ನವದೆಹಲಿ, ಜುಲೈ 30: ಕಾಕ್ರೋಚ್ ಜನತಾ ಪಕ್ಷವು (ಸಿಜೆಪಿ) ಬಹಳ ಕಡಿಮೆ ಅವಧಿಯಲ್ಲಿ ಸಾಕಷ್ಟು ಸದ್ದು ಮಾಡಿದೆ. ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ (Abhijeet Dipke) ದೆಹಲಿಯಲ್ಲಿ ನೀಟ್ ಪತ್ರಿಕೆ ಸೋರಿಕೆ ವಿಷಯದ ಕುರಿತು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಗೆ ಆರಂಭದಲ್ಲಿ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಆದರೆ, ನಂತರ ವಿದ್ಯಾರ್ಥಿಗಳಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಪ್ರತಿಭಟನೆ ಕೂಡ ಯಶಸ್ವಿಯಾಯಿತು. ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೂಡ ನೀಡಿದರು. ಇದೀಗ ಅಭಿಜೀತ್ ಮದುವೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಅಭಿಜೀತ್ ದೀಪ್ಕೆ ಅವರ ಕುಟುಂಬ ಮತ್ತು ಮದುವೆಯ ಬಗ್ಗೆ ದೊಡ್ಡ ಚರ್ಚೆಗಳು ನಡೆಯುತ್ತಿವೆ. ಅದರಲ್ಲಿ, ಅಭಿಜೀತ್ ದೀಪ್ಕೆಯ ತಾಯಿ ಅವರ ಮದುವೆಯ ಬಗ್ಗೆ ಕೆಲವು ಮಾಹಿತಿ ಕೂಡ ಹಂಚಿಕೊಂಡಿದ್ದಾರೆ. ಅಭಿಜೀತ್ ದೀಪ್ಕೆ ಯಾವಾಗ ಮದುವೆಯಾಗುತ್ತಾರೆ? ಎಂಬುದರ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್, ಎಕ್ಸ್ ಖಾತೆಗಳಿಗೆ ದೆಹಲಿ ಪೊಲೀಸರಿಂದ ನೋಟಿಸ್
ಅಭಿಜೀತ್ ದೀಪ್ಕೆ ಅವರ ತಾಯಿ, ಕಳೆದ ಕೆಲವು ದಿನಗಳಿಂದ ತಾವು ಮದುವೆ ಸಮಾರಂಭಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಅಭಿಜೀತ್ ತುಂಬಾ ಸ್ವಾಭಿಮಾನಿಯಾಗಿದ್ದು, ಮದುವೆಗೆ ಹುಡುಗಿಯ ಕುಟುಂಬದಿಂದ ವರದಕ್ಷಿಣೆಯಾಗಿ ಏನೂ ಬಯಸುವುದಿಲ್ಲ. ಆಕೆ ಬಟ್ಟೆಗಳನ್ನು ಹೊರತುಪಡಿಸಿ ಬೇರೆ ಏನೂ ತರುವುದು ಬೇಡ. ನಾವು ಭಾವಿ ಸೊಸೆಯ ಕುಟುಂಬದಿಂದ ದುಬಾರಿ ವಸ್ತುಗಳನ್ನು ಅಥವಾ ಹಣವನ್ನು ಸ್ವೀಕರಿಸುವುದಿಲ್ಲ ಎಂದು ಅಭಿಜೀತ್ ದೀಪ್ಕೆ ಅವರ ತಾಯಿ ಹೇಳಿದ್ದಾರೆ.
ನೀವು ಯಾವ ರೀತಿಯ ಚಾಣಕ್ಯ?:
ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಮೇಲೆ ಹೊರಗಿನಿಂದ ಮತ್ತು ವಿದೇಶದಿಂದ ಹಣ ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಇದು ದೊಡ್ಡ ಸಂಚಲನ ಮೂಡಿಸಿದೆ. ಆದರೆ ಈಗ ಇದೇ ವಿಷಯದ ಬಗ್ಗೆ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಸ್ಪಷ್ಟನೆ ನೀಡಿದ್ದಾರೆ. ಕಾಕ್ರೋಚ್ ಜನತಾ ಪಕ್ಷವು ಹೊರಗಿನಿಂದ ಹಣ ಪಡೆಯುತ್ತಿದೆ ಎಂದಾದರೆ ಅಮಿತ್ ಶಾ ಇದ್ದಾಗ ಇದು ಹೇಗೆ ಸಾಧ್ಯವಾಯಿತು? ಎಂಬ ಪ್ರಶ್ನೆ ನನ್ನ ಮನಸ್ಸಿಗೆ ಬರುತ್ತದೆ. ಕಾಕ್ರೋಚ್ ಜನತಾ ಪಕ್ಷವನ್ನು ಹೊರಗಿನಿಂದ ನಿಯಂತ್ರಿಸುತ್ತಿದ್ದರೆ, ಇದು ಗೃಹ ಸಚಿವ ಅಮಿತ್ ಶಾ ಅವರ ವೈಫಲ್ಯವಲ್ಲವೇ? ಹಾಗಾದರೆ ನೀವು ಯಾವ ರೀತಿಯ ಚಾಣಕ್ಯ? ಒಂದುವೇಳೆ ನಿಮ್ಮ ಆರೋಪ ನಿಜವೇ ಆದರೆ ನಿಮ್ಮ ವೈಫಲ್ಯಕ್ಕೆ ನೀವು ಕೂಡ ರಾಜೀನಾಮೆ ನೀಡಬೇಕು ಎಂದು ದೀಪ್ಕೆ ಲೇವಡಿ ಮಾಡಿದ್ದಾರೆ.
ಬಾಬಾ ರಾಮದೇವ್ಗೆ ತಿರುಗೇಟು:
ಕಾಕ್ರೋಚ್ ಜನತಾ ಪಕ್ಷವು ಆಂದೋಲನವನ್ನು ಹಿಂತೆಗೆದುಕೊಂಡಿರುವುದಾಗಿ ಘೋಷಿಸಿದ ನಂತರವೂ ಇನ್ನೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕಾಕ್ರೋಚ್ ಜನತಾ ಪಕ್ಷದ ಆಂದೋಲನದಿಂದಾಗಿ ಭಾರತಕ್ಕೆ ಮಾನಹಾನಿಯಾಗಿದೆ ಎಂದು ಬಾಬಾ ರಾಮದೇವ್ ಆರೋಪಿಸಿದರು. ಜೆನ್-ಝಡ್ ಆಂದೋಲನದಲ್ಲಿ ಬಹಳಷ್ಟು ಅವಮಾನಗಳಾಗಿವೆ ಎಂದು ಬಾಬಾ ರಾಮದೇವ್ ಆರೋಪಿಸಿದ್ದಾರೆ. ಬಾಬಾ ರಾಮದೇವ್ ಅವರ ಆರೋಪಗಳನ್ನು ಅಭಿಜಿತ್ ದೀಪ್ಕೆ ತೀವ್ರವಾಗಿ ಖಂಡಿಸಿದ್ದಾರೆ. ಈ ಆಂದೋಲನದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಯವರ ಫೋಟೋಗಳನ್ನು ಹೊತ್ತೊಯ್ಯುವುದರಿಂದ ದೇಶ ಮತ್ತು ಸಂಸ್ಕೃತಿಗೆ ಹೇಗೆ ಅವಮಾನವಾಗಿದೆ? ಎಂದು ದೀಪ್ಕೆ ಬಾಬಾ ರಾಮದೇವ್ ಅವರನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸಿಜೆಪಿ ಎಚ್ಚರಿಕೆ ಬೆನ್ನಲ್ಲೇ ಪ್ರತಿಭಟನಾರರ ಮೇಲಿನ ಕೇಸ್ ಹಿಂಪಡೆಯುವುದಾಗಿ ಬಿಹಾರ ಸರ್ಕಾರ ಘೋಷಣೆ
‘ಪತಂಜಲಿಯ ಉತ್ಪನ್ನಗಳು ಗ್ರಾಹಕರಿಗೆ ವಂಚನೆ ಮಾಡುತ್ತಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಬಾಬಾ ರಾಮದೇವ್ ಅವರು ಅದರ ಬಗ್ಗೆ ಗಮನಹರಿಸಬೇಕು. ಸಂಸ್ಕೃತಿ, ಪ್ರಜಾಪ್ರಭುತ್ವವನ್ನು ಜೆನ್-ಝಡ್ ನೋಡಿಕೊಳ್ಳುತ್ತದೆ. ನೀವು ಪತಂಜಲಿಯ ಉತ್ಪನ್ನಗಳ ಮೇಲೆ ಕಣ್ಣಿಡಬೇಕು, ಇಲ್ಲದಿದ್ದರೆ ಅದನ್ನು ಮುಚ್ಚಬೇಕಾದೀತು’ ಎಂದು ಅಭಿಜೀತ್ ತಿರುಗೇಟು ನೀಡಿದ್ದಾರೆ.
ಪೊಲೀಸರ ವಿರುದ್ಧ ವಾಗ್ದಾಳಿ:
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರ ವರ್ತನೆಯನ್ನು ಖಂಡಿಸಿದ ಅಭಿಜೀತ್ ದೀಪ್ಕೆ, ಪೊಲೀಸರು ಸಂವಿಧಾನವನ್ನು ಮಾತ್ರ ಪಾಲಿಸಬೇಕು. ಅವರು ಬಿಜೆಪಿಯ ಆದೇಶಗಳನ್ನು ಪಾಲಿಸಬಾರದು. ನೀವು ಬಿಜೆಪಿಯ ಆದೇಶ ಪಾಲಿಸುವುದೇ ಆದರೆ ನಿಮ್ಮ ಖಾಕಿ ಪ್ಯಾಂಟ್ ತೆಗೆದು, ಹಾಫ್ ಶಾರ್ಟ್ಸ್ ಧರಿಸಿ ಬಿಜೆಪಿ ಕಚೇರಿಯ ಹೊರಗೆ ನಿಂತುಕೊಳ್ಳಿ ಎಂದು ಅಭಿಜಿತ್ ದೀಪ್ಕೆ ಪೊಲೀಸರ ಕುರಿತು ವ್ಯಂಗ್ಯವಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ