ನಟಿ ದೀಪಿಕಾ ಪಡುಕೋಣೆ ಅವರ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಸ್ಟೋರಿಯೊಂದು ವೈರಲ್ ಆಗಿದೆ. ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರಿಗೆ ದೀಪಿಕಾ ಬೆಂಬಲ ನೀಡಿದ್ದಾರೆ ಎಂದು ಇದರಲ್ಲಿ ಬಿಂಬಿಸಲಾಗಿದೆ. ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಅದನ್ನು ಡಿಲೀಟ್ ಮಾಡಿದ್ದಾರೆ ಎಂದೂ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಆದರೆ, ದೀಪಿಕಾ ಪಡುಕೋಣೆ ಈ ರೀತಿಯ ಯಾವುದೇ ಪೋಸ್ಟ್ ಹಾಕಿಲ್ಲ. ಕಳೆದ ಆರು ತಿಂಗಳಲ್ಲಿ ಅವರ ಹೆಸರಿನಲ್ಲಿ ಹರಿದಾಡುತ್ತಿರುವ ಎರಡನೇ ನಕಲಿ ಸ್ಕ್ರೀನ್ಶಾಟ್ ಇದಾಗಿದೆ.
ವೈರಲ್ ಪೋಸ್ಟ್ನಲ್ಲೇನಿದೆ?
ವೈರಲ್ ಆಗಿರುವ ನಕಲಿ ಫೋಟೋದಲ್ಲಿ ಸೋನಂ ವಾಂಗ್ಚುಕ್ ಅವರ ಚಿತ್ರವಿದೆ. ‘ಅವರು ಉಪವಾಸ ಮಾಡುತ್ತಿದ್ದಾರೆ, ನಾವು ಸ್ಕ್ರಾಲ್ ಮಾಡುತ್ತಿದ್ದೇವೆ’ ಎಂಬ ಬರಹ ಇಲ್ಲಿದೆ. ‘ಪ್ರಜಾಪ್ರಭುತ್ವದ ಕರಾಳ ದಿನಗಳಲ್ಲಿ ನಾವಿದ್ದೇವೆ. ಸೋತ ನಾಯಕನನ್ನು ವೈಭವೀಕರಿಸಲು ಎಷ್ಟು ಸಿನಿಮಾಗಳನ್ನು ಮಾಡಿದರೂ ಸತ್ಯ ಬದಲಾಗುವುದಿಲ್ಲ’ ಎಂದು ದೀಪಿಕಾ ಬರೆದುಕೊಂಡಿದ್ದಾರೆ ಎಂದು ಸುಳ್ಳು ಬಿಂಬಿಸಲಾಗಿದೆ.
We all know its AI but lets pretend otherwise https://t.co/g0m099J3wr
— Tarvampirehunt (@TarVampirehunt) July 15, 2026
ಅಸಲಿಯತ್ತೇನು?
ದೀಪಿಕಾ ಅವರ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಯಾವುದೇ ಪೋಸ್ಟ್ ಇಲ್ಲ. ವೈರಲ್ ಆಗಿರುವ ಸ್ಕ್ರೀನ್ಶಾಟ್ ಅನ್ನು ಎಐ ಬಳಸಿ ಎಡಿಟ್ ಮಾಡಲಾಗಿದೆ. ಈ ರೀತಿಯ ಯಾವುದೇ ಪೋಸ್ಟ್ ಕ್ರಿಯೇಟ್ ಆಗಿಯೇ ಇಲ್ಲ ಎಂದು ವರದಿಗಳು ಖಚಿತಪಡಿಸಿವೆ. ಸದ್ಯಕ್ಕೆ ದೀಪಿಕಾ ಪಡುಕೋಣೆ ಸೇರಿದಂತೆ ಆಲಿಯಾ ಭಟ್, ಅಮೀರ್ ಖಾನ್ ಅಥವಾ ಶಾರುಖ್ ಖಾನ್ ಯಾರೂ ಕೂಡ ಸೋನಂ ವಾಂಗ್ಚುಕ್ ಹೋರಾಟದ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ.
ಈ ಹಿಂದೆ ಮಾರ್ಚ್ ತಿಂಗಳಿನಲ್ಲೂ ದೀಪಿಕಾ ಹೆಸರಿನಲ್ಲಿ ಇಂತಹುದೇ ನಕಲಿ ಸ್ಕ್ರೀನ್ಶಾಟ್ ವೈರಲ್ ಆಗಿತ್ತು. ರಣವೀರ್ ಸಿಂಗ್ ಅವರ ‘ಧುರಂಧರ್’ ಚಿತ್ರದ ಬಗ್ಗೆ ದೀಪಿಕಾ ನೆಗೆಟಿವ್ ರಿವ್ಯೂ ಕೊಟ್ಟಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು.
ಸೆಲೆಬ್ರಿಟಿಗಳ ಪಾಲಿಗೆ ಎಐ (AI) ಎಷ್ಟು ಡೇಂಜರ್?
ಈ ಇಡೀ ಘಟನೆ ಡಿಜಿಟಲ್ ಲೋಕದ ಕರಾಳ ಮುಖವನ್ನು ಪರಿಚಯಿಸಿದೆ. ಮುಂದಿನ ದಿನಗಳಲ್ಲಿ ಎಐ (ಕೃತಕ ಬುದ್ಧಿಮತ್ತೆ) ಮತ್ತು ಎಡಿಟಿಂಗ್ ತಂತ್ರಜ್ಞಾನ ಎಷ್ಟು ಅಪಾಯಕಾರಿಯಾಗಬಹುದು ಎಂಬುದಕ್ಕೆ ಇದು ಸಾಕ್ಷಿ. ತಂತ್ರಜ್ಞಾನ ಬೆಳೆದಂತೆ ಇಂತಹ ಸೈಬರ್ ವಂಚನೆಗಳು ಮತ್ತು ನಕಲಿ ಸುದ್ದಿಗಳು ಸೆಲೆಬ್ರಿಟಿಗಳ ನೆಮ್ಮದಿ ಕೆಡಿಸುತ್ತಿರುವುದು ಮಾತ್ರ ಸುಳ್ಳಲ್ಲ.
ಇದನ್ನೂ ಓದಿ: ಅಪರೂಪಕ್ಕೆ ದೀಪಿಕಾ ಪಡುಕೋಣೆಯನ್ನು ಕೊಂಡಾಡಿದ ಕಂಗನಾ ರನೌತ್
ಸುಲಭವಾಗಿ ಸೃಷ್ಟಿಯಾಗುವ ಸುಳ್ಳು: ಸೆಲೆಬ್ರಿಟಿಗಳ ಹೆಸರಿನಲ್ಲಿ ನಕಲಿ ಪ್ರೊಫೈಲ್ ಮತ್ತು ಸ್ಕ್ರೀನ್ಶಾಟ್ಗಳನ್ನು ಸೃಷ್ಟಿಸುವುದು ಈಗ ತುಂಬಾ ಸುಲಭವಾಗಿದೆ.
ಕ್ಷಣಾರ್ಧದಲ್ಲಿ ಹಾಳಾಗುವ ಇಮೇಜ್: ಸೆಲೆಬ್ರಿಟಿಗಳು ಆಡದ ಮಾತುಗಳನ್ನು ಅವರದ್ದೇ ಎಂದು ಬಿಂಬಿಸಿ ಇಮೇಜ್ ಹಾಳು ಮಾಡುವ ಹುನ್ನಾರ ನಡೆಯುತ್ತಿದೆ.
ರಾಜಕೀಯ ದುರ್ಬಳಕೆ: ಸೆಲೆಬ್ರಿಟಿಗಳನ್ನು ತಮಗೆ ಬೇಕಾದ ರಾಜಕೀಯ ವಿವಾದಗಳಿಗೆ ಎಳೆದು ತರಲು ಇಂತಹ ತಂತ್ರಜ್ಞಾನ ಬಳಕೆಯಾಗುತ್ತಿದೆ.
ನಿಜ ಯಾವುದು, ಸುಳ್ಳು ಯಾವುದು ತಿಳಿಯುವುದಿಲ್ಲ: ಸಾಮಾನ್ಯ ಜನರಿಗೆ ಎಡಿಟೆಡ್ ಫೋಟೋ ಮತ್ತು ಅಸಲಿ ಫೋಟೋಗಳ ವ್ಯತ್ಯಾಸ ಕಂಡುಹಿಡಿಯುವುದು ಕಷ್ಟವಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.