್ರ.
147 ರನ್ಗಳ ಗುರಿ ಬೆನ್ನತ್ತಿದ ಸನ್ರೈಸರ್ಸ್ ಲೀಡ್ಸ್ ತಂಡವು 80 ಎಸೆತಗಳ ಮುಕ್ತಾಯದ ವೇಳೆಗೆ 111 ರನ್ ಕಲೆಹಾಕಿದ್ದರು. ಅದರಂತೆ ಕೊನೆಯ 20 ಎಸೆತಗಳಲ್ಲಿ ಕೇವಲ 35 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ದಾಳಿಗಿಳಿದ ಮೊಹಮ್ಮದ್ ಅಮಿರ್ ಸತತ 10 ಎಸೆತಗಳನ್ನು ಎಸೆದು ನೀಡಿದ್ದು ಕೇವಲ 10 ರನ್ಗಳು ಮಾತ್ರ. ಇದರ ನಡುವೆ ಹ್ಯಾರಿ ಬ್ರೂಕ್ (46) ಹಾಗೂ ಮಿಚೆಲ್ ಮಾರ್ಷ್ (41) ಅವರ ವಿಕೆಟ್ಗಳನ್ನು ಸಹ ಪಡೆದರು.
ಮೊಹಮ್ಮದ್ ಅಮಿರ್ ಅವರ ಈ ಮಾರಕ ದಾಳಿಯಿಂದ ಕಂಗೆಟ್ಟ ಟ್ರೆಂಟ್ ರಾಕೆಟ್ಸ್ ತಂಡವು ಸೋಲಿನತ್ತ ಮುಖ ಮಾಡಿತು. ಅಂತಿಮವಾಗಿ 100 ಎಸೆತಗಳಲ್ಲಿ 4 ವಿಕೆಟ್ ಕಳೆದುಕೊಂಡು 141 ರನ್ಗಳಿಸುವ ಮೂಲಕ 5 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ರೋಚಕ ಗೆಲುವಿನೊಂದಿಗೆ ಟ್ರೆಂಟ್ ರಾಕೆಟ್ಸ್ ತಂಡವು ಅಂಕಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡಿದೆ.
ಸತತ 10 ಎಸೆತಗಳು:
‘ದಿ ಹಂಡ್ರೆಡ್’ ನಿಯಮದ ಪ್ರಕಾರ ಬೌಲರ್ ಒಬ್ಬರಿಗೆ ಸತತವಾಗಿ 10 ಎಸೆತಗಳನ್ನು ಬೌಲ್ ಮಾಡಲು ಅವಕಾಶವಿರುತ್ತದೆ. ಪಂದ್ಯ ಕೈಜಾರುತ್ತಿರುವುದನ್ನು ಅರಿತ ಟ್ರೆಂಟ್ ರಾಕೆಟ್ಸ್ ತಂಡದ ನಾಯಕ ಸ್ಯಾಮ್ ಬಿಲ್ಲಿಂಗ್, ಚೆಂಡನ್ನು ಅನುಭವಿ ವೇಗಿ ಮೊಹಮ್ಮದ್ ಅಮಿರ್ ಕೈಗಿಟ್ಟರು. ಅಮಿರ್ ಎಸೆದ ಆ 10 ಎಸೆತಗಳು ಪಂದ್ಯದ ಚಿತ್ರಣವನ್ನೇ ಬದಲಿಸಿದವು.
ಅಮಿರ್ ತಮ್ಮ ಮೊದಲ 4 ಎಸೆತಗಳಲ್ಲಿ ನೀಡಿದ್ದು ಕೇವಲ 5 ರನ್ಗಳು ಮಾತ್ರ. ಮುಂದಿನ 5 ಎಸೆತಗಳಲ್ಲಿ ರನ್ ನಿಯಂತ್ರಣ ಮುಂದುವರಿಸಿದ ಅಮಿರ್, ಅಪಾಯಕಾರಿ ಮಿಚೆಲ್ ಮಾರ್ಷ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು.
ಇದನ್ನೂ ಓದಿ: ಟೀಮ್ ಇಂಡಿಯಾಗೆ ಜಮ್ಮು-ಕಾಶ್ಮೀರ ವೇಗಿ ಎಂಟ್ರಿ
ಅಲ್ಲದೆ ಸತತ 10 ಎಸೆತಗಳಲ್ಲಿ ಕೇವಲ 10 ರನ್ ನೀಡಿ 2 ಪ್ರಮುಖ ವಿಕೆಟ್ ಪಡೆಯುವ ಮೂಲಕ ಮೊಹಮ್ಮದ್ ಅಮಿರ್ ಟ್ರೆಂಟ್ ರಾಕೆಟ್ಸ್ ತಂಡಕ್ಕೆ ರೋಚಕ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.