ಬೆಂಗಳೂರು, ಜುಲೈ 15: ಕೊರೊನಾ ಜಾಗತಿಕ ಹಾವಳಿಯ ನಡುವೆ ಕೊಂಚ ಮರೆಯಾಗಿದ್ದ ಮಹಾಮಾರಿ ಕ್ಯಾನ್ಸರ್, ಈಗ ಮತ್ತೆ ಕರ್ನಾಟಕ ರಾಜ್ಯದಲ್ಲಿ ಮಹಿಳೆಯರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸುತ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಯುವತಿಯರಿಂದ ಹಿಡಿದು ಮಧ್ಯವಯಸ್ಕ ಮಹಿಳೆಯರವರೆಗೆ ತೀವ್ರವಾಗಿ ಕಾಡುತ್ತಿರುವ ‘ಗರ್ಭಕಂಠ ಕ್ಯಾನ್ಸರ್’ (Cervical Cancer) ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಈಗ ಮಹತ್ವದ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. 14 ವರ್ಷದ ಹೆಣ್ಣುಮಕ್ಕಳಿಗೆ ಉಚಿತವಾಗಿ ಎಚ್ಪಿವಿ (HPV) ಲಸಿಕೆ ನೀಡುವ ಬೃಹತ್ ಅಭಿಯಾನಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ.
ಕರ್ನಾಟಕದಲ್ಲಿ 2026ರಲ್ಲಿ ಲಸಿಕೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಆಗಮನ
ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಲಸಿಕೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಲಸಿಕೆ ಪಡೆಯಲು ಮುಂದೆ ಬರುವ ಮಹಿಳೆಯರ ಸಂಖ್ಯೆಯಲ್ಲಿ ಶೇ 50ರಷ್ಟು ಹೆಚ್ಚಳ ಕಂಡುಬಂದಿದೆ. ಈ ಹಿಂದೆ ಖಾಸಗಿ ಆಸ್ಪತ್ರೆಗಳಲ್ಲಿ ಈ ಲಸಿಕೆಗೆ 3 ರಿಂದ 5 ಸಾವಿರ ರೂಪಾಯಿಗಳವರೆಗೆ ದುಬಾರಿ ವೆಚ್ಚ ತಗಲುತ್ತಿತ್ತು.
ಇದರಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಹೆಣ್ಣುಮಕ್ಕಳಿಗೆ ಲಸಿಕೆ ಲಭ್ಯವಾಗದೆ, ಹಲವರು ಪ್ರಾಣ ಕಳೆದುಕೊಳ್ಳುವ ಭೀಕರ ಪರಿಸ್ಥಿತಿ ಇತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಸ್ತ್ರೀರೋಗ ತಜ್ಞರ ಬೇಡಿಕೆಗೆ ಸ್ಪಂದಿಸಿರುವ ಸರ್ಕಾರ, ಉಚಿತ ವ್ಯಾಕ್ಸಿನ್ ಡ್ರೈವ್ ಆರಂಭಿಸಿದ್ದು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಆರೋಗ್ಯ ಇಲಾಖೆಯ ಆಯುಕ್ತರಾದ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಇದನ್ನೂ ಓದಿ Cervical cancer; ಗರ್ಭಕಂಠದ ಕ್ಯಾನ್ಸರ್ ಲಕ್ಷಣ, ಕಾರಣ, ಪರಿಣಾಮ ಮತ್ತು ನಿರ್ವಹಣೆ ಮಾಹಿತಿ ಇಲ್ಲಿದೆ
ಗರ್ಭಕಂಠ ಕ್ಯಾನ್ಸರ್ಗೆ ಪ್ರಮುಖ ಕಾರಣಗಳು
- ಮಹಿಳೆಯರಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿರುವ ಧೂಮಪಾನ ಹಾಗೂ ಮದ್ಯಪಾನದ ಹವ್ಯಾಸ.
- ಬದಲಾದ ಪಾಶ್ಚಾತ್ಯ ಹಾಗೂ ಮಾಡರ್ನ್ ಜೀವನಶೈಲಿ.
- ಅತಿಯಾದ ಲೈಂಗಿಕತೆ ಮತ್ತು ಗರ್ಭನಿರೋಧಕಗಳ ಅಸಮರ್ಪಕ ಬಳಕೆ.
- ಅತಿ ಬೇಗನೇ ಋತುಸ್ರಾವವಾಗುವುದು ಅಥವಾ ತಡವಾಗಿ ಋತುಬಂಧ (Menopause) ತಲುಪುವುದು.
- ದೇಹದಲ್ಲಿ ಉಂಟಾಗುವ ಹಾರ್ಮೋನು ಬದಲಾವಣೆಗಳ ಚಿಕಿತ್ಸೆಗಳು ಹಾಗೂ ಸಂತಾನೋತ್ಪತ್ತಿಯ ನಾನಾ ಅಂಶಗಳು.
ಈ ಮಾರಕ ರೋಗದಿಂದ ರಕ್ಷಣೆ ಪಡೆಯಲು ಲಸಿಕೆಯೊಂದೇ ಸೂಕ್ತ ಮಾರ್ಗವಾಗಿದ್ದು, ಅರ್ಹ ಹೆಣ್ಣುಮಕ್ಕಳ ಪೋಷಕರು ಸರ್ಕಾರದ ಈ ಉಚಿತ ಲಸಿಕಾ ಅಭಿಯಾನದ ಸದುಪಯೋಗ ಪಡೆದುಕೊಂಡು ಎಚ್ಚರಿಕೆ ವಹಿಸಬೇಕಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 9:14 am, Wed, 15 July 26