2026 ರ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನದ ಪ್ರಯಾಣ ಸೂಪರ್ 8 ಸುತ್ತಿನಲ್ಲೇ ಅಂತ್ಯಗೊಂಡಿದೆ. ಈ ಸುತ್ತಿನಲ್ಲಿ ಕೇವಲ ಒಂದು ಪಂದ್ಯವನ್ನು ಗೆಲ್ಲಲಷ್ಟೇ ಶಕ್ತವಾದ ಪಾಕಿಸ್ತಾನ ಗ್ರೂಪ್ 2 ರಲ್ಲಿ ಮೂರನೇ ಸ್ಥಾನ ಪಡೆದು ಟೂರ್ನಿಯಿಂದ ಹೊರಬಿದ್ದಿದೆ. ಆದಾಗ್ಯೂ ಟಿ20 ವಿಶ್ವಕಪ್ನಲ್ಲಿ ಭಾಗವಹಿಸಿದ್ದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಐಸಿಸಿಯಿಂದ ಕೋಟ್ಯಂತರ ರೂಪಾಯಿಗಳ ಬಹುಮಾನವೂ ಸಿಗಲಿದೆ.
2024 ರ ಟಿ20 ವಿಶ್ವಕಪ್ಗಾಗಿ ಐಸಿಸಿ ಸರಿಸುಮಾರು 102 ಕೋಟಿ ರೂಗಳನ್ನು ಬಹುಮಾನಕ್ಕಾಗಿ ಮೀಸಲಿರಿಸಿತ್ತು. ಈ ಬಾರಿಯೂ ಅದೇ ಮೊತ್ತವನ್ನು ನಿರೀಕ್ಷಿಸಲಾಗಿದೆ. 5 ಮತ್ತು 8 ನೇ ಸ್ಥಾನಗಳ ನಡುವೆ ಟೂರ್ನಿಯನ್ನು ಮುಗಿಸಿದ ಪಾಕಿಸ್ತಾನಕ್ಕೆ ಸರಿಸುಮಾರು 3.5 ಕೋಟಿ ರೂ. ಬಹುಮಾನ ಸಿಗಲಿದೆ.
ಇದರ ಜೊತೆಗೆ ಐಸಿಸಿ, ಗುಂಪು ಹಂತ ಮತ್ತು ಸೂಪರ್ 8 ಪಂದ್ಯಗಳನ್ನು ಗೆದ್ದ ತಂಡಗಳಿಗೂ ಪ್ರತ್ಯೇಕವಾಗಿ ಬಹುಮಾನವನ್ನು ನೀಡುತ್ತದೆ. ಗೆದ್ದ ಪ್ರತಿ ಪಂದ್ಯಕ್ಕೂ (ಸೆಮಿಫೈನಲ್ ಮತ್ತು ಫೈನಲ್ ಹೊರತುಪಡಿಸಿ), ತಂಡವು ಸರಿಸುಮಾರು 2.8 ಕೋಟಿ ರೂಪಾಯಿಗಳನ್ನು ಪಡೆಯುತ್ತದೆ. ಪಾಕಿಸ್ತಾನ ಗುಂಪು ಹಂತದಲ್ಲಿ ಮೂರು ಪಂದ್ಯಗಳನ್ನು ಮತ್ತು ಸೂಪರ್ 8 ರಲ್ಲಿ ಒಂದು ಪಂದ್ಯವನ್ನು ಗೆದ್ದಿದೆ. ಹೀಗಾಗಿ, ಒಟ್ಟು ನಾಲ್ಕು ಗೆಲುವುಗಳಿಗೆ, ತಂಡವು ಸರಿಸುಮಾರು 11.2 ಕೋಟಿ ರೂಗಳನ್ನು ಪಡೆಯುತ್ತದೆ.
ಪಾಕಿಸ್ತಾನ ತಂಡವು ನೆದರ್ಲೆಂಡ್ಸ್ ತಂಡವನ್ನು 3 ವಿಕೆಟ್ಗಳಿಂದ ಸೋಲಿಸುವ ಮೂಲಕ ಪಂದ್ಯಾವಳಿಯನ್ನು ಆರಂಭಿಸಿತು. ನಂತರ ಅಮೆರಿಕ ತಂಡವನ್ನು 32 ರನ್ಗಳಿಂದ ಮಣಿಸಿತ್ತು. ಆದರೆ ಭಾರತದ ವಿರುದ್ಧ 61 ರನ್ಗಳಿಂದ ಸೋತಿದ್ದ ಪಾಕಿಸ್ತಾನ ತಂಡವು ತನ್ನ ಅಂತಿಮ ಗುಂಪು ಪಂದ್ಯವನ್ನು ಗೆದ್ದು ಸೂಪರ್ 8 ಸುತ್ತಿಗೆ ಅರ್ಹತೆ ಪಡೆದುಕೊಂಡಿತ್ತು. ಆದಾಗ್ಯೂ, ಸೂಪರ್ 8 ಸುತ್ತಿನಲ್ಲಿ ತಂಡದ ಪ್ರದರ್ಶನ ಉತ್ತಮವಾಗಿರಲಿಲ್ಲ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಸೂಪರ್8 ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ನಂತರ ನಡೆದಿದ್ದ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 2 ವಿಕೆಟ್ಗಳ ಸೋಲು ಕಂಡಿತ್ತು. ಇದು ಪಾಕ್ ತಂಡದ ಸೆಮಿಫೈನಲ್ ಆಸೆಗೆ ದೊಡ್ಡ ಹೊಡೆತ ನೀಡಿತ್ತು ಆದಾಗ್ಯೂ ಕೊನೆಯ ಅವಕಾಶವೆಂಬಂತೆ ಪಾಕ್ ತಂಡಕ್ಕೆ ಶ್ರೀಲಂಕಾ ವಿರುದ್ಧ ದೊಡ್ಡ ಅಂತರದ ಗೆಲುವು ದಾಖಲಿಸಿದರೆ, ಸೆಮೀಸ್ಗೇರುವ ಅವಕಾಶವಿತ್ತು. ಆದರೆ ಆ ರೀತಿ ಮಾಡುವಲ್ಲಿ ಪಾಕ್ ವಿಫಲವಾಯಿತು.




