Headlines

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಶಾಸಕರ ಸಮಿತಿ, ಎಬೋಲಾ ಹರಡುವಿಕೆ ತಡೆಗೆ ಏರ್‌ಪೋರ್ಟ್‌ಗಳಲ್ಲಿ ಸ್ಕ್ರೀನಿಂಗ್: ಯುಟಿ ಖಾದರ್ ಘೋಷಣೆ – Kannada News | Karnataka to Form MLAs Committee for Epidemic Control, Ebola Screening Begins at Airports: Says UT Khader

ಬೆಂಗಳೂರು, ಜುಲೈ 20: ಕರ್ನಾಟಕದಲ್ಲಿ ಸಾಂಕ್ರಾಮಿಕ ರೋಗಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಕ್ರಮ ಕೈಗೊಳ್ಳಲು ಪ್ರತಿ ಕ್ಷೇತ್ರದ ಜನಪ್ರತಿನಿಧಿಗಳನ್ನು ಒಳಗೊಂಡ ವಿಶೇಷ ಶಾಸಕರ ಸಮಿತಿ ರಚಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಜೊತೆಗೆ, ಆಫ್ರಿಕಾದ ಕೆಲವು ದೇಶಗಳಲ್ಲಿ ಎಬೋಲಾ (Ebola) ಸೋಂಕಿನ ಆತಂಕ ಹೆಚ್ಚಿರುವ ಹಿನ್ನೆಲೆಯಲ್ಲಿ, ಆ ದೇಶಗಳಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣಗಳಲ್ಲಿ ಆರೋಗ್ಯ ತಪಾಸಣೆ (Health Screening) ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಯುಟಿ ಖಾದರ್ (UT Khader) ತಿಳಿಸಿದ್ದಾರೆ. ಸಾಂಕ್ರಾಮಿಕ ರೋಗಗಳ ಹರಡುವಿಕೆ ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಬಳಿಕ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೈಗೊಂಡ ತೀರ್ಮಾನಗಳ ಬಗ್ಗೆ ಮಾಹಿತಿ ನೀಡಿದರು.

ಆರೋಗ್ಯ ತುರ್ತು ಪರಿಸ್ಥಿತಿ ನಿರ್ವಹಣೆಗೆ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರ ಮೂಲಕ ಎಲ್ಲ ಜಿಲ್ಲೆಗಳಿಗೂ ತ್ವರಿತವಾಗಿ ಮಾಹಿತಿ ರವಾನಿಸಿ, ರೋಗ ನಿಯಂತ್ರಣ ಕ್ರಮಗಳನ್ನು ಇನ್ನಷ್ಟು ಸಮನ್ವಯದಿಂದ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಖಾದರ್ ಹೇಳಿದರು.

ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಸ್ಥಳೀಯ ಮಟ್ಟದ ಮೇಲ್ವಿಚಾರಣೆ ಅಗತ್ಯವಾಗಿರುವುದರಿಂದ, ಪ್ರತಿ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಜನಪ್ರತಿನಿಧಿಗಳನ್ನು ಒಳಗೊಂಡ ಸಮಿತಿಗಳನ್ನು ರಚಿಸಲಾಗುವುದು ಎಂದು ಸಚಿವರು ತಿಳಿಸಿದರು. ಸ್ಥಳೀಯ ಸಮಸ್ಯೆಗಳನ್ನು ತ್ವರಿತವಾಗಿ ಗುರುತಿಸಿ ಕ್ರಮ ಕೈಗೊಳ್ಳಲು ಈ ಸಮಿತಿಗಳು ನೆರವಾಗಲಿವೆ ಎಂದು ಹೇಳಿದರು.

ಎಬೋಲಾ ಕುರಿತು ಕಟ್ಟೆಚ್ಚರ: ಏರ್​ಪೋರ್ಟ್​​ನಲ್ಲಿ ಸ್ಕ್ರೀನಿಂಗ್

ಕಾಂಗೋ, ಉಗಾಂಡಾ ಹಾಗೂ ಆಫ್ರಿಕಾದ ಇತರೆ ಸೋಂಕು ಪೀಡಿತ ದೇಶಗಳಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣಗಳಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಗಡಿ ಭಾಗಗಳಲ್ಲಿಯೂ ಆರೋಗ್ಯ ಇಲಾಖೆ ನಿಗಾ ವಹಿಸಿದ್ದು, ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ ಎಂದು ಯು.ಟಿ. ಖಾದರ್ ತಿಳಿಸಿದರು.

ಮಲೇರಿಯಾ, ಡೆಂಗೀ ಪ್ರಕರಣ ಇಳಿಕೆ

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ರಾಜ್ಯದಲ್ಲಿ ಮಲೇರಿಯಾ ಪ್ರಕರಣಗಳು ಶೇ 70ರಷ್ಟು ಹಾಗೂ ಡೆಂಗೀ ಪ್ರಕರಣಗಳು ಶೇ 33ರಷ್ಟು ಕಡಿಮೆಯಾಗಿವೆ ಎಂದು ಸಚಿವರು ಮಾಹಿತಿ ನೀಡಿದರು. ಮನೆಮನೆಗೆ ತೆರಳಿ ಲಾರ್ವಾ ಸಮೀಕ್ಷೆ ನಡೆಸಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಅಗತ್ಯವಿರುವ ಲ್ಯಾಬ್ ಟೆಕ್ನಿಷಿಯನ್ ಮತ್ತು ಫಾರ್ಮಸಿಸ್ಟ್‌ಗಳ ನೇಮಕಾತಿಗೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದರೆ ಮಾಹಿತಿ ನೀಡುವುದು ಕಡ್ಡಾಯ

ಖಾಸಗಿ ಆಸ್ಪತ್ರೆಗಳಲ್ಲಿ ಸಾಂಕ್ರಾಮಿಕ ರೋಗಿಗಳಿಗೆ ಚಿಕಿತ್ಸೆ ನೀಡಿದರೆ, ಅದರ ಮಾಹಿತಿಯನ್ನು ಆರೋಗ್ಯ ಇಲಾಖೆಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ, ಸಾಂಕ್ರಾಮಿಕ ರೋಗಗಳ ಹೆಸರಿನಲ್ಲಿ ಆಸ್ಪತ್ರೆಗಳು ಅನಗತ್ಯವಾಗಿ ಹೆಚ್ಚಿನ ಶುಲ್ಕ ವಿಧಿಸದಂತೆ ನಿಗಾ ವಹಿಸಲು ಎಸ್‌ಒಪಿ (SOP) ರೂಪಿಸಲಾಗಿದೆ ಎಂದು ಖಾದರ್ ತಿಳಿಸಿದರು.

ಇದನ್ನೂ ಓದಿ: ಶಾಲಾ ಮಕ್ಕಳ ನೆಚ್ಚಿನ ಜಂಕ್ ಫುಡ್ ಮೇಲೆ ಆಹಾರ ಇಲಾಖೆ ಹದ್ದಿನ ಕಣ್ಣು: ನೂರಕ್ಕೂ ಹೆಚ್ಚು ಕಡೆ ಭರ್ಜರಿ ರೇಡ್!

ಶಾಲೆಗಳ ಸುತ್ತಮುತ್ತ ಜಂಕ್ ಫುಡ್ ಮಾರಾಟದ ಮೇಲೂ ನಿಗಾ ವಹಿಸಲಾಗುತ್ತಿದ್ದು, ಶಾಲಾ ಆವರಣಗಳಲ್ಲಿ ಜಂಕ್ ಫುಡ್ ನಿಷೇಧಿಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *