
ನವದೆಹಲಿ, ಮಾರ್ಚ್ 29: ಇರಾನ್ ಯುದ್ಧ ಶುರುವಾದ ಬಳಿಕ ಎಲ್ಲರ ಗಮನ ಹಾರ್ಮುಜ್ ಜಲಸಂಧಿಯತ್ತ (Strait of Hormuz) ನೆಟ್ಟಿದೆ. ಗಲ್ಫ್ ರಾಷ್ಟ್ರಗಳಿಂದ ಬರುವ ತೈಲ ಹಡಗುಗಳಿಗೆ ಇರಾನ್ ತಡೆ ಹಾಕಿದೆ. ಇದರಿಂದ ಜಾಗತಿಕವಾಗಿ ತೈಲ ಬೆಲೆ ಏರಿಕೆಯಾಗುವಂತಾಗಿದೆ. ಹಾರ್ಮುಜ್ ಜಲಸಂಧಿ ಮಾರ್ಗವನ್ನು ಮುಕ್ತಗೊಳಿಸಲು ಅಮೆರಿಕ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಪರ್ಷಿಯನ್ ಗಲ್ಫ್ ಮತ್ತು ಅರೇಬಿಯನ್ ಸಮುದ್ರಕ್ಕೆ ಕೊಂಡಿಯಾಗಿರುವ ಈ ಜಲಸಂಧಿ ಮೂಲಕ ವಿಶ್ವದ ಶೇ. 20ರಷ್ಟು ತೈಲವು ಹಡಗುಗಳಿಂದ ಸಾಗಿ ಹೋಗುತ್ತದೆ. ಇದೇ ಹೊತ್ತಲ್ಲಿ ಈಗ ಮತ್ತೊಂದು ಜಲಸಂಧಿ ಸುದ್ದಿಗೆ ಬಂದಿದೆ. ಅದುವೇ ಬಾಬ್ ಎಲ್ ಮಂಡೇಬ್ ಸ್ಟ್ರೇಟ್ (Bab el-Mandeb strait).
ಇದು ರೆಡ್ ಸೀ ಅಥವಾ ಕೆಂಪು ಸಮುದ್ರದಲ್ಲಿರುವ ಒಂದು ಕಿರಿದಾದ ಜಲಮಾರ್ಗ. ಈಜಿಪ್ಟ್ನ ಸೂಜ್ ಕೆನಾಲ್ಗೆ (Suez Canal) ಹೋಗಬೇಕಾದರೆ ಈ ಜಲಸಂಧಿ ಮೂಲಕವೇ ಹಡಗುಗಳು ಸಾಗಬೇಕು. ಕುತೂಹಲ ಎಂದರೆ ಈ ಬಾಬ್ ಎಲ್ ಮಂಡೇಬ್ ಎಂದರೆ ಅರೇಬಿಕ್ ಭಾಷೆಯಲ್ಲಿ ಕಣ್ಣೀರ ದ್ವಾರ. ಇದರ ಆಜುಬಾಜಿನಲ್ಲಿರುವ ದೇಶಗಳಲ್ಲಿ ಯೆಮೆನ್ ಕೂಡ ಒಂದು. ಈ ವಿಚಾರವೇ ಈಗ ಜಾಗತಿಕ ಭೀತಿಗೆ ಕಾರಣವಾಗಿರುವುದು.
ಇದನ್ನೂ ಓದಿ: ಹಾರ್ಮುಜ್ ಜಲಸಂಧಿ, ಖಾರ್ಗ್ ದ್ವೀಪದ ಮೇಲೆ ದಾಳಿ ಮಾಡುತ್ತಾ ಅಮೆರಿಕ, 3,500 ಸೈನಿಕರನ್ನು ನಿಯೋಜಿಸಿರುವುದೇಕೆ?
ಯೆಮೆನ್ನಲ್ಲಿ ಇರಾನ್ ಬೆಂಬಲಿತ ಹೌತಿ ಬಂಡುಕೋರರ ಸಂಘಟನೆಯ ಉಪಸ್ಥಿತಿ ಇದೆ. ಇರಾನ್ ಸೂಚನೆ ಕೊಟ್ಟರೆ ಹೌತಿ ಬಂಡುಕೋರರು ಈ ಜಲಸಂಧಿಯಲ್ಲಿ ದಾಳಿ ಶುರು ಹಚ್ಚಿಕೊಳ್ಳಬಹುದು. ಬಾಬೆಲ್ ಮಂಡೆಬ್ ಜಲಸಂಧಿ ಬಹಳ ಮುಖ್ಯವಾದ ಟ್ರೇಡಿಂಗ್ ರೂಟ್ನಲ್ಲಿ ಇದೆ. ಇದಕ್ಕೆ ತಡೆ ಬಿದ್ದರೆ ಹಾರ್ಮುಜ್ ಜಲಸಂಧಿಗಿಂತಲೂ ಪರಿಣಾಮ ಘೋರವಾಗಿರುತ್ತದೆ.
ಹಾರ್ಮುಜ್ ಜಲಸಂಧಿಯಲ್ಲಿ ಬಹುತೇಕ ನೌಕೆಗಳು ತೈಲ ಸಾಗಣೆ ಮಾಡುತ್ತವೆ. ಆದರೆ, ಬಾಬೆಲ್ ಮಂಡೇಬ್ ಜಲಸಂಧಿ ಇನ್ನೂ ದೊಡ್ಡ ವ್ಯಾಪಾರ ಮಾರ್ಗಕ್ಕೆ ಬರುತ್ತದೆ. ತೈಲವಷ್ಟೇ ಅಲ್ಲ, ಹಲವು ಸರಕುಗಳ ಸಾಗಣೆಯಾಗುತ್ತದೆ. ಏಷ್ಯಾ ಮತ್ತು ಯೂರೋಪ್ ನಡುವೆ ಹಡಗುಗಳು ಸಾಗಲು ಇದೇ ಜಲಸಂಧಿಯನ್ನು ದಾಟಿ ಹೋಗಬೇಕು. ವಿಶ್ವದ ಅತ್ಯಂತ ನಿರತವಾಗಿರುವ ಮತ್ತು ಬಹಳ ಮುಖ್ಯವಾಗಿರುವ ಜಲಮಾರ್ಗದಲ್ಲಿ ಬಾಬ್ ಎಲ್ ಮಂಡೆಬ್ ಜಲಸಂಧಿ ಇದೆ.
ವಿಶ್ವದ ಶೇ. 10ಕ್ಕಿಂತಲೂ ಹೆಚ್ಚು ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆ, ಶೇ. 12ರಷ್ಟು ಜಾಗತಿಕ ಟ್ರೇಡಿಂಗ್ಗಳು ಈ ಜಲಸಂಧಿಯನ್ನು ಮುಟ್ಟಿ ಹೋಗಬೇಕು.
ಇದನ್ನೂ ಓದಿ: ಪರ್ಷಿಯನ್ ಶಾರ್ಕ್ಗಳಿಗೆ ಆಹಾರವಾಗುತ್ತಾರೆ ಅಮೆರಿಕನ್ ಸೈನಿಕರು: ಇರಾನ್ ಎಚ್ಚರಿಕೆ
ರೆಡ್ ಸೀ ಮಾರ್ಗದಲ್ಲಿ ಒಂದು ವರ್ಷದಲ್ಲಿ ಈ ಮೊದಲು 26,000 ಹಡಗುಗಳು ಸಾಗುತ್ತಿದ್ದವು. ಹೌತಿಗಳ ದಾಳಿ ಘಟನೆಗಳು ಶುರುವಾದ ಮೇಲೆ 2025ರಲ್ಲಿ ಇಲ್ಲಿ ಸಾಗುವ ಹಡಗುಗಳ ಸಂಖ್ಯೆ ಅರ್ಧದಷ್ಟು ಕಡಿಮೆ ಆಗಿದೆ. ಭಾರತದ ಬಹಳಷ್ಟು ಸರಕುಗಳನ್ನು ಹೊತ್ತ ಹಡಗುಗಳು ಈ ಮಾರ್ಗದಲ್ಲಿ ಹೋಗುತ್ತವೆ. ಇಲ್ಲಿ ಹೌತಿಗಳಿಂದ ಜಲಸಂಧಿಗೆ ಪೂರ್ಣ ತಡೆ ಬಿದ್ದರೆ ಭಾರತದ ಆರ್ಥಿಕತೆಗೆ ದೊಡ್ಡ ಹೊಡೆತ ಕೊಡುವ ಸಾಧ್ಯತೆ ಇದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ