Headlines

ಹಾಕಿ ತಂಡದ ಜೆರ್ಸಿ ಬಣ್ಣ ನೀಲಿಯಿಂದ ಕೇಸರಿಗೆ ಬದಲು; ಹೊಸ ವಿವಾದ ಸೃಷ್ಟಿ – Kannada News | Indian Hockey Jersey Color Change: Orange Sparks Controversy; Rasquinha vs Hockey India

2026 ರ ಹಾಕಿ ವಿಶ್ವಕಪ್‌ಗೆ (2026 Hockey World Cup) ಮುಂಚಿತವಾಗಿ, ಭಾರತೀಯ ಹಾಕಿ ತಂಡದ (Indian Hockey) ಜೆರ್ಸಿ ಬಣ್ಣವನ್ನು ನೀಲಿ ಬಣ್ಣದಿಂದ ಕಿತ್ತಳೆ ಬಣ್ಣಕ್ಕೆ ಬದಲಾಯಿಸಲಾಗಿದೆ. ಹಾಕಿ ಇಂಡಿಯಾ ಜುಲೈ 27 ರಂದು ಪುರುಷ ಮತ್ತು ಮಹಿಳಾ ತಂಡಗಳ ಹೊಸ ಜೆರ್ಸಿಗಳನ್ನು ಬಿಡುಗಡೆ ಮಾಡಿದ್ದು, ಜೆರ್ಸಿ ಬಣ್ಣವನ್ನು ಬದಲಾಯಿಸಿರುವುದು ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ತಂಡದ ಜೆರ್ಸಿ ಬಣ್ಣವನ್ನು ಬದಲಿಸಿರುವುದಕ್ಕೆ ಅಸಮಾಧಾನ ಹೊರಹಾಕಿರುವ ತಂಡದ ಮಾಜಿ ನಾಯಕ ವೀರೆನ್ ರಸ್ಕ್ವಿನ್ಹಾ, ನೀಲಿ ಜೆರ್ಸಿ ನಮ್ಮ ಗುರುತು ಅದನ್ನು ಬದಲಿಸಿರುವುದು ಸರಿಯಲ್ಲ ಎಂದಿದ್ದಾರೆ. ಮತ್ತೊಬ್ಬ ಮಾಜಿ ನಾಯಕ ಪಟ್ಗಟ್ ಸಿಂಗ್ ಕೂಡ ಜೆರ್ಸಿ ಬಣ್ಣ ಬದಲಾವಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ನಡೆ ನಾಚಿಕೆಗೇಡಿನ ಸಂಗತಿ

ಹಾಕಿ ತಂಡದ ಜೆರ್ಸಿ ಬಣ್ಣವನ್ನು ಬದಲಿಸಿರುವ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಸರಣಿ ಪೋಸ್ಟ್​ಗಳನ್ನು ಮಾಡಿರುವ ವೀರೆನ್, ‘ಹಾಕಿ ಇಂಡಿಯಾ ಖಂಡಿತವಾಗಿಯೂ ಬಹಳಷ್ಟು ಒಳ್ಳೆಯ ಕೆಲಸ ಮಾಡಿದೆ. ಆದರೆ ಜೆರ್ಸಿ ಬಣ್ಣವನ್ನು ಬದಲಿಸುವ ಈ ನಡೆ ನಾಚಿಕೆಗೇಡಿನ ಸಂಗತಿ. ನೀಲಿ ಬಣ್ಣವು ಯಾವಾಗಲೂ ಭಾರತೀಯ ತಂಡದ ಗುರುತು ಮತ್ತು ಪರಂಪರೆಯಾಗಿದೆ. ನಾನು ಹಲವು ವರ್ಷಗಳಿಂದ ನೀಲಿ ಜೆರ್ಸಿಯನ್ನು ಹೆಮ್ಮೆಯಿಂದ ಧರಿಸಿದ್ದೇನೆ. ಅಭಿಮಾನಿಗಳು ನಮ್ಮ ಭಾರತೀಯ ತಂಡವನ್ನು ನೀಲಿ ಬಣ್ಣದಲ್ಲಿ ನೋಡಲು ಬಯಸುತ್ತಾರೆ. ಹಾಗಾದರೆ ಕೇಸರಿ ಬಣ್ಣದ ಹಿಂದಿನ ತರ್ಕವೇನು?’ ಎಂದು ಬರೆದುಕೊಂಡಿದ್ದಾರೆ.

ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಮತ್ತೊಂದು ಪೋಸ್ಟ್‌ ಮಾಡಿರುವ ವೀರೆನ್, ‘ತಮ್ಮ ಪೋಸ್ಟ್‌ನಲ್ಲಿ ಅನೇಕ ಅನಗತ್ಯ ರಾಜಕೀಯ ಕಾಮೆಂಟ್‌ಗಳನ್ನು ಮಾಡಲಾಗುತ್ತಿದೆ. ಆದರೆ ನಾನು ಸ್ಪಷ್ಟಪಡಿಸುತ್ತೇನೆ, ನನ್ನ ಪ್ರಶ್ನೆಯು ತಂಡದ ಹೆಮ್ಮೆ, ಗುರುತು ಮತ್ತು ಪರಂಪರೆಯ ಬಗ್ಗೆ ಮಾತ್ರ ಎಂದಿದ್ದಾರೆ.

ಈ ಬದಲಾವಣೆಯಲ್ಲಿ ಆಶ್ಚರ್ಯವೇನಿಲ್ಲ

ವೀರೆನ್ ರಸ್ಕ್ವಿನ್ಹಾ ಅವರ ಪ್ರಶ್ನೆಗೆ ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಪ್ರತಿಕ್ರಿಯೆ ನೀಡಿದ್ದು, ‘ಟೀಮ್ ಇಂಡಿಯಾ ನೀಲಿ ಜೆರ್ಸಿ ಧರಿಸುವ ದೀರ್ಘಕಾಲದ ಸಂಪ್ರದಾಯವನ್ನು ಹೊಂದಿದೆ . ಆದರೆ ಈ ಬದಲಾವಣೆಯಲ್ಲಿ ಆಶ್ಚರ್ಯವೇನಿಲ್ಲ. 2014 ರಲ್ಲಿ ತಂಡವು ಹಳದಿ ಬಣ್ಣವನ್ನು ಧರಿಸಿ 2018 ರಲ್ಲಿ ತಿಳಿ ನೀಲಿ ಬಣ್ಣವನ್ನು ಅಳವಡಿಸಿಕೊಂಡಿದ್ದು ನನಗೆ ನೆನಪಿದೆ. ಈ ಬಾರಿ ತಂಡದ ಜೆರ್ಸಿ ಬಣ್ಣವನ್ನು ಬದಲಾಯಿಸುವ ಸಲಹೆಯು ತರಬೇತುದಾರರು, ಸಹಾಯಕ ಸಿಬ್ಬಂದಿ, ನಾಯಕ ಮತ್ತು ಆಟಗಾರರಿಂದ ಬಂದಿದೆ.

ಹಾಕಿ ಟರ್ಫ್ ನೀಲಿ ಬಣ್ಣದ್ದಾಗಿರುವುದರಿಂದ ಮತ್ತು ಆಟಗಾರರ ಕಿಟ್‌ಗಳು ಸಹ ನೀಲಿ ಬಣ್ಣದ್ದಾಗಿರುವುದರಿಂದ, ಪಂದ್ಯಗಳ ಸಮಯದಲ್ಲಿ ಗೊಂದಲ ಉಂಟಾಗುತ್ತಿತ್ತು. ಆದ್ದರಿಂದ, ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳು ಹಳದಿ ಮತ್ತು ಕಿತ್ತಳೆ ಬಣ್ಣಗಳನ್ನು ಸೂಚಿಸಿದ್ದರು. ಅಂತಿಮವಾಗಿ, ನಾವು ಕಿತ್ತಳೆ ಬಣ್ಣವನ್ನು ಆರಿಸಿಕೊಂಡಿದ್ದೇವೆ ಏಕೆಂದರೆ ಅದು ನಮ್ಮ ರಾಷ್ಟ್ರೀಯ ಧ್ವಜದ ಮೂರು ಬಣ್ಣಗಳಲ್ಲಿ ಒಂದಾಗಿದೆ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *