ಸಭಾಪತಿ ಹುದ್ದೆ ತೊರೆಯಲು ಮುಂದಾದ ಹೊರಟ್ಟಿImage Credit source: PTI
ಬೆಂಗಳೂರು, ಆಗಸ್ಟ್ 06: ವಿಧಾನ ಪರಿಷತ್ಗೆ ಹಾಲಿ ಸಭಾಪತಿಗಳು ಇರುವ ನಡುವೆಯೇ ಸಲೀಂ ಅಹ್ಮದ್ ಅವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಆ ಸ್ಥಾನಕ್ಕೆ ಶಿಫಾರಸ್ಸು ಮಾಡಿದ ಬಳಿಕ ನಡೆದ ರಾಜಕೀಯ ಬೆಳವಣಿಗೆಗಳು ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಆಗಸ್ಟ್ 14ರಂದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮಾಡಿರೋದಾಗಿ ಬೆಂಗಳೂರಿನಲ್ಲಿ ಟಿವಿ9ಗೆ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. ಸಿಎಂ ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಲು ಹೇಳಿದ್ದಾರೆ. ರಾಜೀನಾಮೆ ನೀಡದಿದ್ದರೆ ಅವಿಶ್ವಾಸ ಮಂಡಿಸುವುದಾಗಿ ತಿಳಿಸಿದ್ದು, ನನಗೆ ಗೌರವ ಕಳೆದುಕೊಳ್ಳಲು ಇಷ್ಟವಿಲ್ಲ. ಹೀಗಾಗಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದವರು ತಿಳಿಸಿದ್ದಾರೆ.
ಕಾಂಗ್ರೆಸಿಗರ ನಡೆಗೆ ಹೊರಟ್ಟಿ ಬೇಸರ
ಪ್ರಸಕ್ತ ರಾಜಕೀಯ ಬೆಳವಣಿಗೆಗಳ ನಡುವೆ ಸಿಎಂ ಡಿಕೆಶಿ ಅವರನ್ನು ನಿನ್ನೆಯಷ್ಟೇ ಬಸವರಾಜ ಹೊರಟ್ಟಿ ಭೇಟಿಯಾಗಿದ್ದರು. ಈ ವೇಳೆ ಸಭಾಪತಿ ಹುದ್ದೆಗೆ ರಾಜೀನಾಮೆ ನೀಡಲು ಮುಖ್ಯಮಂತ್ರಿಗಳು ಸೂಚಿಸಿದ್ದರು. ಇಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಕೂಡ ಹೊರಟ್ಟಿ ಸರ್ಕಾರಿ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇನ್ನು ಕಾಂಗ್ರೆಸಿಗರ ನಡೆಗೆ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದು, ಸಭಾಪತಿ ಆಯ್ಕೆ ಬಗ್ಗೆ ಪಕ್ಷ ಪತ್ರ ಕಳಿಸಿ ನಿರ್ಧಾರ ತೆಗೆದುಕೊಂಡಿಲ್ಲ. ನ್ನ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪವಿಲ್ಲ. ಆದರೂ ಈ ರೀತಿಯಾಗಿ ನಡೆಸಿಕೊಳ್ತಿರುವುದು ನೋವು ತಂದಿದೆ ಎಂದಿದ್ದಾರೆ.
ಇದನ್ನೂ ಓದಿ: ಅಧಿವೇಶನ ಆರಂಭಕ್ಕೂ ಮುನ್ನವೇ ಜಟಾಪಟಿ: ಸಭಾಪತಿ ಹೊರಟ್ಟಿಗೆ ಶಾಕ್ ಕೊಡುತ್ತಾ ಕಾಂಗ್ರೆಸ್?
ವಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಕೂಡ ಗರಂ
ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೊರಟ್ಟಿಯವರಿಗೆ ಈ ರೀತಿ ಹೇರುತ್ತಿರುವುದು ಸರಿಯಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಸಭಾಪತಿಗೆ ಎರಡು ಬಾರಿ ಫೋನ್ ಕರೆ ಮಾಡಿ ಒತ್ತಡ ಹಾಕಿದ್ದಾರೆ. ಸಲೀಂ ಅಹ್ಮದ್ರನ್ನು ಈಗಾಗಲೇ ಎಐಸಿಸಿ ನೇಮಕ ಮಾಡಿದೆಯಂತೆ. ಆ ಮೂಲಕ ಮೇಲ್ಮನೆಗೆ ಕಳಂಕ ಬರುವ ರೀತಿ ಕಾಂಗ್ರೆಸ್ ಪಕ್ಷ ನಡೆದುಕೊಂಡಿದೆ. ಸಂಖ್ಯಾಬಲ ಇದೆ ಎಂಬ ಕಾರಣಕ್ಕೆ ರಾಜೀನಾಮೆ ಕೇಳುವುದು ಸರಿಯಲ್ಲ. ಇದರ ತೀರ್ಮಾನವನ್ನು ಸಭಾಪತಿಗಳೇ ತೆಗೆದುಕೊಳ್ಳಬೇಕು. ಹೊರಟ್ಟಿ ಗಟ್ಟಿಯಾಗಿ ನಿಂತರೆ ಅವರಿಗೆ ಸಂಪೂರ್ಣ ಬೆಂಬಲ ನಿಲ್ಲುತ್ತೇವೆ. ಅವರು ಗಟ್ಟಿಯಾಗಿ ನಿಲ್ಲಲಿಲ್ಲ ಅಂದರೆ ನಾವೇನೂ ಮಾಡುವುದಕ್ಕೆ ಆಗಲ್ಲ ಎಂದಿದ್ದಾರೆ. ಹೊರಟ್ಟಿ ಅವರಂತಹ ಹಿರಿಯ ಮುತ್ಸದ್ಧಿಗೆ ಈ ರೀತಿ ಆಗಬಾರದು. ಅವರು 8 ಬಾರಿ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಉತ್ತಮ ಕೆಲಸ ಮಾಡ್ತಿದ್ರು, ಇಂತಹ ಪರಿಸ್ಥಿತಿಗೆ ತರಬಾರದಿತ್ತು ಎಂದು ಜೆಡಿಎಲ್ಪಿ ನಾಯಕ ಸುರೇಶ್ ಬಾಬು ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 1:14 pm, Thu, 6 August 26