ವಿಶ್ವದ ಪ್ರತಿಷ್ಠಿತ ಟೆನಿಸ್ ಟೂರ್ನಿ ವಿಂಬಲ್ಡನ್ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈ ಮುಕ್ತಾಯಕ್ಕೂ ಮುನ್ನವೇ 23 ವರ್ಷದ ಯುವ ಆಟಗಾರ ಆರ್ಥರ್ ಫೆರಿ ಹೊಸ ಇತಿಹಾಸ ನಿರ್ಮಿಸಿ ನಿರ್ಗಮಿಸಿದ್ದಾರೆ. ಲಂಡನ್ನ ಸೆಂಟರ್ ಕೋರ್ಟ್ ಮೈದಾನದಲ್ಲಿ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್ಸ್ ಬ್ರಿಟನ್ನ ಆರ್ಥರ್ ಫೆರಿ ಹಾಗೂ ವಿಶ್ವದ ನಂ. 2 ಆಟಗಾರ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆಫ್ ಮುಖಾಮುಖಿಯಾಗಿದ್ದರು. ಈ ಪಂದ್ಯದಲ್ಲಿ ಆರ್ಥರ್ 7-6, 6-2, 6-4 ರ ನೇರ ಸೆಟ್ಗಳ ಅಂತರದಿಂದ ಸೋಲೊಪ್ಪಿಕೊಂಡರು.
ಈ ಸೋಲಿನ ಬಳಿಕ ಮೈದಾನದಿಂದ ಹೊರನಡೆಯುವಾಗ ಇಡೀ ಕ್ರೀಡಾಂಗಣ ಎದ್ದು ನಿಂತು ಚಪ್ಪಾಳೆ ತಟ್ಟುತ್ತಿತ್ತು. ಏಕೆಂದರೆ, ಅವರು ಕೇವಲ ಒಂದು ಸೋಲಾಗಿರಲಿಲ್ಲ. ಬದಲಾಗಿ ಇತಿಹಾಸ ನಿರ್ಮಿಸಿ ಹೊರ ನಡೆದ ಯುವ ಆಟಗಾರನ ಸಾಧನೆಯ ಹೆಜ್ಜೆಯಾಗಿತ್ತು.
ಹೌದು, ವೈಲ್ಡ್ಕಾರ್ಡ್ ಮೂಲಕ ಟೂರ್ನಿಗೆ ಪ್ರವೇಶ ಪಡೆದಿದ್ದ ಆರ್ಥರ್ ಫೆರಿ, ಇಡೀ ಟೆನಿಸ್ ಲೋಕವೇ ಬೆರಗಾಗುವಂತಹ ಐತಿಹಾಸಿಕ ದಾಖಲೆಗಳನ್ನು ಬರೆದು ನಿರ್ಗಮಿಸಿದ್ದಾರೆ.
ಜಾಗತಿಕ ದಾಖಲೆ ಸರಿಗಟ್ಟಿದ ಫೆರಿ:
ವಿಂಬಲ್ಡನ್ನ ದೀರ್ಘ ಇತಿಹಾಸದಲ್ಲಿ ವೈಲ್ಡ್ಕಾರ್ಡ್ ಆಟಗಾರನಾಗಿ ಪುರುಷರ ಸಿಂಗಲ್ಸ್ನಲ್ಲಿ ಸೆಮಿಫೈನಲ್ ತಲುಪಿದ ಜಗತ್ತಿನ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಆರ್ಥರ್ ಫೆರಿ ಪಾತ್ರರಾಗಿದ್ದಾರೆ. ಈ ಮುನ್ನ 25 ವರ್ಷಗಳ ಹಿಂದೆ, ಅಂದರೆ 2001ರಲ್ಲಿ ಗೋರಾನ್ ಇವಾನಿಸೆವಿಕ್ ಈ ಅಪರೂಪದ ಸಾಧನೆ ಮಾಡಿದ್ದರು.
ಆರ್ಥರ್ ಫೆರಿ ಐತಿಹಾಸಿಕ ಸಾಧನೆ:
- ಬ್ರಿಟನ್ನ ಮೊದಲ ಆಟಗಾರ: ಓಪನ್ ಎರಾ (1968) ಇತಿಹಾಸದಲ್ಲೇ ಗ್ರ್ಯಾಂಡ್ ಸ್ಲಾಮ್ನ ಕ್ವಾರ್ಟರ್ಫೈನಲ್ ಹಾಗೂ ಸೆಮಿಫೈನಲ್ ತಲುಪಿದ ಮೊದಲ ಬ್ರಿಟಿಷ್ ವೈಲ್ಡ್ಕಾರ್ಡ್ ಆಟಗಾರ ಎಂಬ ದಾಖಲೆ ಆರ್ಥರ್ ಫೆರಿ ಪಾಲಾಗಿದೆ.
- ಶ್ರೇಯಾಂಕದಲ್ಲೂ ಜಿಗಿತ: ವಿಂಬಲ್ಡನ್ ಟೂರ್ನಿ ಆರಂಭವಾಗುವ ಮುನ್ನ ವಿಶ್ವ ರ್ಯಾಂಕಿಂಗ್ನಲ್ಲಿ 114ನೇ ಸ್ಥಾನದಲ್ಲಿದ್ದ ಫೆರಿ, ಈಗ ನೇರವಾಗಿ 36ನೇ ಸ್ಥಾನಕ್ಕೆ ಜಿಗಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
- ಬ್ರಿಟಿಷ್ ನಂಬರ್ 1: ಈ ಅದ್ಭುತ ಪ್ರದರ್ಶನದ ಮೂಲಕ ಆರ್ಥರ್ ಫೆರಿ ಮೊದಲ ಬಾರಿಗೆ ಬ್ರಿಟನ್ನ ನಂಬರ್ 1 ಸಿಂಗಲ್ಸ್ ಟೆನಿಸ್ ಆಟಗಾರ ಎಂಬ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಬಲಿಷ್ಠರನ್ನೇ ಸದೆಬಡಿದ ಫೆರಿ:
ವಿಂಬಲ್ಡನ್ ಮೈದಾನದಿಂದ ಅರ್ಧ ಕಿಲೋ ಮೀಟರ್ ದೂರದದಲ್ಲೇ ನೆಲೆಸಿರುವ ಆರ್ಥರ್ ಫೆರಿ ಅವರಿಗೆ ಸ್ಥಳೀಯ ಅಭಿಮಾನಿಗಳ ಬೆಂಬಲವೇ ದೊಡ್ಡ ಶಕ್ತಿಯಾಗಿತ್ತು. ಕ್ವಾರ್ಟರ್ಫೈನಲ್ನಲ್ಲಿ ವಿಶ್ವದ 9ನೇ ಶ್ರೇಯಾಂಕದ ಫ್ಲಾವಿಯೊ ಕೊಬೊಲ್ಲಿ ಅವರನ್ನು ಸೀದಾ ಸೆಟ್ಗಳಲ್ಲಿ ಧೂಳೀಪಟ ಮಾಡಿದ್ದ ಫೆರಿ, ಅದಕ್ಕೂ ಮುನ್ನ ಜಿಜೌ ಬರ್ಗ್ಸ್ ಮತ್ತು ಮಾಜಿ ವಿಶ್ವ ನಂ. 3 ಆಟಗಾರ ಗ್ರಿಗರ್ ಡಿಮಿಟ್ರೋವ್ ವಿರುದ್ಧ 5 ಸೆಟ್ಗಳ ಭೀಕರ ಹೋರಾಟ ನಡೆಸಿ ಜಯಭೇರಿ ಬಾರಿಸಿದ್ದರು.
ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ IPL ಪಂದ್ಯ!
ಸೆಮಿಫೈನಲ್ನಲ್ಲಿ ಝ್ವೆರೆಫ್ ಅವರ ಅನುಭವದ ಆಟದ ಮುಂದೆ ಫೆರಿ ಅವರ ಹೋರಾಟ ಅಂತ್ಯಗೊಂಡಿರಬಹುದು. ಆದರೆ ವೈಲ್ಡ್ಕಾರ್ಡ್ ಆಟಗಾರನೊಬ್ಬ ಸೆಮಿಫೈನಲ್ವರೆಗೆ ಬಂದು ಜಗತ್ತಿನ ದಿಗ್ಗಜರಿಗೆ ನಡುಕ ಹುಟ್ಟಿಸಿದ್ದು ಸುಲಭದ ಮಾತಲ್ಲ. ಹೀಗಾಗಿಯೇ ಸೋತರೂ ಆರ್ಥರ್ ಕೋಟ್ಯಂತರ ಟೆನಿಸ್ ಪ್ರೇಮಿಗಳ ಹೃದಯ ಗೆದ್ದಿದ್ದಾರೆ. ಈ ಮೂಲಕ ಮುಂಬರುವ ಯುಎಸ್ ಓಪನ್ ಟೂರ್ನಿಗೆ ಜಾಗತಿಕ ಟೆನಿಸ್ನ ಹೊಸ ಭರವಸೆಯಾಗಿ ಹೊರಹೊಮ್ಮಿದ್ದಾರೆ.
Published On – 8:00 am, Sat, 11 July 26