ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ (Sonam wangchuk) ಅವರು ಕಳೆದ 19 ದಿನಗಳಿಂದ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗುತ್ತಿದೆ. ಬಾಲಿವುಡ್ನ ನಟ-ನಟಿಯರು ವಾಂಗ್ಚುಕ್ ಅವರ ಹೋರಾಟದ ಬಗ್ಗೆ ಮೌನವಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆ ಸಹ ವ್ಯಕ್ತವಾಗಿದೆ. ಆದರೆ ಇತ್ತೀಚೆಗೆ ಕೆಲ ಬಾಲಿವುಡ್ ಮಂದಿ ಸೋನಂ ಅವರಿಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೀಗ ಖ್ಯಾತ ನಟಿ ಸೋನಾಕ್ಷಿ ಸಿನ್ಹ ಅವರು ಸೋನಂ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದು, ಸರ್ಕಾರ ಕೂಡಲೇ ಅವರೊಟ್ಟಿಗೆ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಸೋನಾಕ್ಷಿ ಮಾತ್ರವೇ ಅಲ್ಲದೆ, ಖ್ಯಾತ ಕಮಿಡಿಯನ್ ಸಮಯ್ ರೈನಾ ಸಹ ಸೋನಂ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸೋನಾಕ್ಷಿ ಸಿನ್ಹಾ ಅವರು ಸಹ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಸಾಮಾನ್ಯವಾಗಿ ತಾವು ಇಂತಹ ವಿಷಯಗಳ ಬಗ್ಗೆ ಹೇಳಿಕೆಗಳನ್ನು ನೀಡದಿದ್ದರೂ, ಈಗ ಮೌನವಾಗಿರುವುದು ತಮಗೆ ಕಷ್ಟವಾಗಿದೆ ಎಂದು ಹೇಳಿದ್ದಾರೆ. ‘ಸೋನಮ್ ವಾಂಗ್‌ಚುಕ್ ನಮಗೆಲ್ಲರಿಗೂ ಪರಿಚಿತರು. ನಮ್ಮ ದೇಶಕ್ಕಾಗಿ ಅವರು ಏನು ಮಾಡಿದ್ದಾರೆ, ಅವರ ಸಾಧನೆಗಳೇನು ಮತ್ತು ಅವರು ಎಷ್ಟು ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಇಂದು ಅವರು 18 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರು ಏನನ್ನೂ ಸೇವಿಸಿಲ್ಲ. ಅವರು ಇದನ್ನು ಏಕೆ ಮಾಡುತ್ತಿದ್ದಾರೆ? ಅವರು ಮಕ್ಕಳ ಭವಿಷ್ಯಕ್ಕಾಗಿ ಅಲ್ಲಿ ಕುಳಿತಿದ್ದಾರೆ, ಆ ಭವಿಷ್ಯವು ವಿನಾಶದತ್ತ ಸಾಗುತ್ತಿದೆ ಎಂದು ಅವರು ನಂಬಿದ್ದಾರೆ. ತಮ್ಮ ಜೀವ ಕಳೆದುಕೊಂಡ ಮಕ್ಕಳಿಗಾಗಿ ಅವರು ಹೋರಾಡುತ್ತಿದ್ದಾರೆ. ಸರಿಯಾಗಿ ಕೆಲಸ ಮಾಡದ ವ್ಯವಸ್ಥೆಯ ವಿರುದ್ಧ ಅವರು ನಿಂತಿದ್ದಾರೆ’ ಎಂದು ಹೇಳಿದ್ದಾರೆ.
‘ಈ ದೇಶದ ಮಕ್ಕಳ ಭವಿಷ್ಯಕ್ಕಾಗಿ ಕಳೆದ 18 ದಿನಗಳಿಂದ ಅವರು ಏನನ್ನೂ ಸೇವಿಸಿಲ್ಲ, ಆದರೆ ಅನೇಕ ಜನರು ಮೌನವಾಗಿ ನೋಡುತ್ತಿದ್ದಾರೆ. ನನ್ನಿಂದ ಸುಮ್ಮನಿರಲು ಸಾಧ್ಯವಾಗಲಿಲ್ಲ. ಈಗ ಏನಾಗುತ್ತದೋ ಅದು ಆಗಲಿ, ಆದರೆ ನಾನು ಮೌನವಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಈ ವ್ಯಕ್ತಿ, ಏಕಾಂಗಿಯಾಗಿ, ಸಿಜೆಪಿ (CJP) ಯೊಂದಿಗೆ ಸೇರಿ ಸರಿಯಾದ ಕಾರಣಕ್ಕಾಗಿ ಧ್ವನಿ ಎತ್ತಿದ್ದಾರೆ. ನಾನು ನಮ್ಮ ದೇಶದ ಯುವಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಏಕೆ ಯಾರೂ ಕೇಳುತ್ತಿಲ್ಲ? ಯಾರಿಗೂ ಕಾಳಜಿ ಇಲ್ಲ. ಯಾರೂ ಸಂವಾದ ನಡೆಸುತ್ತಿಲ್ಲ, ಯಾರೂ ಮಾತನಾಡುತ್ತಿಲ್ಲ. ಯಾರೂ ಅವರ ಕಡೆಗೆ ತಿರುಗಿ ನೋಡುತ್ತಿಲ್ಲ’ ಎಂದು ಸೊನಾಕ್ಷಿ ಪ್ರಶ್ನೆ ಮಾಡಿದ್ದಾರೆ.
‘ನಾನು ದೇಶದ ಭವಿಷ್ಯದ ಬಗ್ಗೆ ಕಾಳಜಿ ವಹಿಸುವುದರಿಂದ ಮತ್ತು ತಾನು ದೇಶವಿರೋಧಿಯಲ್ಲದ ಕಾರಣ ಈ ವಿಷಯದ ಬಗ್ಗೆ ಮಾತನಾಡಲು ನಿರ್ಧರಿಸಿದೆ. ನೀವು ನಮಗೆ ಬಹಳ ಮುಖ್ಯ, ನೀವು ಒಂದು ರತ್ನ. ಈ ದೇಶಕ್ಕಾಗಿ ನೀವು ಮಾಡುತ್ತಿರುವ ಕೆಲಸಕ್ಕೆ ನಾನು ಎಷ್ಟು ಧನ್ಯವಾದ ಹೇಳಿದರೂ ಸಾಲದು. ನೀವು ನಿಮ್ಮ ಉಪವಾಸವನ್ನು ಮುರಿಯಿರಿ ಎಂದು ನಾನು ಹೇಳುವುದಿಲ್ಲ. ನಾನು ಕೇವಲ ಕೇಳಲು ಬಯಸುತ್ತೇನೆ, ಇದು ಯಾವಾಗ ಕೊನೆಯಾಗುತ್ತದೆ? ಈ ಮನುಷ್ಯ ಸತ್ತಾಗ ನೀವು ಎಚ್ಚರಗೊಳ್ಳುತ್ತೀರಾ? ಆಗ ಯಾರ ಜವಾಬ್ದಾರಿ ಇರುತ್ತದೆ?” ಎಂದು ಸೋನಾಕ್ಷಿ ಪ್ರಶ್ನಿಸಿದ್ದಾರೆ. ವಿಡಿಯೋದ ಕ್ಯಾಪ್ಷನ್‌ನಲ್ಲಿ, “ಇನ್ನು ನೋಡಲು ಸಾಧ್ಯವಾಗುತ್ತಿಲ್ಲ… ಮನಸ್ಸು ಒಪ್ಪುತ್ತಿಲ್ಲ. ವಾಂಗ್‌ಚುಕ್ ಸರ್, ನಾವು ನಿಮ್ಮನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ” ಎಂದು ಅವರು ಬರೆದುಕೊಂಡಿದ್ದಾರೆ.
ಕಮಿಡಿಯನ್ ಸಮಯ್ ರೈನಾ ಸಹ ಇನ್‌ಸ್ಟಾಗ್ರಾಮ್‌ನಲ್ಲಿ ಸೋನಮ್ ವಾಂಗ್‌ಚುಕ್ ಅವರ ಉಪವಾಸ ಸತ್ಯಾಗ್ರಹದ ಫೋಟೋವನ್ನು ಹಂಚಿಕೊಂಡು, ‘ಅವರು ಸುರಕ್ಷಿತವಾಗಿರಲಿ ಮತ್ತು ಈ ವಿಷಯವು ಸಂವಾದದ ಮೂಲಕ ಶೀಘ್ರವೇ ಮುಕ್ತಾಯಗೊಳ್ಳಲಿ ಎಂದು ಹಾರೈಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಅತುಲ್ ಕುಲಕರ್ಣಿ, ಪ್ರಕಾಶ್ ರಾಜ್, ಚಿನ್ಮಯಿ ಶ್ರೀಪಾದ, ಓಮಿ ವೈದ್ಯ, ಜೀನತ್ ಅಮನ್, ಅಭಯ್ ಡಿಯೋಲ್, ಸ್ವರಾ ಭಾಸ್ಕರ್, ಸೋನಿ ರಾಜ್‌ದಾನ್, ನಾಸಿರುದ್ದೀನ್ ಶಾ, ರತ್ನಾ ಪಾಠಕ್ ಶಾ, ಶಬಾನಾ ಅಜ್ಮಿ ಮತ್ತು ಇತರ ಕೆಲವು ಸೆಲೆಬ್ರಿಟಿಗಳು ಸೋನಂ ಅವರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ