Headlines

ಸೋನಮ್ ವಾಂಗ್ಚುಕ್ 3 ವಾರಗಳ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಷರತ್ತು ವಿಧಿಸಿದ ಪತ್ನಿ – Kannada News | Sonam Wangchuk: Wife Sets Conditions to End 21 Day Hunger Strike and Demands NEET Scam Action

ನವದೆಹಲಿ, ಜುಲೈ 20: ದೆಹಲಿಯ ಜಂತರ್​ಮಂತರ್​ನಲ್ಲಿ ಕಳೆದ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್(Sonam Wangchuk) ಉಪವಾಸ ಕೈಬಿಡಲು ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ. ಷರತ್ತುಗಳ ಬಗ್ಗೆ ಪತ್ನಿ ಗೀತಾಂಜಲಿ ಆಂಗ್ಮೋ ಮಾತನಾಡಿದ್ದಾರೆ. ಸೋನಮ್ ವಾಂಗ್ಚುಕ್ ಅವರನ್ನು ಸರ್ಕಾರಿ ಸ್ವಾಮ್ಯದ ಸಫ್ದರ್ಜಂಗ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ ಕೆಲವೇ ಗಂಟೆಗಳ ನಂತರ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ.

ಉಪವಾಸ ಅಂತ್ಯಕ್ಕೆ ವಾಂಗ್ಚುಕ್ ಇಟ್ಟಿರುವ 2 ಷರತ್ತುಗಳು

ಇತ್ತೀಚೆಗೆ ನಡೆದ ‘ನೀಟ್’ಪರೀಕ್ಷೆ ಪೇಪರ್ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ವಾಂಗ್ಚುಕ್ ಪಟ್ಟು ಹಿಡಿದಿದ್ದಾರೆ. ಅವರು ಉಪವಾಸ ಹಿಂಪಡೆಯಲು ಇಟ್ಟಿರುವ ಷರತ್ತುಗಳು.

ರಾಜಕೀಯ ನಾಯಕರು ಸಫ್ದರ್ಜಂಗ್ ಆಸ್ಪತ್ರೆಗೆ ಆಗಮಿಸಿ ತಮ್ಮನ್ನು ಖುದ್ದಾಗಿ ಭೇಟಿಯಾಗಬೇಕು.

ಸೋಮವಾರದಿಂದ ಆರಂಭವಾಗುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಶಿಕ್ಷಣ ಕ್ಷೇತ್ರದ ಉತ್ತರದಾಯಿತ್ವ ಮತ್ತು ಪರೀಕ್ಷಾ ಅಕ್ರಮಗಳ ವಿಷಯವನ್ನು ಪ್ರಸ್ತಾಪಿಸುವುದಾಗಿ ನಾಯಕರು ಭರವಸೆ ನೀಡಬೇಕು. ಈ ಭರವಸೆಗಳು ಸಿಕ್ಕರೆ ಸೋಮವಾರವೇ ತಮ್ಮ 21 ದಿನಗಳ ದೀರ್ಘ ಉಪವಾಸವನ್ನು ಕೊನೆಗೊಳಿಸುವುದಾಗಿ ವಾಂಗ್‌ಚುಕ್ ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಅರ್ಜಿ ವಜಾ: ದೆಹಲಿ ಹೈಕೋರ್ಟ್ ತೀರ್ಪು

ಶನಿವಾರ ಬೆಳಗ್ಗೆ ದೆಹಲಿ ಪೊಲೀಸರು ವಾಂಗ್‌ಚುಕ್ ಅವರನ್ನು ಜಂತರ್ ಮಂತರ್‌ನಿಂದ ಬಲವಂತವಾಗಿ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಗೀತಾಂಜಲಿ ಆಂಗ್ಮೋ ಅವರು ತಮ್ಮ ಪತಿಯನ್ನು ಗುರುಗ್ರಾಮದ ಮೇದಾಂತ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಬೇಕೆಂದು ಅರ್ಜಿ ಸಲ್ಲಿಸಿದ್ದರು.

ಮತ್ತಷ್ಟು ಓದಿ: 20 ದಿನಗಳ ಉಪವಾಸದ ಬಳಿಕ ಸೋನಮ್ ವಾಂಗ್ಚುಕ್ ಆಸ್ಪತ್ರೆಗೆ ದಾಖಲು

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರ ಪೀಠ, “ವಾಂಗ್ಚುಕ್ ಅವರ ಆರೋಗ್ಯ ಹದಗೆಡುತ್ತಿರುವುದರಿಂದ ಅವರನ್ನು ಆಸ್ಪತ್ರೆಗೆ ಸೇರಿಸುವ ಸಂಪೂರ್ಣ ಹಕ್ಕು ಸರ್ಕಾರಕ್ಕಿದೆ. ವೈದ್ಯರು ಅವರ ಒಪ್ಪಿಗೆಯೊಂದಿಗೆ ಔಷಧಿಗಳನ್ನು ನೀಡುತ್ತಿದ್ದು, ಅವರ ಸ್ವಾತಂತ್ರ್ಯವನ್ನು ಉಲ್ಲಂಘಿಸಲಾಗಿಲ್ಲ” ಎಂದು ಸ್ಪಷ್ಟಪಡಿಸಿ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿತು. ಹೈಕೋರ್ಟ್‌ನ ಈ ಆದೇಶವನ್ನು ಇಬ್ಬರು ನ್ಯಾಯಾಧೀಶರ ವಿಭಾಗೀಯ ಪೀಠದ ಮುಂದೆ ಸವಾಲು ಮಾಡಲಾಗುವುದು ಎಂದು ವಾಂಗ್ಚುಕ್ ಪರ ವಕೀಲರು ತಿಳಿಸಿದ್ದಾರೆ.

ಸೋನಮ್ ವಾಂಗ್ಚುಕ್ ಆರೋಗ್ಯ ಸ್ಥಿತಿ ಹೇಗಿದೆ?

ಸಫ್ದರ್ಜಂಗ್ ಆಸ್ಪತ್ರೆಯ ವೈದ್ಯಕೀಯ ವರದಿಯ ಪ್ರಕಾರ, ಸೋನಮ್ ವಾಂಗ್ಚುಕ್ ಅವರ ದೇಹದ ಪ್ರಮುಖ ಅಂಗಾಂಗಗಳ ಕಾರ್ಯನಿರ್ವಹಣೆ ಸದ್ಯಕ್ಕೆ ಸ್ಥಿರವಾಗಿದೆ. ರಕ್ತದ ಪರೀಕ್ಷಾ ವರದಿಗಳಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆಯಾದರೂ, 21 ದಿನಗಳ ಸುದೀರ್ಘ ಉಪವಾಸದಿಂದಾಗಿ ದೇಹದ ಮೇಲೆ ತೀವ್ರ ಒತ್ತಡ ಬಿದ್ದಿದೆ. ಹೀಗಾಗಿ ವೈದ್ಯರ ತಂಡವು 24 ಗಂಟೆಗಳ ಕಾಲ ಅವರ ಆರೋಗ್ಯದ ಮೇಲೆ ನಿರಂತರ ಕಣ್ಣಿಟ್ಟಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *