ರಜನೀಕಾಂತ್ (Rajinikanth), ಭಾರತದ ಅತಿ ದೊಡ್ಡ ಸೂಪರ್ ಸ್ಟಾರ್. ಕಳೆದ 40 ವರ್ಷಗಳಿಂದಲೂ ಅವರು ಸೂಪರ್ ಸ್ಟಾರ್ ಪಟ್ಟದಲ್ಲಿದ್ದಾರೆ. ಅವರ ಸಿನಿಮಾಗಳಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಬೆಂಗಳೂರಿನ ಗಲ್ಲಿಯೊಂದರಲ್ಲಿ ಹುಟ್ಟಿ ವಿಶ್ವವೇ ಗುರುತಿಸುವ ಸೂಪರ್ ಸ್ಟಾರ್ ಆಗಿ ಬೆಳೆದವರು ರಜನೀಕಾಂತ್. ನಟ ರಜನೀಕಾಂತ್ ಈಗಲೂ ಸಿನಿಮಾಗಳಲ್ಲಿ ಸಕ್ರಿಯವಾಗಿದ್ದಾರೆ. ಜೊತೆಗೆ ತಮ್ಮ ಜೀವನದ ಕತೆಯನ್ನು ಪುಸ್ತಕ ರೂಪಕ್ಕೆ ಇಳಿಸುತ್ತಿದ್ದಾರೆ. ರಜನೀಕಾಂತ್ ಅವರು ಕಳೆದ ಕೆಲ ವರ್ಷಗಳಿಂದ ತಮ್ಮ ಆಟೋ ಬಯೋಗ್ರಫಿ ಬರೆಯುತ್ತಿದ್ದಾರೆ. ಇದೀಗ ಅದನ್ನು ಸಿನಿಮಾ ಮಾಡುವ ಯೋಜನೆಯನ್ನೂ ಮಾಡಿದ್ದಾರೆ.
ಜೀವನದಲ್ಲಿ ಹಲವಾರು ಏಳು-ಬೀಳು. ಅವಮಾನ, ಬಹುಮಾನ, ಪ್ರೀತಿ-ದ್ವೇಷ ಎಲ್ಲವನ್ನೂ ಕಂಡಿರುವ ನಟ ರಜನೀಕಾಂತ್ ಇದೀಗ ಅದೆಲ್ಲವನ್ನೂ ದಾಖಲಿಸಲು ಮುಂದಾಗಿದ್ದಾರೆ. ರಜನೀಕಾಂತ್ ಅವರು ತಮ್ಮ ಜೀವನದ ಕತೆಯನ್ನು ಅಕ್ಷರ ರೂಪಕ್ಕೆ ಇಳಿಸುತ್ತಿದ್ದಾರೆ. ರಜನೀಕಾಂತ್ ಅವರ ಆಟೊಬಯೋಗ್ರಫಿ ಬಹುತೇಕ ಅಂತಿಮ ಹಂತದಲ್ಲಿದೆ. ಆದರೆ ಇದೀಗ ರಜನೀಕಾಂತ್ ಅವರಿಗೆ ಹೊಸ ಐಡಿಯಾ ಬಂದಿದ್ದು, ಇದೇ ಕತೆಯನ್ನು ಸಿನಿಮಾ ಸಹ ಮಾಡಲು ಮುಂದಾಗಿದ್ದಾರೆ.
ಈಗಾಗಲೇ ಹಲವು ಸಿನಿಮಾ ನಟ, ನಟಿಯರ ಜೀವನ ಸಿನಿಮಾ ಆಗಿದೆ. ಎನ್ಟಿಆರ್ ಸೇರಿದಂತೆ ಹಲವು ಮಹಾನ್ ನಟರುಗಳ ಕತೆಗಳು ಸಿನಿಮಾ ರೂಪದಲ್ಲಿ ಪ್ರೇಕ್ಷಕರ ಮುಂದೆ ಬಂದಿವೆ. ಆದರೆ ರಜನೀಕಾಂತ್ ಅವರು ತಮ್ಮದೇ ಜೀವನದ ಕತೆಯನ್ನು ಖುದ್ದು ತಾವೇ ನಿರ್ಮಿಸಲು ಮುಂದಾಗಿದ್ದು, ಈ ಕುರಿತು ಚರ್ಚೆಗಳನ್ನು ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದೇ ವರ್ಷಾಂತ್ಯದ ವೇಳೆಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ:ಚುನಾವಣೆ ಗೆದ್ದರು ಸಿಎಂ ಆಗುತ್ತಿರಲಿಲ್ಲ ರಜನೀಕಾಂತ್, ಯೋಜನೆ ಏನಾಗಿತ್ತು?
ರಜನಿಕಾಂತ್ ಪ್ರಸ್ತುತ ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಜನೀಕಾಂತ್ ನಟನೆಯ ‘ಜೈಲರ್ 2’ ಕೆಲವೇ ವಾರಗಳಲ್ಲಿ ಬಿಡುಗಡೆ ಆಗಲಿದೆ. ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಎಸ್ಜೆ ಸೂರ್ಯ, ಸೂರಜ್ ವೆಂಜಾರಮೂಡು ಮತ್ತು ವಿದ್ಯಾ ಬಾಲನ್ ಕೂಡ ನಟಿಸುತ್ತಿದ್ದಾರೆ. ರಮ್ಯಾ ಕೃಷ್ಣನ್, ಮಿರ್ನಾ ಮತ್ತು ಯೋಗಿ ಬಾಬು ಅವರು ಮೊದಲ ಭಾಗದಲ್ಲಿದ್ದ ತಮ್ಮ ಪಾತ್ರಗಳನ್ನೇ ಮುಂದುವರಿಸಲಿದ್ದಾರೆ. ಶಿವರಾಜ್ ಕುಮಾರ್, ಹೃತಿಕ್ ರೋಷನ್, ಮೋಹನ್ಲಾಲ್, ವಿಜಯ್ ಸೇತುಪತಿ ಇನ್ನೂ ಕೆಲವರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ.
‘ಜೈಲರ್ 2’ ನಂತರ, ರಜನೀಕಾಂತ್ ಅವರು ‘ಧರ್ಮನ್’ ಚಿತ್ರದಲ್ಲಿ ನಟಿಸಲಿದ್ದಾರೆ. ಅಶ್ವತ್ ಮಾರಿಮುತ್ತು ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ರಜನಿಕಾಂತ್ ವೈದ್ಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಕಮಲ್ ಹಾಸನ್ ಸಹ-ನಿರ್ಮಾಣ ಮಾಡುತ್ತಿರುವ ಈ ಪ್ರಾಜೆಕ್ಟ್ನಲ್ಲಿ ಸಿಮ್ರನ್, ರಾಶಿ ಖನ್ನಾ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಸಿನಿಮಾಗಳ ಬಳಿಕ ಕಮಲ್ ಹಾಸನ್ ಮತ್ತು ರಜನೀಕಾಂತ್ ಒಟ್ಟಿಗೆ ಒಂದು ಸಿನಿಮಾನಲ್ಲಿ ನಟಿಸಲಿದ್ದಾರೆ. ಆ ಸಿನಿಮಾವನ್ನು ನೆಲ್ಸನ್ ದಿಲೀಪ್ ನಿರ್ದೇಶನ ಮಾಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ