ಜೇಸನ್ ಮೊಮೊವಾ (Jason Momoa) ಅಂದರೆ ಹೆಚ್ಚು ಜನರಿಗೆ ಗೊತ್ತಾಗುವುದಿಲ್ಲ ಅದೇ ‘ಆಕ್ವಾಮನ್’ ಎಂದರೆ ಥಟ್ಟನೆ ಹೊಳೆಯುತ್ತದೆ. ಹಾಲಿವುಡ್ನ ಜನಪ್ರಿಯ ಸೂಪರ್ ಹೀರೋ ಸಿನಿಮಾಗಳಲ್ಲಿ ಒಂದಾಗಿರುವ ‘ಆಕ್ವಾಮನ್’ ಪಾತ್ರಧಾರಿ ಝೇಸನ್ ಮೊಮೊವಾ ಅವರಿಗೆ ಬಾಲಿವುಡ್ಗೆ ಬರುವ ಆಸೆಯಂತೆ. ಈ ಬಗ್ಗೆ ಮಾತನಾಡಿರುವ ಹಾಲಿವುಡ್ ಸ್ಟಾರ್ ನಟ, ತಮಗೆ ಭಾರತೀಯ ಚಿತ್ರರಂಗ ಪ್ರವೇಶಿಸಲು ಬಾಲಿವುಡ್ನ ನಟನ ಸಹಾಯ ಅಗತ್ಯವಿದೆ ಎಂದು ಮನವಿ ಸಹ ಮಾಡಿದ್ದಾರೆ.
ಹಾಲಿವುಡ್ ತಾರೆ ಜೇಸನ್ ಮೊಮೊವಾ ಇದೀಗ ‘ಸ್ಟ್ರೀಟ್ ಫೈಟರ್’ ಸಿನಿಮಾನಲ್ಲಿ ನಟಿಸಿದ್ದಾರೆ. ಇದೇ ಸಿನಿಮಾನಲ್ಲಿ ಭಾರತೀಯ ನಟ ವಿದ್ಯುತ್ ಜಾಮ್ವಾಲ್ ಸಹ ನಟಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿರುವ ಜೇಸನ್ ಮೊಮೊವಾ, ‘ನಾನು ನೋಡಿದ ಅತ್ಯಂತ ಸುಂದರ ವ್ಯಕ್ತಿಗಳಲ್ಲಿ ಒಬ್ಬರು’ ಎಂದು ವಿದ್ಯುತ್ ಜಾಮ್ವಾಲ್ ಅವರನ್ನು ಬಣ್ಣಿಸಿದ್ದಾರೆ. ಅಲ್ಲದೆ ತಮಗೆ ಬಾಲಿವುಡ್ ಚಿತ್ರರಂಗಕ್ಕೆ ಪ್ರವೇಶಿಸಲು ವಿದ್ಯುತ್ ಸಹಾಯ ಮಾಡಬೇಕೆಂದು ಹೇಳಿದ್ದಾರೆ.
ವಿದ್ಯುತ್ ಅವರು ತಮಗೆ ಭಾರತೀಯ ಚಿತ್ರರಂಗದಲ್ಲಿ (ಬಾಲಿವುಡ್) ಕೆಲಸ ಪಡೆಯಲು ಸಹಾಯ ಮಾಡಬೇಕೆಂದು ತಮಾಷೆಯಾಗಿ ಹೇಳಿದ್ದಾರೆ. ‘ಅವರು (ವಿದ್ಯುತ್) ನನಗೆ ಬಾಲಿವುಡ್‌ನಲ್ಲಿ ಕೆಲಸ ಕೊಡಿಸಬೇಕು. ನಾವಿಬ್ಬರೂ ಸೇರಿ ಏನಾದರೂ ವಿಶೇಷ ಮಾಡಬೇಕು, ಅದು ಖುಷಿ ಕೊಡುತ್ತದೆ. ನಾನು ಹೇಳಿದ್ದೇನೆ, ಅದಕ್ಕೆ ಬದ್ಧನಾಗಿದ್ದೇನೆ. ಒಂದಲ್ಲ ಒಂದು ದಿನ ಭಾರತಕ್ಕೆ ಬರಲು ನಾನು ಕಾಯುತ್ತಿದ್ದೇನೆ’ ಎಂದು ಜೇಸನ್ ತಮ್ಮ ಆಸೆಯನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ರಶ್ಮಿಕಾ-ವಿಜಯ್ ಚಿತ್ರಕ್ಕೆ ವಿಲನ್ ಆದ ಹಾಲಿವುಡ್ನ ‘ದಿ ಮಮ್ಮಿ’ ಚಿತ್ರದ ಖಳ
‘ಸ್ಟ್ರೀಟ್ ಫೈಟರ್’ ಸಿನಿಮಾ ಮೂಲಕ ವಿದ್ಯುತ್ ಜಮ್ವಾಲ್ ಹಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ಅವರು ‘ಧಾಲ್ಸಿಮ್’ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಬೋಳು ತಲೆ, ಗಂಭೀರ ನೋಟ ಮತ್ತು ವಿಭಿನ್ನ ಅವತಾರದಲ್ಲಿ ವಿದ್ಯುತ್ ಕಾಣಿಸಿಕೊಂಡಿದ್ದು, ಅವರ ಈ ಹೊಸ ಲುಕ್ ಎಲ್ಲರ ಗಮನ ಸೆಳೆದಿದೆ. ‘ಸ್ಟ್ರೀಟ್ ಫೈಟರ್’ ಬಲು ಜನಪ್ರಿಯ ಗೇಮ್ ಒಂದರಿಂದ ಸ್ಪೂರ್ತಿ ಪಡೆದು ನಿರ್ಮಿಸಲಾಗಿರುವ ಸಿನಿಮಾ ಆಗಿದೆ. ಈ ಸಿನಿಮಾ ಅಕ್ಟೋಬರ್ 16ರಂದು ತೆರೆಗೆ ಬರಲಿದೆ.
ಜೇಸನ್ ಮೊಮೊವಾ, ಹಾಲಿವುಡ್ನ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದಾರೆ. ‘ಗೇಮ್ ಆಫ್ ಥ್ರೋನ್ಸ್’ ನಕ್ಲಿ ಕಾರ್ಲ್ಸ್ ಡ್ರಾಗೊ ಪಾತ್ರದಲ್ಲಿ ನಟಿಸಿದ್ದ ಜೇಸನ್ ಅವರಿಗೆ ಭಾರಿ ಹೆಸರು ತಂದುಕೊಟ್ಟಿದ್ದು ‘ಆಕ್ವಮಾನ್’ ಸಿನಿಮಾ. ಆ ಬಳಿಕ ಅವರು ಸೂಪರ್ ಮ್ಯಾನ್, ಬ್ಯಾಟ್ಮ್ಯಾನ್ ಸಿನಿಮಾಗಳಲ್ಲಿ, ‘ಜಸ್ಟಿಸ್ ಲೀಗ್’ ಸಿನಿಮಾಗಳಲ್ಲಿಯೂ ನಟಿಸಿದರು. ಇತ್ತೀಚೆಗೆ ಬಂದ ‘ತ್ರಿಬಲ್ ಎಕ್ಸ್’ ಸಿನಿಮಾನಲ್ಲಿ ವಿಲನ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಈಗ ಭಾರತೀಯ ಸಿನಿಮಾಗಳಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ