ನವದೆಹಲಿ, ಮಾರ್ಚ್ 4: ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಗಲ್ಫ್ ಮತ್ತು ಅರೇಬಿಯನ್ ಸಮುದ್ರವನ್ನು ಸಂಪರ್ಕಿಸುವ ಹಾರ್ಮುಜ್ ಜಲಸಂಧಿ (Strait of Hormuz) ಬಹಳ ಸೂಕ್ಷ್ಮ ಜಲಮಾರ್ಗವಾಗಿದೆ. ಕೊಲ್ಲಿ ದೇಶಗಳಿಂದ ತೈಲಗಳು ಇಲ್ಲಿಂದ ಬೇರೆ ಕಡೆಗೆ ಹಡಗುಗಳ ಮೂಲಕ ಸಾಗಣೆ ಆಗುತ್ತವೆ. ಇಸ್ರೇಲ್ ಮತ್ತು ಅಮೆರಿಕವು ಇರಾನ್ ಮೇಲೆ ಆಕ್ರಮಣ ಮಾಡಿರುವುದರಿಂದ ಪರಿಸ್ಥಿತಿ ಬಿಗಡಾಯಿಸಿದೆ. ಈ ಜಲಸಂಧಿಯ ನಿಕಟ ಸ್ಥಳದಲ್ಲಿ ಇರುವ ಇರಾನ್, ಈ ಮಾರ್ಗಕ್ಕೆ ತಡೆ ಹಾಕಿದೆ. ಆದರೆ, ಚೀನಾದ ಹಡುಗಳಿಗೆ ಮಾತ್ರ ಇಲ್ಲಿ ಸಾಗಲು ಅವಕಾಶ ಕೊಡುವುದಾಗಿ ಇರಾನ್ ಹೇಳಿದೆ. ಈ ಮಾಹಿತಿಯನ್ನು ಎನ್ಡಿಟಿವಿ ತನ್ನ ಕೆಲ ಮೂಲಗಳನ್ನು ಉಲ್ಲೇಖಿಸಿ ನೀಡಿದೆ.
ಇರಾನ್ನ 17 ಹಡಗುಗಳು, ಸಬ್ಮರೀನ್ಗಳನ್ನು ಉಡಾಯಿಸಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಳ್ಳುತ್ತಿರುವ ಹೊತ್ತಲ್ಲೇ ಇರಾನ್ ಈ ನಿರ್ಧಾರ ತೆಗೆದುಕೊಂಡಿರುವುದು, ಯಾವುದು ನಿಜ, ಯಾವುದು ಸುಳ್ಳು ಎನ್ನುವ ಗೊಂದಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಪೆಟ್ರೋಲ್ ಕೊರತೆ ಎದುರಾಗದಂತೆ ಎಚ್ಚರವಹಿಸಲು ಮುನ್ನೆಚ್ಚರಿಕೆಯ ಪ್ಲಾನ್ ಹಾಕಿದ ಭಾರತ
ಪಶ್ಚಿಮ ಏಷ್ಯನ್ ಬಿಕ್ಕಟ್ಟಿನಲ್ಲಿ ಇರಾನ್ ದೇಶಕ್ಕೆ ಬಹಿರಂಗವಾಗಿ ಬೆಂಬಲ ನೀಡುತ್ತಿರುವ ಶಕ್ತಿಗಳಲ್ಲಿ ರಷ್ಯಾ ಮತ್ತು ಚೀನಾ ಪ್ರಮುಖವಾದುವು. ಇರಾನ್ನ ಡಿಫೆನ್ಸ್ ಶಕ್ತಿಗೆ ಚೀನಾವೇ ಆಧಾರ. ಅಮೆರಿಕದ ಆರ್ಥಿಕ ಮತ್ತು ರಾಜಕೀಯ ದಿಬ್ಬಂಧನದ ಕಠಿಣ ಪರಿಸ್ಥಿತಿಯನ್ನು ಸಂಭಾಳಿಸಲು ಇರಾನ್ಗೆ ನೆರವಾಗಿರುವುದು ಚೀನಾ ದೇಶ. ಚೀನಾ ದೇಶಕ್ಕೆ ಗಲ್ಫ್ ಭಾಗದಿಂದ ತೈಲ ಪೂರೈಕೆ ಅಗತ್ಯ ಬಹಳ ಇದೆ. ಹೀಗಾಗಿ, ಹಾರ್ಮುಜ್ ಜಲಸಂಧಿಯಲ್ಲಿ ಸಾಗಲು ಚೀನಾದ ನೌಕೆಗಳಿಗೆ ಮಾತ್ರವೇ ಅವಕಾಶ ಕೊಡಲು ಇರಾನ್ ನಿರ್ಧರಿಸಿದ್ದರೆ ಅದು ಸಹಜ.
ಭಾರತಕ್ಕೆ ಅಗತ್ಯಬಿದ್ದರೆ ತಾನು ತೈಲ ನೀಡುವುದಾಗಿ ರಷ್ಯಾ ಹೇಳಿಕೆ
ಪಿಟಿಐ ವರದಿ ಪ್ರಕಾರ, ತೈಲ ಪೂರೈಕೆ ವಿಚಾರದಲ್ಲಿ ಭಾರತಕ್ಕೆ ನೆರವಿನ ಹಸ್ತ ಚಾಚಲು ರಷ್ಯಾ ಸಿದ್ಧವಿದೆ. ಭಾರತಕ್ಕೆ ಬೇಕಾದ ತೈಲ ಮತ್ತು ಅನಿಲಗಳನ್ನು ತಾನು ಪೂರೈಸುವುದಾಗಿ ರಷ್ಯಾ ಹೇಳಿದೆಯಂತೆ.
ಇದನ್ನೂ ಓದಿ: ಜನವರಿವರೆಗೂ ಭಾರತದ ಒಟ್ಟಾರೆ ರಫ್ತು 720 ಬಿಲಿಯನ್ ಡಾಲರ್; ಹಿಂದಿನ ವರ್ಷದಕ್ಕಿಂತ ಶೇ. 6.15 ಹೆಚ್ಚಳ
‘ಇಂಧನ ಪೂರೈಕೆಯಲ್ಲಿ ಇದೇ ರೀತಿ ವ್ಯತ್ಯಯಗಳು ಮುಂದುವರಿದಲ್ಲಿ ಭಾರತದ ಇಂಧನ ಅಗತ್ಯಗಳನ್ನು ಪೂರೈಸಲು ನಾವು ಸಿದ್ಧರಿದ್ದೇವೆ’ ಎಂದು ರಷ್ಯಾದ ರಾಯಭಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಮೆರಿಕದ ಒತ್ತಡದಿಂದಾಗಿ ಭಾರತವು ರಷ್ಯಾದಿಂದ ತೈಲ ಪೂರೈಕೆಯನ್ನು ಕಡಿಮೆ ಮಾಡಿದೆ. ಗಲ್ಫ್ ರಾಷ್ಟ್ರಗಳಿಂದ ಹೆಚ್ಚಿನ ತೈಲ ಖರೀದಿ ಮಾಡುತ್ತಿದೆ. ಆದರೆ, ಈಗ ಆ ಪ್ರದೇಶದಲ್ಲೇ ಬಿಕ್ಕಟ್ಟು ಉದ್ಭವವಾಗಿದೆ. ಭಾರತದ ಪೆಟ್ರೋಲ್, ಡೀಸಲ್, ಎಲ್ಎನ್ಜಿ, ಎಲ್ಪಿಜಿ ದಾಸ್ತಾನು ಹೆಚ್ಚು ದಿನಕ್ಕೆ ಸಾಕಾಗುವುದಿಲ್ಲ. ಹೀಗಾಗಿ, ಭಾರತಕ್ಕೆ ಕಠಿಣವೆನಿಸುವ ಸಂದರ್ಭವಿದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ