ರಾಜ್ ಬಿ ಶೆಟ್ಟಿ (Raj B Shetty) ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ದೇಶಕರು. ನಿರ್ಮಾಪಕರಾಗಿಯೂ ದೊಡ್ಡ ಯಶಸ್ಸನ್ನು ‘ಸು ಫ್ರಂ ಸೋ’ ಸಿನಿಮಾದ ಮೂಲಕ ಗಳಿಸಿದ್ದಾರೆ. ‘ಒಂದು ಮೊಟ್ಟೆಯ ಕತೆ’, ‘ಗರುಡ ಗಮನ ವೃಷಭ ವಾಹನ’ ಸಿನಿಮಾಗಳ ಮೂಲಕ ಹೊಸ ಅಲೆಯನ್ನೇ ಎಬ್ಬಿಸಿದ್ದ ರಾಜ್ ಬಿ ಶೆಟ್ಟಿ ಅವರು ನಟನಾಗಿ ಕನ್ನಡ ಮಾತ್ರವಲ್ಲದೇ ಪರ ಭಾಷೆಗಳಲ್ಲಿಯೂ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಈಗಾಗಲೇ ಮಲಯಾಳಂನ ಕೆಲ ಸಿನಿಮಾಗಳಲ್ಲಿ ನಟಿಸಿರುವ ಬಂದಿರುವ ರಾಜ್ ಬಿ ಶೆಟ್ಟಿ ಇದೀಗ ಹಿಂದಿಗೆ ಕಾಲಿಟ್ಟಿದ್ದಾರೆ.
ರಾಜ್ ಬಿ ಶೆಟ್ಟಿ ಅವರು ಹಿಂದಿಯಲ್ಲಿ ನಟಿಸಿರುವ ಮೊದಲ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದ್ದು, ಉತ್ತರ ಭಾರತದ ಸಿನಿಮಾ ಪ್ರೇಮಿ ಇನ್ಫ್ಲ್ಯುಯೆನ್ಸರ್ಗಳು ರಾಜ್ ಬಿ ಶೆಟ್ಟಿಯ ಮೇಲೆ ಕಣ್ಣಿಟ್ಟಿದ್ದಾರೆ. ರಾಜ್ ಬಿ ಶೆಟ್ಟಿ, ‘ಬಂದರ್’ ಹೆಸರಿನ ಹಿಂದಿ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಟ್ರೈಲರ್ನಲ್ಲಿ ರಾಜ್ ಬಿ ಶೆಟ್ಟಿ ಸಹ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
‘ಬಂದರ್’ ಭಿನ್ನ ಕತೆಯ ಸಿನಿಮಾ ಎಂಬುದು ಸಿನಿಮಾದ ಟ್ರೈಲರ್ನಿಂದಲೇ ತಿಳಿದು ಬರುತ್ತಿದೆ. ಸಿನಿಮಾದ ಮುಖ್ಯ ಪಾತ್ರದಲ್ಲಿ ಖ್ಯಾತ ಬಾಲಿವುಡ್ ನಟ ಬಾಬಿ ಡಿಯೋಲ್ ನಟಿಸಿದ್ದಾರೆ. ಟ್ರೈಲರ್, ಕತೆಯ ಸುಳಿವುನ್ನು ಬಿಟ್ಟುಕೊಡುತ್ತಿಲ್ಲವಾದರೂ ಕತೆಯಂತೂ ಬಹಳ ಭಿನ್ನವಾಗಿರುವುದು ತಿಳಿದು ಬರುತ್ತಿದೆ. ಸೆಲೆಬ್ರಿಟಿ ಒಬ್ಬ ಡೇಟಿಂಗ್ ಆಪ್ನಿಂದಾಗಿ ಜೈಲು ಸೇರುವ ಕತೆಯನ್ನು ಸಿನಿಮಾ ಒಳಗೊಂಡಿದೆ.
ರಾಜ್ ಬಿ ಶೆಟ್ಟಿ ಅವರ ‘ಗರುಡ ಗಮನ’ ದಲ್ಲಿದ್ದ ರೀತಿಯ ಪಾತ್ರದಲ್ಲಿಯೇ ಕಾಣಿಸಿಕೊಂಡಿರುವಂತಿದೆ. ಶೆಟ್ಟರು ಜೈಲಿನಲ್ಲಿ ಸಹ ಖೈದಿಯೊಬ್ಬನ ಜೊತೆಗೆ ಖುಷಿಯಿಂದ ಡ್ಯಾನ್ಸ್ ಮಾಡುತ್ತಿರುವ ಸಣ್ಣ ದೃಶ್ಯದ ತುಣುಕು ಟ್ರೈಲರ್ನಲ್ಲಿದೆ. ವಿಲನ್ ಗುಂಪಿನ ಸದಸ್ಯರಾಗಿ ರಾಜ್ ಬಿ ಶೆಟ್ಟಿ ನಟಿಸಿದಂತಿದೆ.
ಸಿನಿಮಾವನ್ನು ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದಾರೆ. ಸಹ ನಿರ್ದೇಶಕ ಸಾಕ್ಷಿ ಮೆಹ್ತಾ ಅವರದ್ದು. ಕತೆ ಬರೆದಿರುವುದು ಸುದೀಪ್ ಶರ್ಮಾ, ಅಭಿಷೇಕ್ ಬ್ಯಾನರ್ಜಿ. ಸಿನಿಮಾನಲ್ಲಿ ಬಾಬಿ ಡಿಯೋಲ್, ರಾಜ್ ಬಿ ಶೆಟ್ಟಿ, ‘ದಂಗಲ್’ ನಟಿ ಸಾನ್ಯಾ ಮಲ್ಹೋತ್ರಾ, ಇಂದ್ರಜಿತ್ ಸುಕುಮಾರನ್ ಇನ್ನೂ ಹಲವು ಪ್ರತಿಭಾವಂತ ನಟರು ನಟಿಸಿದ್ದಾರೆ. ಸಿನಿಮಾ ಜೂನ್ 5 ಕ್ಕೆ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ