ಸೂರ್ಯಕುಮಾರ್ ಯಾದವ್ ನಾಯಕತ್ವಕ್ಕೆ ‘ಕುತ್ತು’ – Kannada News | Suryakumar Yadav’s T20I Captaincy Under Threat

ಭಾರತ ತಂಡಕ್ಕೆ ಟಿ20 ವಿಶ್ವಕಪ್ 2026ರ ಟ್ರೋಫಿ ತಂದುಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್ ಅವರ ಟಿ20 ಭವಿಷ್ಯ ಈಗ ಅನಿಶ್ಚಿತತೆಯ ಸುಳಿಗೆ ಸಿಲುಕಿದೆ. ಅವರ ಇತ್ತೀಚಿನ ಕಳಪೆ ಬ್ಯಾಟಿಂಗ್ ಫಾರ್ಮ್, ಹೆಚ್ಚುತ್ತಿರುವ ವಯಸ್ಸು ಮತ್ತು ಪದೇ ಪದೇ ಕಾಡುತ್ತಿರುವ ಫಿಟ್‌ನೆಸ್ ಸಮಸ್ಯೆಗಳು ಬಿಸಿಸಿಐ ಆಯ್ಕೆ ಸಮಿತಿಯನ್ನು ತೀವ್ರ ಚಿಂತೆಗೆ ದೂಡಿವೆ. ಮುಂದಿನ 2028ರ ವಿಶ್ವಕಪ್ ದೃಷ್ಟಿಯಿಂದ ಟಿ20 ತಂಡಕ್ಕೆ ಹೊಸ ನಾಯಕನನ್ನು ಹುಡುಕಲು ಅಜಿತ್ ಅಗರ್ಕರ್ ನೇತೃತ್ವದ ಸಮಿತಿಯು ಮೇ 19ರ ಗುವಾಹಟಿ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಿದ್ದು, ಸೂರ್ಯಕುಮಾರ್ ಅವರ ಸ್ಥಾನಕ್ಕೆ ಕತ್ತರಿ ಬೀಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಅಂದರೆ ಮೇ 19 ರಂದು ನಡೆಯಲಿರುವ ಸಭೆಯಲ್ಲಿ ಸೂರ್ಯಕುಮಾರ್ ಯಾದವ್ ಅವರ ಕಳಪೆ ಫಾರ್ಮ್​ ಹಾಗೂ ಭವಿಷ್ಯದ ದೃಷ್ಟಿಯಿಂದ ಹೊಸ ನಾಯಕನ ಕುರಿತಾದ ಚರ್ಚೆಗಳು ನಡೆಯಲಿದೆ. ಹೀಗಾಗಿ ಮುಂಬರುವ ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್ ಆಯ್ಕೆಯಾಗುವ ಸಾಧ್ಯತೆಯಿಲ್ಲ. ಅಲ್ಲದೆ ಮುಂಬರುವ ಟಿ20 ಸರಣಿಯೊಂದಿಗೆ ಬಿಸಿಸಿಐ ಹೊಸ ನಾಯಕನನ್ನು ಪರಿಚಯಿಸಲಿದ್ದಾರೆ ಎಂದು ವರದಿಯಾಗಿದೆ.

ಸೂರ್ಯಕುಮಾರ್ ಬದಲಾವಣೆ ಯಾಕೆ?

  • ಕಳಪೆ ಬ್ಯಾಟಿಂಗ್ ಫಾರ್ಮ್: 2025 ರ 19 ಟಿ20 ಪಂದ್ಯಗಳಲ್ಲಿ ಕೇವಲ 13.62 ಸರಾಸರಿಯಲ್ಲಿ ರನ್ ಗಳಿಸಿದ್ದ ಸೂರ್ಯಕುಮಾರ್, ಪ್ರಸ್ತುತ ಐಪಿಎಲ್ 2026 ರಲ್ಲೂ ಮುಂಬೈ ಇಂಡಿಯನ್ಸ್ ಪರ 11 ಪಂದ್ಯಗಳಿಂದ ಕೇವಲ 195 ರನ್ (ಸರಾಸರಿ 17.00) ಗಳಿಸಿ ತೀವ್ರ ನಿರಾಶೆ ಮೂಡಿಸಿದ್ದಾರೆ.
  • ವಿಶ್ವಕಪ್‌ನಲ್ಲಿ ಸಾಧಾರಣ ಪ್ರದರ್ಶನ: ಭಾರತ ಅವರ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಗೆದ್ದರೂ, ಬ್ಯಾಟರ್ ಆಗಿ ಸೂರ್ಯಕುಮಾರ್ ವೈಫಲ್ಯ ಕಂಡಿದ್ದರು. 9 ಇನಿಂಗ್ಸ್‌ಗಳಿಂದ 136.72 ರ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 242 ರನ್ ಗಳಿಸಿದ್ದರು. (ಇದರಲ್ಲಿ ಅಮೆರಿಕ ವಿರುದ್ಧದ ಒಂದೇ ಪಂದ್ಯದಲ್ಲಿ 84 ರನ್ ಸೇರಿತ್ತು).
  • ವಯಸ್ಸು ಮತ್ತು ಫಿಟ್‌ನೆಸ್ ಸಮಸ್ಯೆ: ಸೆಪ್ಟೆಂಬರ್ 2026 ಕ್ಕೆ ಅವರಿಗೆ 36 ವರ್ಷ ತುಂಬಲಿದ್ದು, 2028ರ ವಿಶ್ವಕಪ್ ದೃಷ್ಟಿಯಿಂದ ಬಿಸಿಸಿಐ ಯುವ ಆಟಗಾರರಿಗೆ ಮಣೆ ಹಾಕಲು ಬಯಸಿದೆ. ಜೊತೆಗೆ, ಅವರ ಬಲಗೈ ಮಣಿಕಟ್ಟಿನ ಗಾಯದ ಸಮಸ್ಯೆ ಪದೇ ಪದೇ ಮರುಕಳಿಸುತ್ತಿದೆ.

ಇದನ್ನೂ ಓದಿ: RCB ಪಂದ್ಯಕ್ಕೆ 80,000 ರೂ: ಐಪಿಎಲ್ ಟಿಕೆಟ್ ದಂಧೆ ಬಯಲು!

ಯಾರಾಗಲಿದ್ದಾರೆ ಹೊಸ ನಾಯಕ?

ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಬಿಸಿಸಿಐ ಈ ಕೆಳಗಿನ ಆಟಗಾರರನ್ನು ನಾಯಕತ್ವದ ರೇಸ್‌ನಲ್ಲಿ ಮುಂಚೂಣಿಯಲ್ಲಿಟ್ಟಿದೆ. ಅವರೆಂದರೆ…

  •  ಶ್ರೇಯಸ್ ಅಯ್ಯರ್: ಪಂಜಾಬ್ ಕಿಂಗ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಶ್ರೇಯಸ್ ಅಯ್ಯರ್ ಹೆಸರು ನಾಯಕತ್ವದ ರೇಸ್​ನಲ್ಲಿ ಮುಂಚೂಣಿಯಲ್ಲಿದೆ.
  • ಸಂಜು ಸ್ಯಾಮ್ಸನ್: ಟಿ20 ವಿಶ್ವಕಪ್ 2026 ರಲ್ಲಿ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ಗೆದ್ದು ಭರ್ಜರಿ ಫಾರ್ಮ್‌ನಲ್ಲಿರುವ ಸಂಜು ಸ್ಯಾಮ್ಸನ್ ಹೆಸರು ಕೂಡ ನಾಯಕತ್ವದ ರೇಸ್​ನಲ್ಲಿದೆ.
  • ಹಾರ್ದಿಕ್ ಪಾಂಡ್ಯ: ಹಿರಿಯ ಆಟಗಾರನಾಗಿ ನಾಯಕತ್ವ ವಹಿಸಿಕೊಳ್ಳಲು ಸದಾ ಸಿದ್ಧವಿರುವ ಅನುಭವಿ ಆಯ್ಕೆಯಾಗಿ ಹಾರ್ದಿಕ್ ಪಾಂಡ್ಯ ಹೆಸರು ಕೂಡ ಕೇಳಿ ಬರುತ್ತಿದೆ.
  • ಶುಭ್​ಮನ್ ಗಿಲ್: ಮೂರು ಸ್ವರೂಪಕ್ಕೂ ಏಕೈಕ ನಾಯಕನನ್ನು ಆಯ್ಕೆ ಮಾಡಲು ಮುಂದಾದರೆ ಕ್ಯಾಪ್ಟನ್ ಪಟ್ಟ ಶುಭ್​ಮನ್ ಗಿಲ್​ಗೆ ಒಲಿಯಲಿದೆ. ಏಕೆಂದರೆ ಅವರು ಈಗಾಗಲೇ ಭಾರತ ಟೆಸ್ಟ್ ಹಾಗೂ ಏಕದಿನ ತಂಡಗಳ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Source link

Leave a Reply

Your email address will not be published. Required fields are marked *