ಟೆಹ್ರಾನ್, ಜುಲೈ 14: ಜಾಗತಿಕ ತೈಲ ಮಾರುಕಟ್ಟೆಯ ಜೀವನಾಡಿಯಾಗಿರುವ ಹಾರ್ಮುಜ್ ಜಲಸಂಧಿ(Hormuz Strait)ಯ ನಿಯಂತ್ರಣ ಮತ್ತು ಸುಂಕದ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ನಡುವೆ ತೀವ್ರ ಮಾತಿನ ಚಕಿಮಕಿ ನಡೆದಿದೆ. ಜಲಸಂಧಿಯ ಮೂಲಕ ಹಾದು ಹೋಗುವ ವಿಶ್ವದ ಎಲ್ಲಾ ವಾಣಿಜ್ಯ ಹಡಗುಗಳ ಸರಕುಗಳ ಮೇಲೆ ಬರೋಬ್ಬರಿ ಶೇ.20ರಷ್ಟು ಸುರಕ್ಷತಾ ಶುಲ್ಕ ವಿಧಿಸುವ ಟ್ರಂಪ್ ಯೋಜನೆ ಬಗ್ಗೆ ಇರಾನ್ ತಮಾಷೆ ಮಾಡಿದೆ.
ಇದಕ್ಕೆ ಎಕ್ಸ್ ಪೋಸ್ಟ್ ಮೂಲಕ ಪ್ರತಿಕ್ರಿಯಿಸಿರುವ ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅರಘ್ಚಿ, ‘‘ಅಮೆರಿಕ ಅಧ್ಯಕ್ಷರು ಹೇಳಿದ್ದು ಸರಿಯಾಗಿದೆ. ಜಲಸಂಧಿಯ ಕಾವಲುಗಾರರಿಗೆ ಶುಲ್ಕ ಸಿಗಬೇಕು. ಆದರೆ ಅಮೆರಿಕಕ್ಕೆ ಅಲ್ಲ, ಇರಾನ್ ಯಾವಾಗಲೂ ಈ ಜಲಸಂಧಿಯ ನಿಜವಾದ ರಕ್ಷಕ ಮತ್ತು ಶಾಶ್ವತ ಕಾವಲುಗಾರ, ಟ್ರಂಪ್ ಕೇಳುತ್ತಿರುವ ಶೇ.20ರಷ್ಟು ಶುಲ್ಕ ತೀರಾ ಹೆಚ್ಚಾಯಿತು, ನಾವು ಇಷ್ಟು ಆಸೆಬುರುಕರಲ್ಲ, ನಾವು ನ್ಯಾಯಯುತವಾಗಿ ಸುಂಕ ವಸೂಲಿ ಮಾಡುತ್ತೇವೆ’’ ಎಂದು ತಿರುಗೇಟು ಕೊಟ್ಟಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ, ಇಂದಿನಿಂದ ಅಮೆರಿಕವನ್ನು ಅಧಿಕೃತವಾಗಿ ‘ಹಾರ್ಮುಜ್ ಜಲಸಂಧಿಯ ರಕ್ಷಕ’ ಎಂದು ಕರೆಯಲಾಗುತ್ತದೆ ಎಂದು ಘೋಷಿಸಿದ್ದರು. ಈ ಅಸ್ಥಿರ ಜಾಗಕ್ಕೆ ಭದ್ರತೆ ನೀಡಲು ತಗಲುವ ವೆಚ್ಚಕ್ಕಾಗಿ ಜಲಸಂಧಿಯ ಮೂಲಕ ಸಾಗುವ ಎಲ್ಲಾ ವಾಣಿಜ್ಯ ಸರಕುಗಳ ಮೇಲೆ ಶೇ. 20 ರಷ್ಟು ಸುಂಕ ವಿಧಿಸಲು ಮತ್ತು ಈ ಪ್ರಕ್ರಿಯೆಯನ್ನು ತಕ್ಷಣವೇ ಜಾರಿಗೆ ತರಲು ಮಿಲಿಟರಿಗೆ ಆದೇಶಿಸಿದ್ದಾರೆ.
ಮತ್ತಷ್ಟು ಓದಿ: ಇರಾನ್ನಿಂದ ಹಾರ್ಮುಜ್ ಜಲಸಂಧಿ ಬಂದ್, ಹಡಗಿನ ಮೇಲೆ ದಾಳಿ ಬೆನ್ನಲ್ಲೇ ಅಮೆರಿಕದಿಂದ ಭೀಕರ ಪ್ರತೀಕಾರ
ಇಂದಿನಿಂದ ಕಠಿಣ ದಿಗ್ಬಂಧನ ಆರಂಭ
ಈ ಆದೇಶದ ಬೆನ್ನಲ್ಲೇ ಅಮೆರಿಕದ ಸೆಂಟ್ರಲ್ ಕಮಾಂಡ್ , ಜುಲೈ 14 ರಂದು ಸಂಜೆಯಿಂದ ಇರಾನಿನ ಬಂದರುಗಳಿಗೆ ಪ್ರವೇಶಿಸುವ ಮತ್ತು ಅಲ್ಲಿಂದ ಹೊರಡುವ ಎಲ್ಲಾ ಸಮುದ್ರ ಸಂಚಾರದ ಮೇಲೆ ಹಡಗು ತಡೆ ದಿಗ್ಬಂಧನವನ್ನು ಪುನರಾರಂಭಿಸುವುದಾಗಿ ಪ್ರಕಟಿಸಿದೆ. ಈ ಜಲಮಾರ್ಗದಲ್ಲಿ ಸಂಚರಿಸುವ ಎಲ್ಲಾ ನೌಕೆಗಳು ಕಡ್ಡಾಯವಾಗಿ ಅಮೆರಿಕ ನೌಕಾಪಡೆಯ ಸೂಚನೆಗಳನ್ನು ಪಾಲಿಸಬೇಕು ಮತ್ತು ಬ್ರಿಡ್ಜ್ ಚಾನೆಲ್ 16 ರ ಮೂಲಕ ಸಂಪರ್ಕದಲ್ಲಿರಬೇಕು ಎಂದು ಎಚ್ಚರಿಸಿದೆ.
ಏನಿದು ಹಳೇ ಒಪ್ಪಂದದ ರಗಳೆ?
ಕಳೆದ ಜೂನ್ 18 ರವರೆಗೆ ಅಮೆರಿಕ ಇರಾನ್ ಮೇಲೆ ಇಂತಹದ್ದೇ ದಿಗ್ಬಂಧನ ಹೇರಿತ್ತು. ಆದರೆ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ನಡೆದ ರಹಸ್ಯ ಮಾತುಕತೆಯ ನಂತರ ಮಧ್ಯಂತರ ಒಪ್ಪಂದ ಏರ್ಪಟ್ಟು ಅದನ್ನು ಹಿಂಪಡೆಯಲಾಗಿತ್ತು. ಇರಾನ್ ಪ್ರಕಾರ, ಆ ಒಪ್ಪಂದದಂತೆ ತನಗೆ ಜಲಸಂಧಿಯ ಸಂಚಾರ ನಿಯಂತ್ರಿಸುವ ಮತ್ತು ತೆರಿಗೆ ವಿಧಿಸುವ ಹಕ್ಕಿದೆ.
ಆದರೆ ಅಮೆರಿಕ ಮಾತ್ರ ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಸಮುದ್ರ ಸಂಚಾರ ಎಲ್ಲರಿಗೂ ಮುಕ್ತವಾಗಿದ್ದು, ಇರಾನ್ನ ಒಪ್ಪಂದ ಮುಗಿದ ಕಥೆ ಎಂದು ವಾದಿಸುತ್ತಿದೆ. ಇಬ್ಬರು ಬಲಿಷ್ಠ ನಾಯಕರ ಈ ಜಿದ್ದಾಜಿದ್ದಿನ ನಡುವೆ ಜಾಗತಿಕ ವ್ಯಾಪಾರಸ್ಥರು ಸಮುದ್ರದ ಮಧ್ಯೆ ಸಿಲುಕಿ ತತ್ತರಿಸುವಂತಾಗಿದೆ.
ಜಾಗತಿಕ ಮಾರುಕಟ್ಟೆಯ ನಡುಕ ಮತ್ತು ಭಾರತದ ಮೇಲಿನ ಪ್ರಭಾವ
ಹಾರ್ಮುಜ್ ಜಲಸಂಧಿಯು ಭೂಮಿಯ ಮೇಲಿನ ಅತ್ಯಂತ ಸೂಕ್ಷ್ಮ ಮತ್ತು ಕಾವಲು ಕಾಯಲ್ಪಡುವ ಜಲಮಾರ್ಗವಾಗಿದೆ. ಜಗತ್ತಿನ ಒಟ್ಟು ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ (LNG) ಐದನೇ ಒಂದು ಭಾಗ (20%) ಕೇವಲ ಈ ಕಿರಿದಾದ ಜಲಸಂಧಿಯ ಮೂಲಕವೇ ಜಗತ್ತಿಗೆ ಸರಬರಾಜಾಗುತ್ತದೆ.
ಭಾರತಕ್ಕೆ ಭಾರಿ ಪೆಟ್ಟು: ಭಾರತವು ತನ್ನ ಕಚ್ಚಾ ತೈಲದ ಬಹುಪಾಲು ಭಾಗವನ್ನು ಸೌದಿ ಅರೇಬಿಯಾ, ಇರಾಕ್ ಮತ್ತು ಯುಎಇ ದೇಶಗಳಿಂದ ಇದೇ ಮಾರ್ಗದ ಮೂಲಕ ಆಮದು ಮಾಡಿಕೊಳ್ಳುತ್ತದೆ. ಒಂದು ವೇಳೆ ಟ್ರಂಪ್ ಹೇಳಿದಂತೆ ಶೇ. 20 ರಷ್ಟು ಶುಲ್ಕ ಜಾರಿಯಾದರೆ ಅಥವಾ ಇರಾನ್ ಜಲಸಂಧಿಯನ್ನು ಯುದ್ಧದ ಕಾರಣಕ್ಕೆ ಮುಚ್ಚಿಹಾಕಿದರೆ, ಜಾಗತಿಕವಾಗಿ ತೈಲ ಬೆಲೆಗಳು ಮತ್ತೊಮ್ಮೆ ಗಗನಕ್ಕೇರಲಿವೆ.
ಇದು ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕಾರಣವಾಗಿ ಭಾರಿ ಹಣದುಬ್ಬರ ಸೃಷ್ಟಿಸುವ ಆತಂಕವಿದೆ. 2026ರ ಫೆಬ್ರವರಿ 28 ರಂದು ಇರಾನ್ ಸುಪ್ರೀಂ ನಾಯಕ ಅಲಿ ಖಮೇನಿ ಸಾವಿನ ನಂತರ ಆರಂಭವಾದ ಈ ಸಂಘರ್ಷ ಈಗ ಜಾಗತಿಕ ಆರ್ಥಿಕತೆಯನ್ನೇ ಬುಡಮೇಲು ಮಾಡುವ ಹಂತಕ್ಕೆ ತಲುಪಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 7:25 am, Tue, 14 July 26