Headlines

ಸೆಲ್ಫಿ ಕ್ಲಿಕ್ ಮಾಡುವಾಗ ‘ಪೀಸ್’ ಸೈನ್ ತೋರಿಸ್ತೀರಾ? ಹುಷಾರ್! ನಿಮ್ಮ ಬೆರಳಚ್ಚು ಕದ್ದು ಬ್ಯಾಂಕ್ ಖಾತೆ ಖಾಲಿ ಮಾಡ್ತಾರೆ ಖದೀಮರು! – Kannada News | AI Cyber Threat: How Flashing a Peace Sign in Selfies Can Risk Your Fingerprint Data

ಸೆಲ್ಫಿ ಕ್ಲಿಕ್ ಮಾಡುವಾಗ ‘ಪೀಸ್’ ಸೈನ್ ತೋರಿಸ್ತೀರಾ? ಹುಷಾರ್!

ಬೆಂಗಳೂರು, ಮೇ 16: ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಅಥವಾ ಸೆಲ್ಫಿ ಪೋಸ್ಟ್ ಮಾಡುವಾಗ ಸಾಮಾನ್ಯವಾಗಿ ‘ಪೀಸ್’ ಸೈನ್ ತೋರಿಸುವ ಅಭ್ಯಾಸ ಹಲವರಿಗೆ ಇರುತ್ತದೆ. ನಿಮ್ಮ ಈ ಒಂದು ಸಣ್ಣ ಸ್ಟೈಲ್ ನಿಮ್ಮ ಇಡೀ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಲು ಹ್ಯಾಕರ್‌ಗಳಿಗೆ (Hackers) ದಾರಿ ಮಾಡಿಕೊಡಬಹುದು. ಹೌದು, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ನಿಮ್ಮ ಫೋಟೋಗಳಿಂದಲೇ ಬೆರಳಚ್ಚುಗಳನ್ನು (Fingerprints) ಕದಿಯುವ ಹೊಸ ವಂಚನೆ ಜಾಲ ಈಗ ಜಾಗತಿಕವಾಗಿ ಆತಂಕ ಮೂಡಿಸಿದೆ.

ಮುಖ್ಯಾಂಶಗಳು

  • ಫೋಟೋಗಳಲ್ಲಿ ಪೀಸ್ ಸೈನ್ ತೋರಿಸುವುದರಿಂದ ಬೆರಳಚ್ಚು ಕದಿಯುವ ಹೊಸ ಎಐ ಆತಂಕ.
  • ಗೂಗಲ್ ವರದಿ ಪ್ರಕಾರ ಎಐ ಆಧಾರಿತ ಹ್ಯಾಕಿಂಗ್ ಜಾಗತಿಕ ಸೈಬರ್ ದಾಳಿಯಾಗಿ ಮಾರ್ಪಾಡು.
  • ದುರ್ಬಳಕೆ ತಡೆಯಲು ಶಕ್ತಿಶಾಲಿ ಮೈಥೋಸ್ ಎಐ ಬಿಡುಗಡೆ ನಿರಾಕರಿಸಿದ ಆಂಥ್ರೊಪಿಕ್ ಸಂಸ್ಥೆ.

ಚೀನಾ ರಿಯಾಲಿಟಿ ಶೋನಲ್ಲಿ ಬಯಲಾಯ್ತು ಸತ್ಯ!

ಕಳೆದ ತಿಂಗಳು ಚೀನಾದ ಉದ್ಯೋಗ ಆಧಾರಿತ ರಿಯಾಲಿಟಿ ಶೋ ಒಂದರಲ್ಲಿ ಭದ್ರತಾ ತಜ್ಞ ಲೀ ಚಾಂಗ್ ಎಂಬುವವರು ಈ ಆಘಾತಕಾರಿ ಸತ್ಯವನ್ನು ಜಗತ್ತಿನ ಮುಂದೆ ಇಟ್ಟಿದ್ದಾರೆ. ಸೆಲೆಬ್ರಿಟಿ ಒಬ್ಬರ ಸಾಮಾನ್ಯ ಸೆಲ್ಫಿ ಫೋಟೋವನ್ನು ಬಳಸಿ, ಅದರಲ್ಲಿರುವ ‘ಪೀಸ್’ ಸೈನ್ ಮೂಲಕ ಬೆರಳಚ್ಚಿನ ಮಾಹಿತಿಯನ್ನು ಹೇಗೆ ಸುಲಭವಾಗಿ ಕದಿಯಬಹುದು ಎಂಬುದನ್ನು ಅವರು ಲೈವ್ ಆಗಿ ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ವರದಿ ಮಾಡಿದೆ.

ಕ್ಯಾಮೆರಾ ಲೆನ್ಸ್‌ನಿಂದ ಸುಮಾರು 1.5 ಮೀಟರ್ (ಸುಮಾರು 5 ಅಡಿ) ಒಳಗೆ ಬೆರಳಿನ ಮುಂಭಾಗದ ಭಾಗವು ನೇರವಾಗಿ ಕಾಣಿಸುವಂತೆ ಫೋಟೋ ತೆಗೆದರೆ, ಅದರಿಂದ ಅತ್ಯಂತ ಸ್ಪಷ್ಟವಾಗಿ ಫಿಂಗರ್‌ಪ್ರಿಂಟ್ ಡೇಟಾವನ್ನು ಪಡೆದುಕೊಳ್ಳಬಹುದು. ಇನ್ನು 1.5 ರಿಂದ 3 ಮೀಟರ್ ದೂರದಿಂದ ತೆಗೆದ ಫೋಟೋಗಳಿಂದಲೂ ಅರ್ಧದಷ್ಟು ಬೆರಳಚ್ಚಿನ ವಿವರಗಳನ್ನು ಎಐ ತಂತ್ರಜ್ಞಾನದ ಮೂಲಕ ಸುಲಭವಾಗಿ ಮರುಸೃಷ್ಟಿಸಬಹುದು ಎಂದು ಲಿ ಚಾಂಗ್ ಎಚ್ಚರಿಸಿದ್ದಾರೆ. ಬರಿಗಣ್ಣಿಗೆ ಮಸುಕಾಗಿ ಕಾಣುವ ಫೋಟೋಗಳನ್ನು ಎಐ ಪರಿಕರಗಳ (AI Tools) ಮೂಲಕ ಶಾರ್ಪ್ ಮಾಡಿ, ಹ್ಯಾಕರ್‌ಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಫಿಂಗರ್‌ಪ್ರಿಂಟ್ ಮತ್ತು ಫೇಸ್ ಲಾಕ್‌ನಂತಹ ಬಯೋಮೆಟ್ರಿಕ್ ಡೇಟಾವನ್ನು ಬದಲಾಯಿಸಲು ಸಾಧ್ಯವಿಲ್ಲದ ಕಾರಣ, ಇದು ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು.

ಕೈಗಾರಿಕಾ ಮಟ್ಟದ ದಂಧೆಯಾದ ಎಐ ಹ್ಯಾಕಿಂಗ್!

ಗೂಗಲ್‌ನ ಥ್ರೆಟ್ ಇಂಟೆಲಿಜೆನ್ಸ್ ಗ್ರೂಪ್ (Google’s Threat Intelligence Group) ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಕೇವಲ ಮೂರೇ ತಿಂಗಳಲ್ಲಿ ಎಐ ಆಧಾರಿತ ಹ್ಯಾಕಿಂಗ್ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಚೀನಾ, ಉತ್ತರ ಕೊರಿಯಾ ಮತ್ತು ರಷ್ಯಾದಂತಹ ದೇಶಗಳ ಸೈಬರ್ ಅಪರಾಧಿಗಳು ಹಾಗೂ ಸರ್ಕಾರಿ ಪ್ರಾಯೋಜಿತ ಹ್ಯಾಕರ್‌ಗಳು ಮುಕ್ತವಾಗಿ ಸಿಗುವ ಜೆಮಿನಿ (Gemini), ಕ್ಲೋಡ್ (Claude) ಮತ್ತು ಓಪನ್ ಏಐ (OpenAI) ನಂತಹ ಜನಪ್ರಿಯ ಎಐ ಮಾಡೆಲ್‌ಗಳನ್ನು ಬಳಸಿಕೊಂಡು ಅಕ್ರಮ ಎಸಗುತ್ತಿದ್ದಾರೆ.

ಹ್ಯಾಕರ್‌ಗಳು ತಮ್ಮ ದಾಳಿಯ ವೇಗ ಮತ್ತು ತಾಂತ್ರಿಕತೆಯನ್ನು ಹೆಚ್ಚಿಸಲು ಎಐ ಬಳಸುತ್ತಿದ್ದಾರೆ. ಇದರಿಂದಾಗಿ ಅವರು ಹೆಚ್ಚು ಅಪಾಯಕಾರಿ ಮಾಲ್‌ವೇರ್ (Malware) ಸೃಷ್ಟಿಸುತ್ತಿದ್ದಾರೆ ಎಂದು ಗೂಗಲ್ ಗ್ರೂಪ್‌ನ ಮುಖ್ಯ ವಿಶ್ಲೇಷಕ ಜಾನ್ ಹಲ್ಟ್‌ಕ್ವಿಸ್ಟ್ ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ ಕ್ಯೂಆರ್ ಕೋಡ್ ಮೆನು ಬಳಸಿ ಫುಡ್​ ಆರ್ಡರ್​ ಮಾಡಿದ ಯುವತಿ; ಮಧ್ಯರಾತ್ರಿ ರೆಸ್ಟೋರೆಂಟ್ ಸಿಬ್ಬಂದಿಯಿಂದ ಮೆಸೇಜ್​ ಮೂಲಕ ಕಿರುಕುಳ!

ಬಿಡುಗಡೆಯಾಗದ ಅತ್ಯಂತ ಶಕ್ತಿಶಾಲಿ ‘ಮೈಥೋಸ್’ (Mythos) ಎಐ!

ಎಐ ತಂತ್ರಜ್ಞಾನ ಎಷ್ಟು ಅಪಾಯಕಾರಿಯಾಗಿ ಬೆಳೆಯುತ್ತಿದೆ ಎಂದರೆ, ಪ್ರಮುಖ ತಂತ್ರಜ್ಞಾನ ಸಂಸ್ಥೆಯಾದ ಆಂಥ್ರೊಪಿಕ್ (Anthropic) ಕಳೆದ ತಿಂಗಳು ತನ್ನ ಹೊಸ ಎಐ ಮಾಡೆಲ್ ‘ಮೈಥೋಸ್’ ಅನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಲು ನಿರಾಕರಿಸಿದೆ. ಈ ತಂತ್ರಜ್ಞಾನವು ದುಷ್ಟರ ಕೈ ಸೇರಿದರೆ ಜಾಗತಿಕ ಭದ್ರತೆ, ಹಣಕಾಸು ವ್ಯವಸ್ಥೆ ಮತ್ತು ಸರ್ಕಾರಗಳಿಗೇ ನೇರ ಮುಳುವಾಗಬಹುದು ಎಂದು ಕಂಪನಿ ಎಚ್ಚರಿಸಿದೆ. ಹಾಗಾಗಿ ಇನ್ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಹೈ-ರೆಸಲ್ಯೂಶನ್ ಫೋಟೋಗಳನ್ನು ಹಾಕುವ ಮುನ್ನ ಜಾಗ್ರತೆ ವಹಿಸಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:58 pm, Sat, 16 May 26

Source link

Leave a Reply

Your email address will not be published. Required fields are marked *