ಎಲುಬಿಗಾದ ಹಳೆಯ ನೋವು ಅಥವಾ ಗಾಯವನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡಿದರೆ ಮುಂದೆ ಇದು ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಹೌದು, ಆರೋಗ್ಯ ತಜ್ಞರ ಪ್ರಕಾರ ಫ್ರ್ಯಾಕ್ಚರ್ (Fracture), ಲಿಗಮೆಂಟ್ ಹಾನಿ (Ligament injury) ಅಥವಾ ಜಾಯಿಂಟ್ ಇಂಜುರಿ (Joint injury) ಆದಾಗ ಸರಿಯಾದ ಚಿಕಿತ್ಸೆ ಪಡೆಯದೇ ಇದ್ದರೆ, ಮುಂದಿನ ದಿನಗಳಲ್ಲಿ ಆರ್ಥ್ರೈಟಿಸ್ (Arthritis) ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಅದರಲ್ಲಿಯೂ ಹಲವರು ಗಾಯವಾದ ನಂತರ ಕೆಲ ದಿನ ವಿಶ್ರಾಂತಿ ಪಡೆದು ಮತ್ತೆ ಸಾಮಾನ್ಯ ಚಟುವಟಿಕೆಗೆ ಮರಳುತ್ತಾರೆ. ಆದರೆ ಒಳಗಿರುವ ಹಾನಿ ಸಂಪೂರ್ಣವಾಗಿ ಗುಣವಾಗದಿದ್ದರೆ, ಸಂಧಿಗಳಲ್ಲಿ ನಿಧಾನವಾಗಿ ಘರ್ಷಣೆ ಹೆಚ್ಚಾಗಿ ನೋವು ಮತ್ತು ಊತ ಉಂಟಾಗಬಹುದು. ಕಾಲಕ್ರಮೇಣ ಇದು ಆರ್ಥ್ರೈಟಿಸ್ಗೆ ಕಾರಣವಾಗುವ ಅಪಾಯವಿರುತ್ತದೆ.
ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು?
ಹಳೆಯ ಗಾಯ ಅಥವಾ ನೋವಾಗಿದ್ದ ಭಾಗದಲ್ಲಿ ಪದೇಪದೇ ನೋವು ಕಾಣಿಸಿಕೊಳ್ಳುವುದು, ಊತ ಕಡಿಮೆಯಾಗದೇ ಇರುವುದು ಅಥವಾ ಬೆಳಗ್ಗೆ ಎದ್ದಾಗ ಕೀಲಿನ ಸಂಧಿಗಳು ಗಟ್ಟಿಯಾಗಿರುವ ಅನುಭವವಾಗುವುದು ಪ್ರಮುಖ ಲಕ್ಷಣಗಳಾಗಿವೆ. ನಡೆಯುವಾಗ, ಮೆಟ್ಟಿಲೇರುವಾಗ ಅಥವಾ ಕಾಲು, ಕೈಗಳನ್ನು ಮಡಚುವಾಗ ನೋವು ಹೆಚ್ಚಾದರೆ ಅದನ್ನು ಲಘುವಾಗಿ ತೆಗೆದುಕೊಳ್ಳಬಾರದು. ಕೆಲವರಿಗೆ ಕೀಲುಗಳ ಮಧ್ಯದಿಂದ ಶಬ್ದ ಬರುವುದು, ಭಾರವಾದ ಅನುಭವ ಅಥವಾ ಹೆಚ್ಚು ಸಮಯ ಕೂತ ಬಳಿಕ ಚಲನೆ ಮಾಡಲು ತೊಂದರೆ ಕಾಣಿಸಬಹುದು. ಇಂತಹ ಲಕ್ಷಣಗಳು ಸಂಧಿಗಳ ಘರ್ಷಣೆಯ ಸೂಚನೆಯಾಗಿರಬಹುದು ಎಂದು ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: ಕೀಲು ನೋವು ಬರಬಾರದು ಎಂದರೆ ತಪ್ಪದೆ ಈ ಆಹಾರಗಳ ಸೇವನೆ ಮಾಡಿ
ಸಮಯಕ್ಕೆ ಚಿಕಿತ್ಸೆ ಯಾಕೆ ಅಗತ್ಯ?
ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದರೆ ಕೀಲುಗಳ ಮಧ್ಯೆ ಆಗುವ ಹಾನಿಯನ್ನು ಕಡಿಮೆ ಮಾಡಬಹುದು. ಎಕ್ಸ್ರೇ ಅಥವಾ ಸ್ಕ್ಯಾನ್ ಮೂಲಕ ಎಲುಬು ಮತ್ತು ಕೀಲುಗಳು ಸಂಪೂರ್ಣವಾಗಿ ಗುಣಮುಖವಾಗಿದೆಯೇ ಎಂಬುದನ್ನು ವೈದ್ಯರು ಪರಿಶೀಲಿಸುತ್ತಾರೆ. ಫಿಜಿಯೋಥೆರಪಿ, ಔಷಧೋಪಚಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡುವುದರಿಂದ ನೋವು ಹಾಗೂ ಊತ ನಿಯಂತ್ರಣಕ್ಕೆ ಬರುತ್ತದೆ. ಚಿಕಿತ್ಸೆ ವಿಳಂಬವಾದರೆ ನಡೆಯುವಲ್ಲಿ ತೊಂದರೆ ಹೆಚ್ಚಾಗುವ ಸಾಧ್ಯತೆ ಇದೆ. ಜಾಯಿಂಟ್ ಗಳು ಆರೋಗ್ಯವಾಗಿರಲು ತೂಕ ನಿಯಂತ್ರಣದಲ್ಲಿ ಇಡುವುದು, ನಿಯಮಿತವಾಗಿ ಲಘು ವ್ಯಾಯಾಮ ಮಾಡುವುದು ಮತ್ತು ಗಾಯವಾದ ಭಾಗದ ಮೇಲೆ ಹೆಚ್ಚು ಒತ್ತಡ ಹಾಕದಿರುವುದು ಮುಖ್ಯ. ಕ್ಯಾಲ್ಸಿಯಂ, ವಿಟಮಿನ್ D ಮತ್ತು ಪ್ರೋಟೀನ್ಯುಕ್ತ ಆಹಾರ ಸೇವಿಸುವುದರಿಂದ ಎಲುಬುಗಳು ಬಲವಾಗಿರುತ್ತವೆ. ದೀರ್ಘಕಾಲ ನೋವು ಅಥವಾ ಗಟ್ಟಿತನ ಮುಂದುವರಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳಿತು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ