ನವದೆಹಲಿ, ಆಗಸ್ಟ್ 6: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (EPFO) ಚಂದಾದಾರರು ತಮ್ಮ ಹಳೆಯ ಅಥವಾ ನಿಷ್ಕ್ರಿಯಗೊಂಡ (Inactive) ಪಿಎಫ್ ಖಾತೆಗಳಲ್ಲಿ ಉಳಿದುಕೊಂಡಿರುವ ಹಣವನ್ನು ಸುಲಭವಾಗಿ ಪತ್ತೆಹಚ್ಚಿ ಕ್ಲೈಮ್ ಮಾಡಲು ನೆರವಾಗುವ ‘ಇ-ಪ್ರಾಪ್ತಿ’ (E-PRAAPTI) ಡಿಜಿಟಲ್ ಪೋರ್ಟಲ್ ಅನ್ನು ಈ ತಿಂಗಳಲ್ಲೇ ಜಾರಿಗೆ ತರಲು ಇಪಿಎಫ್‌ಒ ಸಿದ್ಧತೆ ನಡೆಸಿದೆ. ಈ ನೂತನ ವ್ಯವಸ್ಥೆಯು ಕೋಟಿಗಟ್ಟಲೆ ಉದ್ಯೋಗಿಗಳಿಗೆ ತಮ್ಮ ಹಳೆಯ ಪಿಎಫ್ ಹಣವನ್ನು ಪಡೆಯಲು ಎದುರಾಗುತ್ತಿದ್ದ ತೊಡಕುಗಳನ್ನು ನಿವಾರಿಸಲಿದೆ.
‘ಇ-ಪ್ರಾಪ್ತಿ’ ಎಂದರೇನು?
‘ಇ-ಪ್ರಾಪ್ತಿ’ (E-PRAAPTI – EPF Aadhaar-Based Access Portal for Tracking Inoperative Accounts) ಎಂಬುದು ಆಧಾರ್ ಆಧಾರಿತ ಡಿಜಿಟಲ್ ವೇದಿಕೆಯಾಗಿದೆ.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಅವರು ಈ ಯೋಜನೆ ಬಗ್ಗೆ ಮಾಹಿತಿ ನೀಡಿದ್ದು, ಯುಎಎನ್ (UAN) ಸಂಖ್ಯೆಗೆ ಲಿಂಕ್ ಆಗದಿರುವ ಅಥವಾ ನಿಷ್ಕ್ರಿಯಗೊಂಡಿರುವ ಹಳೆಯ ಇಪಿಎಫ್ ಖಾತೆಗಳನ್ನು ಪತ್ತೆಹಚ್ಚಲು, ಲಿಂಕ್ ಮಾಡಲು ಮತ್ತು ಸಕ್ರಿಯಗೊಳಿಸಲು ಈ ಪೋರ್ಟಲ್ ನೆರವಾಗಲಿದೆ.
ಇದನ್ನೂ ಓದಿ: ಥರ್ಡ್ ಪಾರ್ಟಿ ಇನ್ಷೂರೆನ್ಸ್ ಇಲ್ಲದಿದ್ದರೆ ಪೆಟ್ರೋಲ್-ಡೀಸಲ್ ಸಿಗಲ್ಲ: ಸುಪ್ರೀಂಕೋರ್ಟ್ ನಿರ್ದೇಶನದಲ್ಲಿ ಬರಲಿದೆ ಹೊಸ ಕಾನೂನು
ಹೊಸ ಪೋರ್ಟಲ್ನ ಮುಖ್ಯಾಂಶಗಳು ಮತ್ತು ಪ್ರಯೋಜನಗಳು
- ಪ್ರಸ್ತುತ ಇಪಿಎಫ್‌ಒನಲ್ಲಿ 30.91 ಲಕ್ಷಕ್ಕೂ ಹೆಚ್ಚು ನಿಷ್ಕ್ರಿಯ ಖಾತೆಗಳಿದ್ದು, ಇವುಗಳಲ್ಲಿ ಸುಮಾರು ₹9,330 ಕೋಟಿ ಹಣ ಕ್ಲೇಮ್ ಆಗದೆ (Unclaimed) ಉಳಿದಿದೆ.
- ಯಾವುದೇ ಪಿಎಫ್ ಖಾತೆಗೆ ಸತತ 3 ವರ್ಷಗಳ ಕಾಲ (36 ತಿಂಗಳು) ಯಾವುದೇ ವಂತಿಗೆ (Contribution) ಜಮೆಯಾಗದಿದ್ದರೆ ಅದನ್ನು ‘ನಿಷ್ಕ್ರಿಯ ಖಾತೆ’ ಎಂದು ಪರಿಗಣಿಸಲಾಗುತ್ತದೆ.
- ಹಳೆಯ ಕಾಗದಪತ್ರಗಳ ಆಧಾರಿತ ಸುದೀರ್ಘ ಪ್ರಕ್ರಿಯೆಯನ್ನು ತಪ್ಪಿಸಿ, ಆಧಾರ್ ದೃಢೀಕರಣ (Aadhaar Authentication) ಮೂಲಕ ಸುರಕ್ಷಿತವಾಗಿ ಹಳೆಯ ಖಾತೆಗಳನ್ನು ಯುಎಎನ್ (UAN) ಗೆ ಲಿಂಕ್ ಮಾಡಬಹುದು.
- ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲದೆ, ಡಿಜಿಟಲ್ ರೂಪದಲ್ಲೇ ಪ್ರೊಫೈಲ್ ಅಪ್‌ಡೇಟ್ ಮಾಡಿ ಹಣವನ್ನು ಕ್ಲೈಮ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಯುಎಎನ್ಗಿಂತಲೂ ಮೊದಲು ಇದ್ದ ಹಳೆಯ ಪಿಎಫ್ ಖಾತೆ ಲಿಂಕ್ ಆಗಿಲ್ಲವಾ? ಇಲ್ಲಿದೆ ಮಾರ್ಗೋಪಾಯ
ಇ-ಪ್ರಾಪ್ತಿ ಪೋರ್ಟಲ್ ಹೇಗೆ ಕೆಲಸ ಮಾಡುತ್ತದೆ?
- ಯುಎಎನ್ ಜಾರಿಗೆ ಬರುವ ಮುನ್ನ ಇದ್ದ ಹಳೆಯ ಪಿಎಫ್ ಖಾತೆಗಳನ್ನು ಆಧಾರ್ ವಿವರಗಳ ಮೂಲಕ ಪತ್ತೆ ಮಾಡುತ್ತದೆ.
- ಕಂಡುಕೊಂಡ ಹಳೆಯ ಖಾತೆಯನ್ನು ಹಾಲಿ ಇರುವ ಸಕ್ರಿಯ ಯುಎಎನ್‌ಗೆ ಡಿಜಿಟಲ್ ಆಗಿ ಲಿಂಕ್ ಮಾಡುತ್ತದೆ.
- ಹಳೆಯ ಖಾತೆಯ ಹಣವನ್ನು ಹೊಸ ಖಾತೆಗೆ ವರ್ಗಾಯಿಸಲು ಅಥವಾ ನೇರವಾಗಿ ಹಿಂಪಡೆಯಲು ಅರ್ಜಿಯನ್ನು ಸಲ್ಲಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ