ದರೋಡೆಯಾದ ಬಂಗಾರದ ಅಂಗಡಿImage Credit source: Tv9 Kannada
ನೆಲಮಂಗಲ, ಜೂನ್ 02: ಹಾಡಹಗಲೇ ಸಿನಿಮೀಯ ಮಾದರಿ ದರೋಡೆ ಪ್ರಕರಣವೊಂದು ಬೆಂಗಳೂರು (Bengaluru) ಗ್ರಾಮಾಂತರದ ನೆಲಮಂಗಲದಲ್ಲಿ ನಡೆದಿದೆ. ಬೈಕ್ನಲ್ಲಿ ಬಂದಿದ್ದ ಆರೋಪಿಗಳು ಬಂಗಾರ ಅಂಗಡಿಯಲ್ಲಿದ್ದವರನ್ನು ಬೆದರಿಸಿ ಆಭರಣಗಳನ್ನು ದೋಚಿ ಎಸ್ಕೇಪ್ ಆಗಿದ್ದು, ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ನೆಲಮಂಗಲ ಭಾಗದಲ್ಲಿ ಮೇಲಿಂದ ಮೇಲೆ ದರೋಡೆ ಪ್ರಕರಣಗಳು ನಡೆಯುತ್ತಿರೋದು ಸಾರ್ವಜನಿಕರ ತೀವ್ರ ಆತಂಕಕ್ಕೂ ಕಾರಣವಾಗಿದೆ.
ಮುಖ್ಯಾಂಶಗಳು
- ಹಾಡಹಗಲೇ ಬಂಗಾರದ ಅಂಗಡಿಗೆ ನುಗ್ಗಿ ದರೋಡೆ
- ಬೈಕ್ನಲ್ಲಿ ಬಂದಿದ್ದ ಮೂವರು ಆರೋಪಿಗಳಿಂದ ಕೃತ್ಯ
- ನೆಲಮಂಗಲದ ಟಿ.ಬೇಗೂರಿನಲ್ಲಿ ನಡೆದಿರುವ ಘಟನೆ
ಬೈಕ್ನಲ್ಲಿ ಬಂದಿದ್ದ ಮೂವರು ದರೋಡೆಕೋರರು ನೆಲಮಂಗಲ ತಾಲೂಕಿನ ಟಿ.ಬೇಗೂರಿನಲ್ಲಿರುವ ಮಹಾಲಕ್ಷ್ಮೀ ಜ್ಯುವೆಲರ್ಸ್ಗೆ ನುಗ್ಗಿದ್ದಾರೆ. ಬಂಗಾರದ ಅಂಗಡಿಯಲ್ಲಿದ್ದವರಿಗೆ ಡ್ಯಾಗರ್ ತೋರಿಸಿ ಬೆದರಿಸಿರುವ ಆರೋಪಿಗಳು, ಶೋ ಗ್ಲಾಸ್ನಲ್ಲಿದ್ದ 20 ಉಂಗುರಗಳು ಇದ್ದ ಟ್ರೇ ದೋಚಿ ಪರಾರಿಗೆ ಯತ್ನಿಸಿದ್ದಾರೆ. ಈ ವೇಳೆ ಕೆಲ ಉಂಗುರಗಳು ರಸ್ತೆಗೆ ಬಿದ್ದಿವೆ ಎನ್ನಲಾಗಿದೆ. ಒಟ್ಟು 5 ಉಂಗುರಗಳು ಕಳವಾಗಿರುವ ಬಗ್ಗೆ ಶಾಪ್ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದು, ಕಳುವಾಗಿರುವ ಬಂಗಾರದ ಒಟ್ಟು ತೀಕ ಸುಮಾರು 35 ಗ್ರಾಂ ಎನ್ನಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಆನ್‌ಲೈನ್ ಹೂಡಿಕೆ ಹೆಸರಲ್ಲಿ ಭಾರಿ ವಂಚನೆ, ಮಹಿಳೆಯ ಮಾತಿಗೆ ಮರುಳಾಗಿ 5.95 ಕೋಟಿ ರೂ. ಕಳಕೊಂಡ ವ್ಯಕ್ತಿ
ಇನ್ನು ಘಟನೆ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ನೆಲಮಂಗಲ ಗ್ರಾಮಾಂತರ ಪೊಲೀಸರು ತನಿಖೆ ಆರಂಭಿಸಿದ್ದು, ಬಂಗಾರದ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮರಾಗಳ ಪರಿಶೀಲನೆಗೆ ಮುಂದಾಗಿದ್ದಾರೆ. ಆದರೆ ಅವು ಕಾರ್ಯನಿರ್ವಹಿಸುತ್ತಿಲ್ಲ ಎಂಬ ವಿಚಾರ ಗೊತ್ತಾದ ಕಾರಣ, ಶಾಪ್ ಮಾಲೀಕನ ಬಳಿಯಿಂದಲೇ ಘಟನೆ ಸಂಬಂಧ ಸಂಪೂರ್ಣ ಮಾಹಿತಿ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ.
ವರದಿ: ಮಂಜುನಾಥ್, ಟಿವಿ9 ನೆಲಮಂಗಲ
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.