ಬೆಂಗಳೂರು, (ಆಗಸ್ಟ್ 06): ಸಂಪುಟ ಪುನಾರಚನೆ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ನಲ್ಲಿ (Karnataka Congress) ಅಸಮಾಧಾನ ಸ್ಫೋಟಗೊಂಡಿದೆ. ಸಚಿವ ಸ್ಥಾನ ಸಿಕ್ಕಿಲ್ಲವೆಂದು ಹಲವು ಹಿರಿಯ-ಕಿರಿಯ ಶಾಸಕರು ಬೇಸರಗೊಂಡಿದ್ದು, ಅವರನ್ನ ಮನವೊಲಿಸುವ ಯತ್ನವೂ ಸಹ ನಡೆದಿದೆ. ಇದರ ಮಧ್ಯೆ ಇನ್ನೊಂದೆಡೆ ಅಹಿಂದ ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಮೇಲೆ ಅಸಮಾಧಾನಗೊಂಡಿದ್ದಾರೆ. ಅದರಲ್ಲೂ ಮುಖ್ಯವಾಗಿ ತೀವ್ರ ಬೇಸರಗೊಂಡಿರುವ ಹೆಚ್ ಸಿ ಮಹದೇವಪ್ಪ ಅವರು ದೆಹಲಿಗೆ ಹಾರಿದ್ದಾರೆ.
ಸಚಿವ ಸ್ಥಾನಕ್ಕೆ ಸಿದ್ದರಾಮಯ್ಯನವರು ತಮ್ಮ ಹೆಸರು ಶಿಫಾರಸು ಮಾಡಿದ್ದಾರೆ ಎಂದು ಹಲವು ಶಾಸಕರು ನಂಬಿದ್ದರು. ಆದ್ರೆ, ಸುರ್ಜೆವಾಲಾ ಜೊತೆಗೆ ಚರ್ಚೆ ವೇಳೆ ರಾಜ್ಯ ನಾಯಕರು ಶಿಫಾರಸು ಮಾಡಿದ್ದ ಹೆಸರುಗಳು ಬಹಿರಂಗವಾಗಿದ್ದು, ಆಂತರಿಕ ಚರ್ಚೆ ವೇಳೆ ಸಿದ್ದರಾಮಯ್ಯ ,ಡಿಕೆ ಶಿವಕುಮಾರ್ ರೆಫರ್ ಮಾಡಿದ್ದ ಲಿಸ್ಟ್ ಬಿಚ್ಚಿಡಲಾಗಿದೆ. ಈ ವೇಳೆ ಸಿದ್ದರಾಮಯ್ಯ ಕೆಲವೇ ಕೆಲವು ಹೆಸರುಗಳನ್ನು ಮಾತ್ರ ಶಿಫಾರಸು ಮಾಡಿದ್ದರು ಎನ್ನುವುದು ಗೊತ್ತಾಗಿದೆ. ಅಹಿಂದ ಶಾಸಕರ ಪರವಾಗಿ ಸಿದ್ದರಾಮಯ್ಯ ಪ್ರಬಲ ವಾದ ಮಂಡಿಸಿಲ್ಲ. ಸಿದ್ದರಾಮಯ್ಯ ತಮಗೆ ಸಚಿವ ಸ್ಥಾನ ಕೊಡಿಸುತ್ತಾರೆ ಎನ್ನುವ ನಂಬಿಕೆ ಇಟ್ಟುಕೊಂಡಿದ್ದರು. ಆದ್ರೆ, ಇದೀಗ ಎಲ್ಲ ಸಚಿವ ಸ್ಥಾನಕ್ಕೆ ತಮ್ಮ ಹೆಸರುಗಳನ್ನ ಶಿಫಾರಸ್ಸು ಮಾಡಿಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಸಿದ್ದರಾಮಯ್ಯನವರ ನಡೆಗೆ ಅಸಮಾಧಾನಗೊಂಡಿದ್ದಾರೆ.