
ಬೆಂಗಳೂರು, ಮಾ.19: ಯುಗಾದಿ ಹಬ್ಬದ ಸಂಭ್ರಮದ ನಡುವೆಯೂ ಬೆಂಗಳೂರಿನಲ್ಲಿ ಸಿಲಿಂಡರ್ ಕೊರತೆಯು ಹೋಟೆಲ್ ಮಾಲೀಕರಿಗೆ ಸವಾಲಾಗಿ ಪರಿಣಮಿಸಿದೆ. ಈ ವರ್ಷ, ಅನೇಕ ಹೋಟೆಲ್ಗಳು ಸಾಂಪ್ರದಾಯಿಕ ಸೌದೆ ಒಲೆಗಳ ಮೇಲೆ ಅಡುಗೆ ಮಾಡಲು ಮೊರೆ ಹೋಗಿವೆ. ಇದರ ಮಧ್ಯೆಯೂ ಯುಗಾದಿಯ ಪ್ರಮುಖ ಸಿಹಿ ತಿಂಡಿ ಹೋಳಿಗೆಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ಮಲ್ಲೇಶ್ವರಂನಲ್ಲಿರುವ ಪ್ರಸಿದ್ಧ ಹೋಳಿಗೆ ಮನೆ ಮುಂದೆ ಹೋಳಿಗೆ ಖರೀದಿಸಲು ನೂರಾರು ಜನರು ಮುಗಿಬಿದ್ದಿರುವುದು ಕಂಡುಬಂದಿದೆ. ಸುಮಾರು 100 ಮೀಟರ್ಗೂ ಅಧಿಕ ಉದ್ದದ ಸರತಿ ಸಾಲು ಹೋಟೆಲ್ನಿಂದ ರಸ್ತೆಯುದ್ದಕ್ಕೂ ವಿಸ್ತರಿಸಿದೆ. ಸಿಲಿಂಡರ್ ಇಲ್ಲದ ಕಾರಣ ಹೋಳಿಗೆ ಮನೆ ಮಾಲೀಕರು ಸೌದೆ ಒಲೆಯಲ್ಲಿ ಹೋಳಿಗೆ ತಯಾರಿಸುತ್ತಿದ್ದು, ಗ್ರಾಹಕರಿಗೆ ವಿತರಿಸುತ್ತಿದ್ದಾರೆ. ಪ್ರತಿ ವರ್ಷ 7 ರಿಂದ 8 ಸಾವಿರಕ್ಕೂ ಹೆಚ್ಚು ಹೋಳಿಗೆಗಳು ಮಾರಾಟವಾಗುತ್ತಿದ್ದವು. ಆದರೆ ಈ ವರ್ಷ ಸಿಲಿಂಡರ್ ಕೊರತೆಯಿಂದ ವ್ಯಾಪಾರಕ್ಕೆ ಹಿನ್ನಡೆಯಾಗಿದೆ. ಆದಾಗ್ಯೂ, ಗ್ರಾಹಕರನ್ನು ಕಳೆದುಕೊಳ್ಳಲು ಇಚ್ಛಿಸದ ಮಾಲೀಕರು ಎಲ್ಲಾ ಅಡೆತಡೆಗಳ ನಡುವೆಯೂ ಹೋಳಿಗೆ ನೀಡಲು ಶ್ರಮಿಸುತ್ತಿದ್ದಾರೆ. “ಎಷ್ಟೇ ಸಮಸ್ಯೆಗಳಿದ್ದರೂ ಯುಗಾದಿ ಹಬ್ಬವನ್ನು ಹೋಳಿಗೆಯೊಂದಿಗೆ ಆಚರಿಸಬೇಕು” ಎಂಬುದು ಗ್ರಾಹಕರ ಮಾತಾಗಿತ್ತು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ