ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ದಬ್ಬಾಳಿಕೆ: ಟ್ಯಾಂಕರ್ ಶುಲ್ಕದ ವಿರುದ್ಧ ಗುಡುಗಿದ ಡೊನಾಲ್ಡ್ ಟ್ರಂಪ್

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ದಬ್ಬಾಳಿಕೆ: ಟ್ಯಾಂಕರ್ ಶುಲ್ಕದ ವಿರುದ್ಧ ಗುಡುಗಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್, ಏಪ್ರಿಲ್ 10: ಜಾಗತಿಕ ತೈಲ ಮಾರುಕಟ್ಟೆಯ ಜೀವನಾಡಿಯಂತಿರುವ ಹಾರ್ಮುಜ್ ಜಲಸಂಧಿ(Hormuz Strait)ಯ ಸುತ್ತ ಈಗ ರಾಜತಾಂತ್ರಿಕ ಸಮರ ತಾರಕಕ್ಕೇರಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ನಡುವಿನ ಈ ಸಂಘರ್ಷವು ವಿಶ್ವದ ಆರ್ಥಿಕತೆಯ ಮೇಲೆ ಆತಂಕದ ನೆರಳು ಮೂಡಿಸಿದೆ. ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಎರಡು ವಾರಗಳ ಕದನ ವಿರಾಮದ ಒಪ್ಪಂದವು ಜಾರಿಗೆ ಬಂದ ಬೆನ್ನಲ್ಲೇ ಹೊಸ ವಿವಾದವೊಂದು ಸ್ಫೋಟಗೊಂಡಿದೆ.

ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ತೈಲ ಟ್ಯಾಂಕರ್‌ಗಳ ಮೇಲೆ ಇರಾನ್ ಶುಲ್ಕ (Fee) ವಿಧಿಸುತ್ತಿದೆ ಎಂಬ ವರದಿಗಳು ಹೊರಬರುತ್ತಿದ್ದಂತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇರಾನ್‌ನ ಈ ನಡವಳಿಕೆಯನ್ನು ಅವಮಾನಕರ ಎಂದು ಕರೆದಿದ್ದಾರೆ.

ಇರಾನ್ ಜಲಸಂಧಿಯ ಮೂಲಕ ಹಾದುಹೋಗುವ ಟ್ಯಾಂಕರ್‌ಗಳಿಗೆ ಶುಲ್ಕ ವಿಧಿಸುತ್ತಿದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಅವರು ಹಾಗೆ ಮಾಡದಿರುವುದು ಉತ್ತಮ, ಒಂದು ವೇಳೆ ಮಾಡುತ್ತಿದ್ದರೆ ಈಗಲೇ ನಿಲ್ಲಿಸುವುದು ಅವರಿಗೆ ಉತ್ತಮ ಎಂದು ಟ್ರಂಪ್ ಎಚ್ಚರಿಸಿದ್ದಾರೆ.

ಮತ್ತಷ್ಟು ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಹಡಗುಳಿಂದ ಟೋಲ್ ವಸೂಲಿಗೆ ಇರಾನ್ ಯೋಜನೆ; ಅಂತಾರಾಷ್ಟ್ರೀಯ ನಿಯಮಗಳು ಏನು ಹೇಳುತ್ತವೆ?

ಅಷ್ಟೇ ಅಲ್ಲದೆ, ಇರಾನ್ ಕದನ ವಿರಾಮ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ಅತ್ಯಂತ ಕಳಪೆ ಕೆಲಸ ಮಾಡುತ್ತಿದೆ ಎಂದು ಟ್ರಂಪ್ ದೂರಿದ್ದಾರೆ. ಇದು ನಾವು ಮಾಡಿಕೊಂಡ ಒಪ್ಪಂದವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪರ್ಷಿಯನ್ ಕೊಲ್ಲಿ ಮತ್ತು ಓಮನ್ ಕೊಲ್ಲಿ ನಡುವಿನ ಸುಮಾರು 167 ಕಿಲೋಮೀಟರ್ ಉದ್ದದ ಈ ಜಲಸಂಧಿಯು ವಿಶ್ವದ ಅತ್ಯಂತ ನಿರ್ಣಾಯಕ ತೈಲ ಸಾರಿಗೆ ಕೇಂದ್ರವಾಗಿದೆ. ಮಂಗಳವಾರ ನಡೆದ ಸಂಧಾನದ ಪ್ರಕಾರ, ಇರಾನ್ ಈ ಜಲಸಂಧಿಯನ್ನು ಮತ್ತೆ ತೆರೆಯಬೇಕಿತ್ತು.

ಆದರೆ ಎಎಫ್‌ಪಿ (AFP) ವರದಿಯ ಪ್ರಕಾರ, ಒಪ್ಪಂದದ ನಂತರ ಈವರೆಗೆ ಕೇವಲ 10 ಟ್ಯಾಂಕರ್‌ಗಳು ಮಾತ್ರ ಜಲಸಂಧಿಯನ್ನು ದಾಟಿವೆ. ಇರಾನ್ ಬೇಕೆಂದೇ ಹಡಗುಗಳನ್ನು ತಡೆಯುತ್ತಿದೆ ಅಥವಾ ಅನಗತ್ಯ ಶುಲ್ಕ ವಿಧಿಸಿ ಜಾಗತಿಕ ಆರ್ಥಿಕತೆಯನ್ನು ಅಸ್ತವ್ಯಸ್ತಗೊಳಿಸುತ್ತಿದೆ ಎಂಬುದು ಅಮೆರಿಕದ ಆರೋಪವಾಗಿದೆ.

ಈ ಬಿಕ್ಕಟ್ಟನ್ನು ಶಮನಗೊಳಿಸಲು ಅಮೆರಿಕ ಈಗ ತನ್ನ ಪ್ರಬಲ ನಿಯೋಗವನ್ನು ಅಖಾಡಕ್ಕಿಳಿಸಿದೆ. ಬರುವ ಶನಿವಾರ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಇರಾನ್ ಅಧಿಕಾರಿಗಳೊಂದಿಗೆ ಮಹತ್ವದ ಮಾತುಕತೆ ನಡೆಯಲಿದೆ. ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಈ ಮಾತುಕತೆಯ ನೇತೃತ್ವ ವಹಿಸಲಿದ್ದಾರೆ. ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಮತ್ತು ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಈ ನಿಯೋಗದಲ್ಲಿದ್ದಾರೆ.

ಲೆಬನಾನ್ ಎಂಬ ಕಗ್ಗಂಟು
ಇರಾನ್ ತನ್ನ ಶಾಂತಿ ಒಪ್ಪಂದದಲ್ಲಿ ಲೆಬನಾನ್ ಅನ್ನೂ ಸೇರಿಸಬೇಕೆಂದು ಪಟ್ಟು ಹಿಡಿದಿದೆ. ಆದರೆ, ಇತ್ತೀಚೆಗಷ್ಟೇ ಇಸ್ರೇಲ್ ಲೆಬನಾನ್ ಮೇಲೆ ಭೀಕರ ದಾಳಿ ನಡೆಸಿ ನೂರಾರು ಜನರನ್ನು ಕೊಂದಿರುವುದು ಈ ಸಂಧಾನ ಪ್ರಕ್ರಿಯೆಗೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ.

ಒಂದು ಕಡೆ ಇಸ್ಲಾಮಾಬಾದ್‌ನಲ್ಲಿ ರಾಜತಾಂತ್ರಿಕ ಮಾತುಕತೆಗಳಿಗೆ ವೇದಿಕೆ ಸಿದ್ಧವಾಗುತ್ತಿದ್ದರೆ, ಇನ್ನೊಂದು ಕಡೆ ಟ್ರಂಪ್ ಅವರ ಸೇನಾ ಬೆದರಿಕೆಗಳು ಇರಾನ್ ಮೇಲೆ ಒತ್ತಡ ಹೆಚ್ಚಿಸಿವೆ. ಹಾರ್ಮುಜ್ ಜಲಸಂಧಿಯು ಸುಸೂತ್ರವಾಗಿ ಕಾರ್ಯನಿರ್ವಹಿಸದಿದ್ದರೆ ಜಾಗತಿಕ ತೈಲ ಬೆಲೆಗಳಲ್ಲಿ ಭಾರಿ ಏರಿಕೆಯಾಗುವ ಭೀತಿ ಎದುರಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *