ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ದೆಹಲಿ ಹೈಕೋರ್ಟ್ನಲ್ಲಿ ಸದ್ಯಕ್ಕೆ ಹಿನ್ನಡೆ ಆಗಿದೆ. ಅವರ ಜೀವನಾಧಾರಿತ ಎನ್ನಲಾದ ‘ಕಾಲಾ ಹಿರಣ್: ದಿ ಬ್ಯಾಟಲ್ ಫಾರ್ ಲೆಗಸಿ’ (Kala Hiran) ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕೆಂಬ ಮನವಿಯ ವಿಚಾರಣೆಯನ್ನು ನ್ಯಾಯಾಲಯವು ಮುಂದೂಡಿದೆ. ಇದರಿಂದಾಗಿ ಸಲ್ಮಾನ್ ಖಾನ್ ಅವರು ಕೋರ್ಟ್ ತೀರ್ಪಿಗಾಗಿ ಜುಲೈ 1ರವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ‘ಲೈವ್ ಲಾ’ ಇಂಡಿಯಾ ವರದಿಯ ಪ್ರಕಾರ, ಜಸ್ಟಿಸ್ ಮಧು ಜೈನ್ ಅವರ ನೇತೃತ್ವದ ಪೀಠವು, ಸಲ್ಮಾನ್ ಖಾನ್ (Salman Khan) ಅವರ ಕಾನೂನು ತಂಡಕ್ಕೆ ಮೊಕದ್ದಮೆಯ ಸಂಪೂರ್ಣ ದಾಖಲೆಗಳನ್ನು ಚಿತ್ರನಿರ್ಮಾಪಕರಿಗೆ ಸಲ್ಲಿಸುವಂತೆ ಆದೇಶಿಸಿದೆ. ತದನಂತರ ವಿವರವಾದ ವಾದ-ಪ್ರತಿವಾದ ಆಲಿಸಲು ಪ್ರಕರಣವನ್ನು ಜುಲೈ 1ಕ್ಕೆ ಮುಂದೂಡಿದೆ.
1998ರ ಕೃಷ್ಣಮೃಗ ಬೇಟೆ ಪ್ರಕರಣ ಮತ್ತು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಜೊತೆಗಿನ ವಿವಾದಗಳನ್ನು ಆಧರಿಸಿ ‘ಕಾಲಾ ಹಿರಣ್’ ಸಿನಿಮಾ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಲ್ಮಾನ್ ಖಾನ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಇದು ಸಲ್ಮಾನ್ ಖಾನ್ ಅವರ ಕಹಾನಿ ಅಲ್ಲ ಎಂದು ಚಿತ್ರದ ನಿರ್ಮಾಪಕರು ವಾದಿಸುತ್ತಿದ್ದಾರೆ. ಹಾಗಿದ್ದರೂ ಟೀಸರ್ನಲ್ಲಿ ಸಲ್ಮಾನ್ ಖಾನ್ ಅವರಿಗೆ ಸಾಮ್ಯತೆ ಕಾಣಿಸಿದೆ.
ಸಲ್ಮಾನ್ ಖಾನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೀಪ್ ಸೇಥಿ, ‘ನನ್ನ ಕಕ್ಷಿದಾರರ ಜೀವನದ ಆಧಾರದ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಇದಕ್ಕೆ ಅವರಿಗೆ ಯಾವುದೇ ಹಕ್ಕಿಲ್ಲ, ನಾವು ಯಾವುದೇ ಅನುಮತಿ ನೀಡಿಲ್ಲ’ ಎಂದು ಸ್ಪಷ್ಟಪಡಿಸಿದರು. ಸಿನಿಮಾದಲ್ಲಿ ಸಲ್ಮಾನ್ ಖಾನ್ ಹೆಸರನ್ನು ನೇರವಾಗಿ ಬಳಸದಿದ್ದರೂ, ಕಥೆ ಮತ್ತು ಪಾತ್ರಗಳು ಅವರ ನಿಜ ಜೀವನಕ್ಕೆ ತೀರಾ ಹತ್ತಿರವಾಗಿವೆ ಎಂದು ದೂರಲಾಗಿದೆ.
ಚಿತ್ರದ ಟೀಸರ್ನಲ್ಲಿ ನಾಯಕ ನಟನು ಸಲ್ಮಾನ್ ಖಾನ್ ಅವರಂತೆ ಕಾಣುವುದಲ್ಲದೆ, ಅವರ ಸಿಗ್ನೇಚರ್ ಆದ ಬ್ಲೂ ಬ್ರೇಸ್ಲೆಟ್ ಧರಿಸಿರುವುದು ಇದಕ್ಕೆ ಸಾಕ್ಷಿ ಎಂದು ವಕೀಲರು ವಾದಿಸಿದರು. ಅಲ್ಲದೆ, ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಖುಲಾಸೆಯಾಗಿದ್ದರೂ, ಟೀಸರ್ನಲ್ಲಿ ನಾಯಕ ಗನ್ ಹಿಡಿದಿರುವುದನ್ನು ತೋರಿಸಿ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಅವರು ದೂರಿದ್ದಾರೆ.
ಇದನ್ನೂ ಓದಿ: ಬಿಗ್ ಬಜೆಟ್ ಐತಿಹಾಸಿಕ ಸಿನಿಮಾಗಾಗಿ ಸಲ್ಮಾನ್ ಖಾನ್ ಜತೆ ಕೈ ಜೋಡಿಸಿದ ಫರ್ಹಾನ್ ಅಖ್ತರ್?
ಚಿತ್ರದ ಬಿಡುಗಡೆಗೆ ತಕ್ಷಣವೇ ತಡೆ ನೀಡಬಾರದು ಎಂದು ಚಿತ್ರನಿರ್ಮಾಪಕರ ವಕೀಲರು ಕೋರಿದರು. ಸಲ್ಮಾನ್ ಖಾನ್ ತಂಡದಿಂದ ತಮಗೆ ಕೇವಲ ಅರ್ಧದಷ್ಟು ಕಾನೂನು ದಾಖಲೆಗಳು ಮಾತ್ರ ಸಿಕ್ಕಿವೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಇದರೊಂದಿಗೆ, ಈ ಸಿನಿಮಾದ ವಿವಾದದಿಂದ ಚಿತ್ರತಂಡಕ್ಕೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಈಗಾಗಲೇ ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವುದಾಗಿ ವಕೀಲರು ಕೋರ್ಟ್ ಗಮನಕ್ಕೆ ತಂದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.