ಅಯೋಧ್ಯೆ, ಜುಲೈ 03: ಅಯೋಧ್ಯೆ ರಾಮ ಮಂದಿರ(Ram Mandir)ದ ಕಾಣಿಕೆ ಹಣ ಎಣಿಕೆ ವೇಳೆ ನಡೆದ ಕೋಟ್ಯಂತರ ರೂಪಾಯಿ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಅತ್ಯಂತ ಆಘಾತಕಾರಿ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ. ದೇವಸ್ಥಾನದ ‘ಯಾತ್ರಿಕ ಸೌಲಭ್ಯ ಕೇಂದ್ರ’ದ (PFC) 45 ದಿನಗಳ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಜಾಲಾಡಿದಾಗ, ಬಂಧಿತ 8 ಆರೋಪಿಗಳ ಪೈಕಿ ಐವರು ನಗದು ಬಂಡಲ್ಗಳನ್ನು ಅತ್ಯಂತ ಜಾಣ್ಮೆಯಿಂದ ಕದ್ದು ತಮ್ಮ ಬಟ್ಟೆ ಮತ್ತು ಸಾಕ್ಸ್ಗಳ ಒಳಗೆ ತುರುಕಿಕೊಳ್ಳುತ್ತಿದ್ದ ಭೀಕರ ದೃಶ್ಯಗಳು ಪತ್ತೆಯಾಗಿವೆ.
ಶೌಚಾಲಯದ ವೆಂಟಿಲೇಷನ್ನಲ್ಲಿ ಸಿಕ್ಕಿತ್ತು ನೋಟಿನ ಕಂತೆ
ಜೂನ್ 3 ರಂದು ದೇವಸ್ಥಾನದ ಭದ್ರತಾ ಸಿಬ್ಬಂದಿ ನಡೆಸಿದ ಹಠಾತ್ ತಪಾಸಣೆಯ ವೇಳೆ, ಎಣಿಕೆ ಏಜೆಂಟರು ಬಳಸುತ್ತಿದ್ದ ಶೌಚಾಲಯದ (Washroom) ವಾತಾಯನ ವ್ಯವಸ್ಥೆಯ ಒಳಗೆ ಬಚ್ಚಿಟ್ಟಿದ್ದ ಭಾರಿ ನಗದು ಬಂಡಲ್ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಸಿಸಿಟಿವಿ ಪರಿಶೀಲಿಸಿದಾಗ ಮೊದಲು ಅನುಕಲ್ಪ್ ಮಿಶ್ರಾ ಹಾಗೂ ನಂತರ ಉಳಿದ ಆರೋಪಿಗಳ ಕೃತ್ಯ ಜಗಜ್ಜಾಹೀರಾಯಿತು. ದುರದೃಷ್ಟವಶಾತ್ ದೇವಾಲಯದಲ್ಲಿ ಕೇವಲ 45 ದಿನಗಳ ದೃಶ್ಯಾವಳಿ ಮಾತ್ರ ಉಳಿದಿದ್ದರಿಂದ, ಈ ಕಳ್ಳತನ ದಂಧೆ ಎಷ್ಟು ತಿಂಗಳಿನಿಂದ ನಡೆಯುತ್ತಿತ್ತು ಎಂಬುದನ್ನು ಪತ್ತೆಹಚ್ಚುವುದು ಸವಾಲಾಗಿದೆ. ಪೊಲೀಸರು ಈಗಾಗಲೇ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿ ಸುಮಾರು 80 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.
ಚಂಪತ್ ರಾಯ್ ಚಾಲಕನೇ ಕಿಂಗ್ಪಿನ್; ಟ್ರಸ್ಟ್ಗೆ ರಾಜೀನಾಮೆ
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜೂನ್ 25 ರಂದು ನೀಡಿದ ದೂರಿನ ಮೇರೆಗೆ ಎಂಟು ಜನರನ್ನು ಬಂಧಿಸಲಾಗಿದೆ. ಅವಿನಾಶ್ ಶುಕ್ಲಾ, ಲವಕುಶ್ ಮಿಶ್ರಾ, ಅನುಕಲ್ಪ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಶಂಕರ್ ಮಿಶ್ರಾ, ರಾಮ್ ಶಂಕರ್ ಯಾದವ್ ಅಲಿಯಾಸ್ ತಿನ್ನು ಯಾದವ್ ಮತ್ತು ಸುಭಾಷ್ ಶ್ರೀವಾಸ್ತವ್.
ಇವರಲ್ಲಿ ತಿನ್ನು ಯಾದವ್, ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಮಾಜಿ ಚಾಲಕನಾಗಿದ್ದ, ನಿವೃತ್ತ ಬ್ಯಾಂಕ್ ಉದ್ಯೋಗಿ ಸುಭಾಷ್ ಶ್ರೀವಾಸ್ತವ್ ಶಿಫ್ಟ್ ಉಸ್ತುವಾರಿಯಾಗಿದ್ದ.
ರಾಜೀನಾಮೆ ಸಲ್ಲಿಕೆ: ಹಗರಣದ ನೈತಿಕ ಹೊಣೆ ಹೊತ್ತು ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಈಗಾಗಲೇ ತಮ್ಮ ರಾಜೀನಾಮೆ ಪತ್ರಗಳನ್ನು ರವಾನಿಸಿದ್ದಾರೆ. ಜುಲೈ 6 ರಂದು ನಡೆಯಲಿರುವ ಟ್ರಸ್ಟ್ನ ಮಹತ್ವದ ಸಭೆಯಲ್ಲಿ ಈ ರಾಜೀನಾಮೆಗಳ ಅಂಗೀಕಾರ ಹಾಗೂ ಜೀವಿತಾವಧಿ ಸದಸ್ಯರನ್ನು ತೆಗೆದುಹಾಕಲು ಬೇಕಾದ 2/3 ಬಹುಮತದ ನಿಯಮಗಳ ಕುರಿತು ಆರ್ಎಸ್ಎಸ್ (RSS) ಹಿರಿಯ ನಾಯಕರ ಸಮ್ಮುಖದಲ್ಲಿ ಅಂತಿಮ ತೀರ್ಮಾನ ಹೊರಬೀಳಲಿದೆ.
ಮತ್ತಷ್ಟು ಓದಿ: ರಾಮ ಮಂದಿರ ದೇಣಿಗೆ ಹಗರಣದ ತನಿಖೆ ವೇಳೆ ಬಯಲಾಯ್ತು ನಕಲಿ ನೇಮಕಾತಿ ದಂಧೆ, ಸಿಗದ ಉದ್ಯೋಗ ದಾಖಲೆಗಳು
ಎಸ್ಬಿಐ ಶಿಫಾರಸು ಹಾಗೂ ಏಜೆನ್ಸಿ ಲೋಪ
ಮಂದಿರದ 35 ಕಾಣಿಕೆ ಪೆಟ್ಟಿಗೆಗಳ ಹಣವನ್ನು ಎರಡು ಶಿಫ್ಟ್ಗಳಲ್ಲಿ ಎಣಿಸಲು 50 ಜನರನ್ನು ಇರಿಸಲಾಗಿತ್ತು. ವಾರಾಣಸಿ ಮೂಲದ ‘ಸೈನಿಕ್ ಸೆಕ್ಯುರಿಟೀಸ್’ ಎಂಬ ಹ್ಯೂಮನ್ ರಿಸೋರ್ಸ್ ಸಂಸ್ಥೆಯ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಈ ಎಣಿಕೆ ಸಿಬ್ಬಂದಿಗಳನ್ನು ನೇಮಿಸಿತ್ತು. ಆದರೆ, ಏಜೆನ್ಸಿಯು ಸಿಬ್ಬಂದಿಗಳ ಹಿನ್ನೆಲೆಯನ್ನು ಸರಿಯಾಗಿ ಪರಿಶೀಲಿಸಿರಲಿಲ್ಲ ಮತ್ತು ಎಸ್ಬಿಐ ಬ್ಯಾಂಕ್ ಅಧಿಕಾರಿಗಳ ಶಿಫಾರಸಿನ ಮೇರೆಗೆ ಈ ಹೆಸರುಗಳನ್ನು ಸೇರಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದ್ದು, ಬ್ಯಾಂಕ್ ನೌಕರರನ್ನೂ ತನಿಖೆಗೆ ಒಳಪಡಿಸಲಾಗಿದೆ.
ಜೇಬಿಲ್ಲದ ಸಮವಸ್ತ್ರ, ಕಟ್ಟುನಿಟ್ಟಿನ ಹೊಸ ರೂಲ್ಸ್
ಈ ಮಹಾ ಕಳ್ಳತನ ಬಯಲಾದ ಬೆನ್ನಲ್ಲೇ ರಾಮ ಮಂದಿರದ ಆಡಳಿತ ಮಂಡಳಿ ಇಡೀ ಎಣಿಕೆ ಪ್ರಕ್ರಿಯೆಯ ನಿಯಮಗಳನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಎಣಿಕೆ ಸಿಬ್ಬಂದಿಗೆ ಈಗ ಜೇಬಿಲ್ಲದ (Pocketless) ಆಕಾಶ ನೀಲಿ ಬಣ್ಣದ ವಿಶೇಷ ಗೌನ್ ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ.
ಸಿಬ್ಬಂದಿ ಕಡ್ಡಾಯವಾಗಿ ಮೀಸಲಾದ ಕೊಠಡಿಯಲ್ಲೇ ಬಟ್ಟೆ ಬದಲಾಯಿಸಿ ಎಣಿಕೆ ರೂಮ್ಗೆ ಹೋಗಬೇಕು. ಒಳಗೆ ಹೋಗುವಾಗ ಮತ್ತು ಹೊರಬರುವಾಗ ಭಾರಿ ಮೆಟಲ್ ಡಿಟೆಕ್ಟರ್ ತಪಾಸಣೆ ನಡೆಯುತ್ತದೆ. ಸಭೆಗೆ ಮುಂಚಿತವಾಗಿ ಹಿರಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಕಾರ್ಯಕರ್ತರು ಆಗಮಿಸಲು ಪ್ರಾರಂಭಿಸಿದ್ದಾರೆ.
ಜುಲೈ 6 ರಂದು ಟ್ರಸ್ಟ್ ಸಭೆ
ಅಯೋಧ್ಯೆಯ ದೇವಾಲಯದಲ್ಲಿ ದೇಣಿಗೆ ಕಳ್ಳತನ ಆರೋಪದ ತನಿಖೆಯ ಮಧ್ಯೆ, ಜುಲೈ 6 ರಂದು ನಡೆಯಲಿರುವ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಸಭೆ ಮಹತ್ವ ಪಡೆದುಕೊಂಡಿದೆ .
ಶೌಚಾಲಯಕ್ಕೂ ತಪಾಸಣೆ: ಕರ್ತವ್ಯದ ಮಧ್ಯೆ ಸಿಬ್ಬಂದಿ ಶೌಚಾಲಯಕ್ಕೆ ಹೋಗಬೇಕಾದರೂ ಸಹ ಇದೇ ಕಠಿಣ ತಪಾಸಣೆಯ ಪ್ರೋಟೋಕಾಲ್ ಅನ್ವಯವಾಗುತ್ತದೆ. ಮೂರು ವರ್ಷಗಳ ಹಿಂದೆ ಜೇಬಿಲ್ಲದ ಪ್ಯಾಂಟ್ ನಿಯಮವಿತ್ತಾದರೂ, ಕಾಲಕ್ರಮೇಣ ನೌಕರರು ಕ್ಯಾಶುಯಲ್ ಬಟ್ಟೆ ಧರಿಸಿ ಬರುವುದನ್ನು ಯಾರೂ ತಡೆದಿರಲಿಲ್ಲ, ಅದೇ ಈ ತಪ್ಪಿಗೆ ಕಾರಣವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ