‘ಧುರಂಧರ್’ (Dhurandhar) ಚಿತ್ರದ ‘ಶರಾರತ್’ ಗೀತೆಯ ಮೂಲಕ ಗಮನಸೆಳೆದ ನಟಿ ಆಯಿಷಾ ಖಾನ್ (Ayesha Khan) ಅವರನ್ನು ಮುಂಬೈ ಪೊಲೀಸರು ಬುಧವಾರ (ಜುಲೈ 22) ವಶಕ್ಕೆ ಪಡೆದಿದ್ದಾರೆ. ಮುಂಬೈನಲ್ಲಿ ನಡೆಯುತ್ತಿದ್ದ ವಿದ್ಯಾರ್ಥಿಗಳ ಪ್ರತಿಭಟನೆಗೆ (Student Protest) ಬೆಂಬಲ ಸೂಚಿಸಲು ಸ್ನೇಹಿತರೊಂದಿಗೆ ಆಗಮಿಸಿದ್ದ ನಟಿಯನ್ನು ಪೊಲೀಸರು ಬಲವಂತವಾಗಿ ವ್ಯಾನ್‌ಗೆ ತಳ್ಳಿಕೊಂಡು ಹೋಗಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಆಯಿಷಾ ಖಾನ್, ಯಾವುದೇ ಮುನ್ಸೂಚನೆ ಅಥವಾ ಕಾರಣ ನೀಡದೆ ತಮ್ಮನ್ನು ಪೊಲೀಸರು ಎಳೆದುಕೊಂಡು ಹೋದ ಘಟನೆಯನ್ನು ವಿವರವಾಗಿ ಹಂಚಿಕೊಂಡಿದ್ದಾರೆ.
ಘಟನೆ ಬಗ್ಗೆ ವಿವರ ನೀಡಿದ ನಟಿ:
ದಾದರ್‌ನಲ್ಲಿ ನಡೆಯಬೇಕಿದ್ದ ವಿದ್ಯಾರ್ಥಿ ಪ್ರತಿಭಟನೆಗೆ ಬೆಂಬಲ ಸೂಚಿಸಲು ತಾವು ಸಂಜೆ 4 ಗಂಟೆಗೆ ತೆರಳಿದ್ದಾಗಿ ಆಯಿಷಾ ಖಾನ್ ಹೇಳಿದ್ದಾರೆ. ‘ನಾವು ಸ್ಥಳಕ್ಕೆ ತಲುಪಿ ಇನ್ನೂ ಒಂದು ಮಾತನ್ನೂ ಆಡಿರಲಿಲ್ಲ, ಯಾವುದೇ ಘೋಷಣೆ ಕೂಗಿರಲಿಲ್ಲ. ಅಷ್ಟರಲ್ಲೇ ಪೊಲೀಸ್ ಅಧಿಕಾರಿಯೊಬ್ಬರು ಬಂದು ಇಲ್ಲಿ ಪ್ರತಿಭಟನೆ ಮಾಡುವಂತಿಲ್ಲ ಎಂದರು. ಮತ್ತೆ ಬೇರೆ ಏನು ಮಾರ್ಗವಿದೆ ತಿಳಿಸಿ ಅಂತ ಕೇಳಿದೆ. ಆದರೆ ಯಾವುದೇ ಮಾತುಕತೆ ನಡೆಸದೆ, ಪೊಲೀಸರು ನನ್ನ ಸಹೋದರ ಮತ್ತು ಸ್ನೇಹಿತನನ್ನು ಎಳೆದುಕೊಂಡು ಹೋದರು. ನಂತರ ಸುಮಾರು 15 ಪೊಲೀಸರು ನಮ್ಮನ್ನು ಬಲವಂತವಾಗಿ ವ್ಯಾನ್ ಹತ್ತಿಸಿದರು’ ಎಂದು ಆಯಿಷಾ ಖಾನ್ ತಿಳಿಸಿದ್ದಾರೆ.
‘ನನ್ನನ್ನು 4-5 ಮಹಿಳಾ ಪೊಲೀಸರು ಎಳೆದೊಯ್ದರು. ವ್ಯಾನ್‌ನಲ್ಲಿದ್ದಷ್ಟು ಸಮಯ ನಮ್ಮನ್ನು ಏಕೆ ವಶಕ್ಕೆ ಪಡೆದಿದ್ದೀರಿ? ನಾವು ಮಾಡಿದ ತಪ್ಪಾದರೂ ಏನು ಎಂದು ಕೇಳಿದರೂ ಯಾವುದೇ ಉತ್ತರ ಸಿಗಲಿಲ್ಲ. ದಾದರ್‌ನಿಂದ ನಮ್ಮನ್ನು ವೋರ್ಲಿಗೆ ಕರೆತಂದರು’ ಎಂದು ಆಯಿಷಾ ಅಳಲು ತೋಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ:
‘ಶಾಂತಿಯುತವಾಗಿ ರಸ್ತೆಯಲ್ಲಿ ನಿಂತಿದ್ದಕ್ಕೆ ನಮ್ಮನ್ನು ಎಳೆದಾಡಿ ವಶಕ್ಕೆ ಪಡೆಯಲಾಯಿತು. ಯಾವ ಕಾನೂನನ್ನು ನಾವು ಮುರಿದಿದ್ದೇವೆ ಎಂದು ಕೇಳಿದರೂ ಉತ್ತರ ಬರಲಿಲ್ಲ. ರಸ್ತೆಯಲ್ಲಿ ನಿಲ್ಲುವುದು ಎಂದಿನಿಂದ ಅಪರಾಧವಾಯಿತು? ಪ್ರಜಾಪ್ರಭುತ್ವದ ಹಕ್ಕುಗಳನ್ನು ರಕ್ಷಿಸುವ ಬದಲು ಪ್ರಜೆಗಳ ಮೇಲೆಯೇ ದೌರ್ಜನ್ಯ ಎಸಗಲಾಗುತ್ತಿದೆ. ಆದರೂ ನನಗೆ ಉತ್ತಮ ಭವಿಷ್ಯದ ಭರವಸೆಯಿದೆ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ‘ಧುರಂಧರ್’ ನಿರ್ದೇಶಕನ ಪತ್ನಿ ಯಾಮಿ ಗೌತಮ್ಗೆ ರಾಷ್ಟ್ರ ಪ್ರಶಸ್ತಿ: ಖುಷಿ ಹಂಚಿಕೊಂಡ ನಟಿ
ನವದೆಹಲಿಯ ಜಂತರ್ ಮಂತರ್‌ನಿಂದ ಆರಂಭವಾದ ವಿದ್ಯಾರ್ಥಿ ಪ್ರತಿಭಟನೆಗಳು ಈಗ ದೇಶದ ವಿವಿಧ ನಗರಗಳಿಗೆ ಹಬ್ಬಿದ್ದು, ಮುಂಬೈನಲ್ಲಿ ಮೂರನೇ ದಿನವೂ ಪ್ರತಿಭಟನೆ ಮುಂದುವರಿದಿದೆ. ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿದ್ದು, ಹಲವು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.