Headlines

ಸೈಬರ್​​ ವಂಚಕರ ಮಾತು ನಂಬಿ 22 ಲಕ್ಷ ರೂಪಾಯಿ ಕಳೆದುಕೊಂಡ ನಿವೃತ್ತ ಬ್ಯಾಂಕ್ ನೌಕರ – Kannada News | Udupi: Retired Bank Employee Cheated of ₹22 Lakh in Digital Arrest Scam by Imposters Posing as ED and CBI Officers

ಉಡುಪಿ, ಜುಲೈ, 19: ಡಿಜಿಟಲ್​​ ವಂಚನೆಗಳ ಬಗ್ಗೆ ಪೊಲೀಸರಿಂದ ಸಾಕಷ್ಟು ಜಾಗೃತಿ ಬಳಿಕವೂ, ದುರ್ದೈವವೆಂಬಂತೆ ವಂಚನೆ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಈ ನಡುವೆ ಸೈಬರ್ ಕ್ರೈಂ, ಜಾರಿ ನಿರ್ದೇಶನಾಲಯ (ED) ಹಾಗೂ ಸಿಬಿಐ ಅಧಿಕಾರಿಗಳೆಂದು ನಂಬಿಸಿ ಕರೆ ಮಾಡಿದ್ದ ಸೈಬರ್​​ ವಂಚಕರು 76 ವರ್ಷದ ನಿವೃತ್ತ ಬ್ಯಾಂಕ್ ನೌಕರನಿಂದ ಬರೋಬ್ಬರಿ 22 ಲಕ್ಷ ರೂಪಾಯಿ ಲಪಟಾಯಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ವಂಚನೆ ನಡೆದಿದ್ದು ಹೇಗೆ?

ದೂರಿನಲ್ಲಿ ತಿಳಿಸಿರುವಂತೆ, ಜುಲೈ 10ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್ ವಿಡಿಯೋ ಕರೆ ಬಂದಿದೆ. ಕರೆ ಸ್ವೀಕರಿಸಿದಾಗ ಪೊಲೀಸ್ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬ ತಾನು ಮುಂಬೈನ ಕೊಲಾಬಾ ಸೈಬರ್ ಕ್ರೈಂ ಘಟಕದ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ಎನ್ನಲಾಗಿದೆ. ಬಳಿಕ, ದೂರುದಾರರ ಹೆಸರಿನಲ್ಲಿ ಮುಂಬೈನಲ್ಲಿ ಬ್ಯಾಂಕ್ ಖಾತೆಯಿದ್ದು, ಆ ಖಾತೆ ಮೂಲಕ ನೂರಾರು ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ನಡೆದಿದೆ ಎಂದು ಆರೋಪಿಸಿ ಆತಂಕ ಸೃಷ್ಟಿಸಿದ್ದಾನೆ.

ಇದನ್ನೂ ಓದಿ: ಕರಾವಳಿ ಕಂಬಳ ಆಯೋಜಕರಿಗೆ ಸರ್ಕಾರ ಗುಡ್​ನ್ಯೂಸ್​​! 1.15 ಕೋಟಿ ರೂ ಅನುದಾನ ಘೋಷಣೆ

ಇದಾದ ನಂತರ ಜುಲೈ 11ರಿಂದ 16ರವರೆಗೆ, ಎಡಿಜಿಪಿ ವಿಶ್ವಾಸ್ , ಇಡಿ ಅಧಿಕಾರಿ ಅನಿಲ್ ಕುಮಾರ್ ಹಾಗೂ ಸೈಬರ್ ಅಧಿಕಾರಿಗಳೆಂದು ಹೇಳಿಕೊಂಡು ಹಲವು ಬಾರಿ ವಾಟ್ಸಾಪ್ ಕರೆ ಮಾಡಿ, ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಪರಿಶೀಲನೆಗಾಗಿ ಆರ್‌ಟಿಜಿಎಸ್ ಮೂಲಕ ವರ್ಗಾಯಿಸಬೇಕೆಂದು ನಂಬಿಸಿದ್ದಾರೆ. ಅವರ ಮಾತನ್ನು ನಂಬಿದ ನಿವೃತ್ತ ಬ್ಯಾಂಕ್ ನೌಕರ, ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗೆ ಒಟ್ಟು 22 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದಾರೆ.

ವಂಚನೆ ನಡೆದಿರುವುದು ಗೊತ್ತಾದ ಬಳಿಕ ಅವರು ಸಿಇಎನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(D) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್‌ಗಳು 114(4), 319(2), 308(2) ಮತ್ತು 318(4) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದು ದಿ ಟೈಮ್ಸ್​​ ಆಫ್​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:46 pm, Sun, 19 July 26

Source link

Leave a Reply

Your email address will not be published. Required fields are marked *