ಟೆಹ್ರಾನ್, ಏಪ್ರಿಲ್ 23: ಹಾರ್ಮುಜ್ ಜಲಸಂಧಿ(Hormuz Strait) ಮತ್ತೊಮ್ಮೆ ಜಾಗತಿಕ ಸಂಘರ್ಷದ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯ ನಡುವೆ, ಸಮುದ್ರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಮೂರು ಹಡಗುಗಳ ಮೇಲೆ ನಡೆದ ದಾಳಿ ಇಡೀ ಜಗತ್ತನ್ನು ಆತಂಕಕ್ಕೆ ತಳ್ಳಿದೆ. ಪಶ್ಚಿಮ ಏಷ್ಯಾದ ಅತ್ಯಂತ ನಿರ್ಣಾಯಕ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಯುದ್ಧದ ಕಾರ್ಮೋಡಗಳು ಮತ್ತಷ್ಟು ದಟ್ಟವಾಗಿವೆ. ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಗನ್ಬೋಟ್ಗಳು ಮೂರು ಪ್ರತ್ಯೇಕ ವ್ಯಾಪಾರಿ ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸುವ ಮೂಲಕ ಅಂತಾರಾಷ್ಟ್ರೀಯ ಸಮುದ್ರ ಭದ್ರತೆಗೆ ಸವಾಲು ಹಾಕಿವೆ.
ಒಮಾನ್ನ ಈಶಾನ್ಯಕ್ಕೆ ಸಂಚರಿಸುತ್ತಿದ್ದ ಲೈಬೀರಿಯನ್ ಧ್ವಜವನ್ನು ಹೊಂದಿರುವ ಹಡಗು ಈ ದಾಳಿಗೆ ಗುರಿಯಾಗಿದೆ. ಹಡಗಿನ ಕ್ಯಾಪ್ಟನ್ ನೀಡಿರುವ ಮಾಹಿತಿ ಪ್ರಕಾರ, ಐಆರ್ಜಿಸಿಯ ಗನ್ಬೋಟ್ ಅತಿ ವೇಗವಾಗಿ ಹಡಗಿನ ಸಮೀಪಕ್ಕೆ ಬಂದಿತ್ತು. ಅಷ್ಟರಲ್ಲಿ ಗನ್ಬೋಟ್ನಲ್ಲಿದ್ದ ಮೂವರು ವ್ಯಕ್ತಿಗಳು ಹಡಗಿನ ಸೇತುವೆಯ (Bridge) ಭಾಗವನ್ನು ಗುರಿಯಾಗಿಸಿಕೊಂಡು ಮನಬಂದಂತೆ ಗುಂಡು ಹಾರಿಸಿದರು. ದಾಳಿಯ ಬೆನ್ನಲ್ಲೇ ಒಂದು ಹಡಗಿನಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು.
ಗುಂಡಿನ ದಾಳಿ ನಡೆದರೂ ಮತ್ತು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡರೂ, ಮೂರೂ ಹಡಗುಗಳಲ್ಲಿರುವ ಸಿಬ್ಬಂದಿ ವರ್ಗಕ್ಕೆ ಯಾವುದೇ ಅಪಾಯ ಸಂಭವಿಸಿಲ್ಲ. ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಮತ್ತು ಹಡಗುಗಳಿಗೆ ಯಾವುದೇ ಗಮನಾರ್ಹ ಹಾನಿಯಾಗಿಲ್ಲ ಎಂದು ಯುನೈಟೆಡ್ ಕಿಂಗ್ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ದೃಢಪಡಿಸಿದೆ.
ಮತ್ತಷ್ಟು ಓದಿ: ಎಲ್ಲ ದೇಶಗಳ ಕಮರ್ಷಿಯಲ್ ಹಡಗಿಗೂ ಹಾರ್ಮುಜ್ ಜಲಸಂಧಿ ತೆರೆದಿದೆ; ಇರಾನ್ ಮಹತ್ವದ ಘೋಷಣೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕದನ ವಿರಾಮವನ್ನು ವಿಸ್ತರಿಸುವುದಾಗಿ ಘೋಷಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿರುವುದು ರಾಜತಾಂತ್ರಿಕ ವಲಯದಲ್ಲಿ ಆಶ್ಚರ್ಯ ಮೂಡಿಸಿದೆ. ಟ್ರಂಪ್ ಅವರು ಇರಾನ್ ಮೇಲೆ ಆರ್ಥಿಕ ದಿಗ್ಬಂಧನ ಹೇರಿದ್ದರೂ, ಮಾನವೀಯ ನೆಲೆಯಲ್ಲಿ ದಾಳಿಯನ್ನು ತಡೆಹಿಡಿದಿದ್ದರು. ಆದರೆ, ಇರಾನ್ನ ಈ ಉದ್ಧಟತನವು ಟ್ರಂಪ್ ಅವರ ಮುಂದಿನ ನಿರ್ಧಾರದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.
ಹಾರ್ಮುಜ್ ಜಲಸಂಧಿಯು ವಿಶ್ವದ ಒಟ್ಟು ತೈಲ ವ್ಯಾಪಾರದ ಬಹುಪಾಲು ಪಾಲನ್ನು ನಿರ್ವಹಿಸುತ್ತದೆ. ಈ ಮಾರ್ಗದಲ್ಲಿ ಹಡಗುಗಳ ಮೇಲೆ ದಾಳಿ ನಡೆಯುತ್ತಿರುವುದು ತೈಲ ಬೆಲೆ ಏರಿಕೆಗೆ ಮತ್ತು ಜಾಗತಿಕ ಸರಬರಾಜು ಸರಪಳಿಯ ಮೇಲೆ ಪರಿಣಾಮ ಬೀರಬಹುದು ಎಂದು ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ