ಸೂರ್ಯವಂಶಿ ಟೀಮ್ ಇಂಡಿಯಾ ಡೆಬ್ಯೂ ವಿಳಂಬ? ಎದುರಾಯ್ತು ಅಡಚಣೆ – Kannada News

ಅಂಡರ್-19 ವಿಶ್ವಕಪ್ ಹಾಗೂ ಐಪಿಎಲ್​‌ನಲ್ಲಿ ಅಬ್ಬರಿಸಿದವರು ವೈಭವ್ ಸೂರ್ಯವಂಶಿ (Vaibhav Sooryavamshi). ಕೇವಲ 15ನೇ ವಯಸ್ಸಿಗೆ ಭಾರತ ಟಿ20 ತಂಡಕ್ಕೆ ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಆದರೆ, ಈಗ ವೈಭವ್ ಸೂರ್ಯವಂಶಿ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ ಕೊಂಚ ವಿಳಂಬವಾಗುವ ಸಾಧ್ಯತೆ ದಟ್ಟವಾಗಿದೆ. ಭಾರತ ತಂಡ ಜೂನ್ ಕೊನೆಯ ವಾರದಲ್ಲಿ ಐರ್ಲೆಂಡ್ ಪ್ರವಾಸ ಕೈಗೊಳ್ಳಬೇಕಿದೆ. ಆದರೆ, ಸದ್ಯ ಅಲ್ಲಿ ಉಂಟಾಗಿರುವ ಆಂತರಿಕ ಕಲಹದಿಂದ ಈ ಸರಣಿ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.

ಜೂನ್ 26 ಮತ್ತು 28 ರಂದು ಬೆಲ್‌ಫಾಸ್ಟ್‌ನಲ್ಲಿ ಭಾರತ ಮತ್ತು ಐರ್ಲೆಂಡ್ ನಡುವೆ ಎರಡು ಪಂದ್ಯಗಳ ಟಿ20 ಸರಣಿ ನಿಗದಿಯಾಗಿದೆ. ಆದರೆ, ಇತ್ತೀಚೆಗೆ ಅಲ್ಲಿ ನಡೆದ ಹಿಂಸಾತ್ಮಕ ವಲಸೆ ವಿರೋಧಿ ದಂಗೆಗಳಿಂದಾಗಿ ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ತಿಳಿಸಿರುವ ಐರ್ಲೆಂಡ್ ಕ್ರಿಕೆಟ್ ಮಂಡಳಿ, ಆಟಗಾರರು ಮತ್ತು ಪ್ರೇಕ್ಷಕರ ರಕ್ಷಣೆ ನಮಗೆ ಮುಖ್ಯ ಎಂದಿದೆ. ಒಂದು ವೇಳೆ ಬೆಲ್‌ಫಾಸ್ಟ್‌ನಲ್ಲಿ ಪರಿಸ್ಥಿತಿ ಹತೋಟಿಗೆ ಬಾರದಿದ್ದರೆ ಪಂದ್ಯಗಳನ್ನು ಡಬ್ಲಿನ್‌ಗೆ ಸ್ಥಳಾಂತರಿಸುವ ಆಲೋಚನೆಯೂ ಇದೆ. ಹಾಗಾದಲ್ಲಿ ಪಂದ್ಯ ನಿಗದಿತ ಸಮಯಕ್ಕೆ ನಡೆಯದೇ ವಿಳಂಬ ಆಗಬಹುದು.

ಈ ಸರಣಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ವೈಭವ್ ಸೂರ್ಯವಂಶಿ ಈ ಪಂದ್ಯದ ಮೂಲಕ ಭಾರತದ ಕ್ರಿಕೆಟ್ ತಂಡ ಸೇರಿಕೊಳ್ಳಲಿದ್ದಾರೆ. ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ (16 ವರ್ಷ 205 ದಿನಗಳು) ಅವರ 36 ವರ್ಷಗಳ ಹಳೆಯ ದಾಖಲೆಯನ್ನು ಮುರಿಯಲಿದ್ದಾರೆ.

ಐರ್ಲೆಂಡ್‌ನ ಈಗಿನ ಪರಿಸ್ಥಿತಿ ಈ ಐತಿಹಾಸಿಕ ಕ್ಷಣಕ್ಕೆ ಸದ್ಯಕ್ಕೆ ಬ್ರೇಕ್ ಹಾಕುವಂತೆ ಕಾಣುತ್ತಿದೆ. ಅಲ್ಲದೆ, ಶ್ರೇಯಸ್ ಅಯ್ಯರ್ ಅವರ ಟಿ20 ನಾಯಕತ್ವದ ಹೊಸ ಇನ್ನಿಂಗ್ಸ್ ಕೂಡ ಈ ಸರಣಿಯಿಂದಲೇ ಆರಂಭವಾಗಬೇಕಿದೆ. ಸದ್ಯಕ್ಕೆ ಪ್ರವಾಸ ರದ್ದಾಗಿಲ್ಲವಾದರೂ, ಮುಂಬರುವ ದಿನಗಳಲ್ಲಿ ಕ್ರಿಕೆಟ್ ಐರ್ಲೆಂಡ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ವೈಭವ್ ಭಾರತದ ಪ್ರವಾಸದ ಭವಿಷ್ಯ ನಿರ್ಧಾರವಾಗಲಿದೆ.

ಇದನ್ನೂ ಓದಿ: 200ರ ಸ್ಟ್ರೈಕ್​ ರೇಟ್​ನಲ್ಲಿ ಅಬ್ಬರಿಸಿದ ವೈಭವ್ ಸೂರ್ಯವಂಶಿ!

ಐರ್ಲೆಂಡ್ ಸರಣಿಗೆ ಭಾರತ ಟಿ20 ತಂಡ:

ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಹರ್ಷಿತ್ ರಾಣಾ, ಅರ್ಶ್‌ದೀಪ್ ಸಿಂಗ್, ಪ್ರಿನ್ಸ್ ಯಾದವ್, ಪ್ರಸಿದ್ ಕೃಷ್ಣ, ವೈಭವ್ ಸೂರ್ಯವಂಶಿ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *