
T20 World Cup 2026: ಟಿ20 ವಿಶ್ವಕಪ್ ಫೈನಲ್ ಪಂದ್ಯದ ಆರಂಭಕ್ಕೂ ಮುನ್ನ ‘ಸದ್ದಡಗಿಸುವುದು’ ಸಖತ್ ಸದ್ದು ಮಾಡುತ್ತಿದೆ. ಅಹದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತೀಯ ಪ್ರೇಕ್ಷಕರ ಸದ್ದಗಿಸುವುದೇ ನಮ್ಮ ಗುರಿ ಎಂದಿದ್ದಾರೆ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್.
ಟಿ20 ವಿಶ್ವಕಪ್ ಫೈನಲ್ ಪಂದ್ಯದ ಪೂರ್ವಭಾವಿಯಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಿಚೆಲ್ ಸ್ಯಾಂಟ್ನರ್, 2023ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಪ್ಯಾಟ್ ಕಮ್ಮಿನ್ಸ್ ಹೇಳಿದಂತೆಯೇ, ಲಕ್ಷಾಂತರ ಭಾರತೀಯ ಅಭಿಮಾನಿಗಳ ಮುಂದೆ ಆಡುವಾಗ “ಸ್ಟೇಡಿಯಂನಲ್ಲಿರುವ ಅಭಿಮಾನಿಗಳನ್ನು ಮೌನಗೊಳಿಸುವುದೇ ನಮ್ಮ ಗುರಿ” ಎಂದಿದ್ದಾರೆ.
ಈ ಮೂಲಕ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಅಭಿಮಾನಿಗಳ ಸದ್ದಡಗಿಸಿ ಟ್ರೋಫಿ ಗೆಲ್ಲುವ ವಿಶ್ವಾಸವನ್ನು ಸಹ ಮಿಚೆಲ್ ಸ್ಯಾಂಟ್ನರ್ ವ್ಯಕ್ತಪಡಿಸಿದ್ದಾರೆ.
ಇನ್ನು ಸ್ವದೇಶದಲ್ಲಿ ಟಿ20 ವಿಶ್ವಕಪ್ ಗೆಲ್ಲುವ ಏಕೈಕ ಅವಕಾಶ ಭಾರತಕ್ಕಿದ್ದು, ಆ ಒತ್ತಡವನ್ನೇ ನಾವು ಲಾಭವಾಗಿ ಬಳಸಿಕೊಳ್ಳುತ್ತೇವೆ. ತವರಿನಲ್ಲಿ ಪಂದ್ಯವಾಡುತ್ತಿರುವ ಕಾರಣ ಟೀಮ್ ಇಂಡಿಯಾ ಒತ್ತಡದಲ್ಲಿದೆ. ಇದರ ಸಂಪೂರ್ಣ ಲಾಭ ಪಡೆದು ನಾವು ಮ್ಯಾಚ್ ಗೆಲ್ಲುತ್ತೇವೆ ಎಂದು ನ್ಯೂಝಿಲೆಂಡ್ ನಾಯಕ ಹೇಳಿದ್ದಾರೆ.
ಸೂರ್ಯಕುಮಾರ್ ಯಾದವ್ ತಿರುಗೇಟು:
ನ್ಯೂಝಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ನೀಡಿರುವ ಸದ್ದಡಗಿಸುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಭಾರತ ತಂಡದ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್, ಸಬ್ ಹೀ ಸೇಮ್ ಲೈನ್ ಚಿಪ್ಕಾ ರಹೇ ಹೈ. ಕುಚ್ ತೋ ನಯಾ ಬೋಲೋ” (ಎಲ್ಲರೂ ಈಗ ಅದೇ ಮಾತನ್ನು ಹೇಳುತ್ತಿದ್ದಾರೆ. ಏನಾದರೂ ಹೊಸದನ್ನು ಹೇಳಿ) ಎಂದು ತಿರುಗೇಟು ನೀಡಿದ್ದಾರೆ.
ಒಟ್ಟಿನಲ್ಲಿ ಫೈನಲ್ ಪಂದ್ಯಕ್ಕೂ ಮುನ್ನ ಸದ್ದಡಗಿಸುವ ಸವಾಲು ಹಾಕಿರುವ ನ್ಯೂಝಿಲೆಂಡ್ ತಂಡದ ನಾಯಕನನ್ನು ಟೀಮ್ ಇಂಡಿಯಾ ಸೈಲೆಂಟ್ ಮಾಡಲಿದೆಯಾ ಕಾದು ನೋಡಬೇಕಿದೆ.
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.
ಇದನ್ನೂ ಓದಿ: ಮೂಢನಂಬಿಕೆಯೋ, ಕಾಕತಾಳೀಯವೊ… ಹೋಟೆಲ್ ಬದಲಿಸಿದ ಟೀಮ್ ಇಂಡಿಯಾ