Headlines

ಸರಸ್ವತಿಯಲ್ಲ ಗಾಯತ್ರಿ; ಹೊಸ ತಂತ್ರಜ್ಞಾನದಿಂದ ಬಯಲಾಯ್ತು 900 ವರ್ಷಗಳ ಹಿಂದಿನ ದೇವತೆಯ ಅಸಲಿ ಗುರುತು! – Kannada News | No Veena Means It Is Not Saraswati but Gayatri How a missing veena revealed 900 year old mystery in Dhar

ಭೋಪಾಲ್, ಜುಲೈ 13: ದೇವಸ್ಥಾನಗಳಲ್ಲಿ, ಮ್ಯೂಸಿಯಂಗಳಲ್ಲಿ ನಮ್ಮ ದೇಶದ ಪ್ರಾಚೀನ ಕಾಲದ ದೇವರ ವಿಗ್ರಹಗಳು ಕಾಣಸಿಗುತ್ತವೆ. ಆ ಕಲ್ಲಿನ ಕೆತ್ತನೆಗೆ, ವಾಸ್ತುಶಿಲ್ಪಕ್ಕೆ ನಾವು ಕಣ್ಣರಳಿಸುತ್ತೇವೆಯೇ ವಿನಃ ನಮ್ಮಲ್ಲಿ ಬಹುತೇಕರು ಆ ದೇವರು ಅಥವಾ ದೇವತೆ ಯಾರು? ಎಂಬುದನ್ನು ಹೆಚ್ಚು ಗಮನಹರಿಸಿ ನೋಡುವುದಿಲ್ಲ. ಮಧ್ಯಪ್ರದೇಶದ (Madhya Pradesh) ಮ್ಯೂಸಿಯಂ ಒಂದರಲ್ಲಿ 900 ವರ್ಷಗಳ ಹಿಂದಿನ ಇದೇ ರೀತಿಯ ದೇವತೆಯ ಕಲಾಕೃತಿಯೊಂದಿತ್ತು. ಕಲ್ಲಿನಿಂದ ಕೆತ್ತಲಾದ ಈ ವಿಗ್ರಹವನ್ನು ಎಲ್ಲರೂ ಸರಸ್ವತಿ ದೇವಿಯ ವಿಗ್ರಹ ಎಂದೇ ಅಂದುಕೊಂಡಿದ್ದರು. ಆದರೆ, ಅದು ಸರಸ್ವತಿಯಲ್ಲ; ಗಾಯತ್ರಿ ದೇವತೆಯ ವಿಗ್ರಹ ಎಂಬುದು 9 ಶತಮಾನಗಳ ಬಳಿಕ ಈಗ ಬಯಲಾಗಿದೆ.

ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ರಾಜ್ಯ ವಸ್ತುಸಂಗ್ರಹಾಲಯದಲ್ಲಿದ್ದ 900 ವರ್ಷಗಳಷ್ಟು ಹಳೆಯದಾದ ದೇವತೆಯ ವಿಗ್ರಹವೊಂದರ ಕುರಿತಾಗಿ ಜನರಿಗಿದ್ದ 9 ಶತಮಾನಗಳಷ್ಟು ಹಳೆಯ ತಪ್ಪು ತಿಳುವಳಿಕೆಯನ್ನು ಪುರಾತತ್ವಶಾಸ್ತ್ರಜ್ಞರು ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಸರಿಪಡಿಸಿದ್ದಾರೆ. ಇದುವರೆಗೆ ‘ಸರಸ್ವತಿ ದೇವಿ’ ಎಂದು ಭಾವಿಸಲಾಗಿದ್ದ 12ನೇ ಶತಮಾನದ ಈ ವಿಗ್ರಹ ವಾಸ್ತವವಾಗಿ ಅತ್ಯಂತ ಅಪರೂಪದ ‘ಗಾಯತ್ರಿ ದೇವಿ’ಯ ಕಲಾಕೃತಿ ಎಂಬುದು ಈಗ ಸಾಬೀತಾಗಿದೆ.

3D ಮ್ಯಾಪಿಂಗ್ ತಂತ್ರಜ್ಞಾನದಿಂದ ಬಯಲಾಗಿದ್ದೇನು?:

ಕೆಂಪು ಮರಳುಗಲ್ಲಿನಿಂದ ಕೆತ್ತಲಾದ ಈ ಪುರಾತನ ವಿಗ್ರಹವನ್ನು ಪುರಾತತ್ವಶಾಸ್ತ್ರಜ್ಞರು ಅತ್ಯಾಧುನಿಕ ವೈಜ್ಞಾನಿಕ ಇಮೇಜಿಂಗ್ ಮತ್ತು ಡಿಜಿಟಲ್ ದಾಖಲೀಕರಣ ತಂತ್ರಜ್ಞಾನದ ಮೂಲಕ ಮರು-ಪರಿಶೀಲನೆ ನಡೆಸಿದ್ದಾರೆ. ಹೈ-ರೆಸಲ್ಯೂಶನ್ 3D ಮ್ಯಾಪಿಂಗ್ ತಂತ್ರಜ್ಞಾನವನ್ನು ಬಳಸಿದಾಗ ಈ ಹಿಂದೆ ಕಣ್ಣಿಗೆ ಕಾಣಿಸದಿದ್ದ ಸೂಕ್ಷ್ಮ ಕೆತ್ತನೆಗಳು ಮತ್ತು ವಿಗ್ರಹದ ಆಕೃತಿಗಳು ಸ್ಪಷ್ಟವಾಗಿ ಗೋಚರಿಸಿವೆ. ಹಿಂದೂ ಧರ್ಮದ ಶಿಲ್ಪಕಲೆ ಮತ್ತು ವಾಸ್ತುಶಿಲ್ಪದ ಕೈಪಿಡಿಗಳಾದ ‘ಶಿಲ್ಪ ಶಾಸ್ತ್ರ’ಗಳೊಂದಿಗೆ ಈ ವಿಗ್ರಹದ ವಿವರಗಳನ್ನು ಸಂಶೋಧಕರು ಹೋಲಿಸಿ ನೋಡಿದಾಗ ಸರಸ್ವತಿ ದೇವಿಯ ವಿಗ್ರಹ ಅದಲ್ಲ ಎಂಬುದು ಸ್ಪಷ್ಟವಾಯಿತು.

ಸರಸ್ವತಿಯಲ್ಲ, ಗಾಯತ್ರಿ ಎಂಬುದಕ್ಕೆ ಸಾಕ್ಷಿಗಳೇನು?:

ಕೈಯಲ್ಲಿ ವೀಣೆ ಇರಲಿಲ್ಲ:

ಈ 900 ವರ್ಷದ ಹಿಂದಿನ ಕಲ್ಲಿನ ವಿಗ್ರಹದಲ್ಲಿ ಸರಸ್ವತಿ ದೇವಿಯ ಪ್ರಮುಖ ಗುರುತಾದ ‘ವೀಣೆ’ ಇಲ್ಲದೇ ಇರುವುದು ಸಂಶೋಧಕರ ಗಮನಕ್ಕೆ ಬಂತು. ಗುಪ್ತರ ಕಾಲದ ನಂತರದ ಎಲ್ಲಾ ಕಲೆಗಳಲ್ಲೂ ಸರಸ್ವತಿಯನ್ನು ವೀಣೆಯೊಂದಿಗೆ ಚಿತ್ರಿಸುವುದು ಕಡ್ಡಾಯವಾಗಿತ್ತು. ಆದರೆ ಈ 900 ವರ್ಷ ಹಳೆಯ ವಿಗ್ರಹದಲ್ಲಿ ವೀಣೆಯ ಯಾವುದೇ ಕುರುಹು ಇರಲಿಲ್ಲ. ಈ ಒಂದು ಮುಖ್ಯ ಸುಳಿವು ಇಡೀ ತನಿಖೆಯ ದಿಕ್ಕನ್ನೇ ಬದಲಿಸಿತು.

ಇದನ್ನೂ ಓದಿ: Shiva Parivar: ಶಿವನನ್ನ ಒಬ್ಬಂಟಿಯಾಗಿ ಪೂಜಿಸಲ್ಲ ಯಾಕೆ? ನಂದಿ, ಗಣೇಶ, ಪಾರ್ವತಿ ವಿಗ್ರಹ ಪ್ರತಿಷ್ಠಾಪಿಸುವುದೇಕೆ?

ವೇದ ಮತ್ತು ಕಮಲ ಹಿಡಿದಿದ್ದ ದೇವತೆ:

ಸರಸ್ವತಿಯ ಕೈಯಲ್ಲಿರುವ ವೀಣೆಯ ಬದಲಾಗಿ ಈ ದೇವತೆಯ ಕೈಯಲ್ಲಿ ವೇದಗಳು ಮತ್ತು ಕಮಲದ ಹೂವು ಇರುವುದು ಹೊಸ ತಂತ್ರಜ್ಞಾನದ ಮೂಲಕ ಸೂಕ್ಷ್ಮವಾಗಿ ಅವಲೋಕನ ಮಾಡಿದಾಗ ಗೋಚರವಾಯಿತು. ಈ ವಿವರಗಳು ‘ಶ್ರೀಮದ್ ದೇವಿ ಭಾಗವತ ಪುರಾಣ’ದಲ್ಲಿ ವಿವರಿಸಲಾದ ಗಾಯತ್ರಿ ದೇವಿಯ ರೂಪಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗಿತ್ತು. ಹೀಗಾಗಿ, ಈ ದೇವತೆ ಗಾಯತ್ರಿ ದೇವಿ ಎಂಬುದು ಸ್ಪಷ್ಟವಾಯಿತು.

ಪುರಾತತ್ವಶಾಸ್ತ್ರಜ್ಞರು ಹೇಳಿದ್ದೇನು?:

“4 ಭುಜ ಮತ್ತು ಕೈಗಳನ್ನು ಹೊಂದಿರುವ ಈ ದೇವತೆಯು ಲಲಿತಾಸನದಲ್ಲಿ ಕುಳಿತಿದ್ದಾಳೆ. ಆಕೆಯ ಕೈಗಳಲ್ಲಿ ಜಪಮಾಲೆ, ಕಮಲ ಮತ್ತು ವೇದಗಳಿವೆ. ಆಕೆಯ ಪಕ್ಕದಲ್ಲಿ ಕೆತ್ತಲಾದ ಹಂಸವು ಜ್ಞಾನದ ಸಂಕೇತವಾಗಿದೆ. ಈ ದೇವತೆಯ ದೈವತ್ವವನ್ನು ಸಾರಲು ಗಂಧರ್ವರು ಮಾಲೆಯನ್ನು ಹಿಡಿದಿದ್ದಾರೆ. ಈ ಎಲ್ಲಾ ಲಕ್ಷಣಗಳು ಇದು ಸರಸ್ವತಿಯಲ್ಲ, ಗಾಯತ್ರಿ ದೇವಿ ಎಂಬುದನ್ನು ಖಚಿತಪಡಿಸುತ್ತವೆ. ಗಾಯತ್ರಿ ದೇವಿಯ ಇಂತಹ ಸ್ವತಂತ್ರ ವಿಗ್ರಹಗಳು ಅತ್ಯಂತ ಅಪರೂಪ. ಈ ಹಿನ್ನೆಲೆಯಲ್ಲಿ ಈ ವಿಗ್ರಹ ಬಹಳ ಮಹತ್ವವಾದುದಾಗಿದೆ” ಎಂದು ಪುರಾತತ್ವ ಶಾಸ್ತ್ರಜ್ಞರು ಹೇಳಿದ್ದಾರೆ.

ಸರಸ್ವತಿ ದೇವಿ ಎಂದು ತಪ್ಪು ತಿಳಿದಿದ್ದು ಹೇಗೆ?:

ಈ ಶಿಲ್ಪವು ಪಶ್ಚಿಮ ಚಾಲುಕ್ಯರ ಶೈಲಿಯ ಕೆತ್ತನೆಯ ಪ್ರಭಾವವನ್ನು ಹೊಂದಿದೆ. ಈ ವಿಗ್ರಹವು ಪರಮಾರ ರಾಜವಂಶದ (9ರಿಂದ 14ನೇ ಶತಮಾನ) ರಾಜಧಾನಿಯಾಗಿದ್ದ ‘ಧಾರ್’ ನಗರದಲ್ಲಿ ಉತ್ಖನನದ ವೇಳೆ ಪತ್ತೆಯಾಗಿತ್ತು. ಆ ಕಾಲದಲ್ಲಿ ಇದು ಅತ್ಯಂತ ಪ್ರಸಿದ್ಧ ಐತಿಹಾಸಿಕ ಶಿಕ್ಷಣ ಕೇಂದ್ರವಾಗಿದ್ದರಿಂದ (ಜ್ಞಾನದ ದೇವತೆ ಸರಸ್ವತಿಯ ಆರಾಧನೆ ಹೆಚ್ಚಾಗಿದ್ದರಿಂದ) ಈ ವಿಗ್ರಹವನ್ನು ಸರಸ್ವತಿ ದೇವಿ ಎಂದು ತಪ್ಪಾಗಿ ಭಾವಿಸಲಾಗಿತ್ತು. ಹೀಗಾಗಿ, 900 ವರ್ಷಗಳಿಂದ ಈ ವಿಗ್ರಹ ಸರಸ್ವತಿ ದೇವಿ ಎಂಬ ಲೇಬಲ್​ನೊಂದಿಗೆ ಇತ್ತು. ಇದೀಗ ಆ ವಿಗ್ರಹಕ್ಕೆ ಹೊಸ ಹೆಸರು ಸಿಕ್ಕಿದ್ದು, ನಿಜವಾದ ಗುರುತು ಬಯಲಾಗಿದೆ.

ಇದನ್ನೂ ಓದಿ: Jagannath Rath Yatra 2026: ಪುರಿ ಜಗನ್ನಾಥನ ವಿಗ್ರಹಗಳು ಕೈಗಳಿಲ್ಲದೇ ಅಪೂರ್ಣವಾಗಿರಲು ಕಾರಣವೇನು ಗೊತ್ತಾ?

ಐಕಾನೋಗ್ರಫಿ ದೇವತೆಗಳಿಗೆ ಎಷ್ಟು ಕೈಗಳಿರಬೇಕು, ಯಾವ ಮುದ್ರೆ ಇರಬೇಕು, ಕೈಯಲ್ಲಿ ಯಾವ ಆಯುಧ ಅಥವಾ ಚಿಹ್ನೆ ಇರಬೇಕು (ಉದಾಹರಣೆಗೆ ತ್ರಿಶೂಲ ಅಥವಾ ಕಮಲ) ಎಂಬುದನ್ನು ನಿರ್ಧರಿಸುತ್ತದೆ. ಇದರಿಂದಾಗಿ ಸರಸ್ವತಿ ದೇವಿಯ ವಿಗ್ರಹ ಅಸಲಿಗೆ ಗಾಯತ್ರಿ ದೇವಿಯದ್ದು ಎಂಬುದು ಬಹಿರಂಗವಾಗಿದೆ.

ಭಾರತದಲ್ಲೇ ಅತ್ಯಂತ ಅಪರೂಪದ ಗಾಯತ್ರಿ ದೇವಿಯ ಈ ಸ್ವತಂತ್ರ ವಿಗ್ರಹದ ನೈಜ 3D ಮಾದರಿಯನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸಾರ್ವಜನಿಕರಿಗೆ ಮತ್ತು ಸಂಶೋಧಕರಿಗೆ ಆನ್‌ಲೈನ್‌ನಲ್ಲಿ ವೀಕ್ಷಿಸಲು ಶೀಘ್ರದಲ್ಲೇ ಅವಕಾಶ ಕಲ್ಪಿಸಲಾಗುವುದು ಎಂಬು ಪುರಾತತ್ವ ಇಲಾಖೆ ತಿಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:32 pm, Mon, 13 July 26

Source link

Leave a Reply

Your email address will not be published. Required fields are marked *