ಹಿಂದಿನ ತಪ್ಪು ನಿರ್ಧಾರಗಳಿಂದ ಪಾಠ ಕಲಿತ ‘ಕೈ’ ಕಮಾಂಡ್​​: ಕರ್ನಾಟಕ ವಿಷಯದಲ್ಲಿ ಎಚ್ಚರಿಕೆಯ ನಡೆ

ಬೆಂಗಳೂರು, ಮೇ 28: ವಿವಿಧ ರಾಜ್ಯಗಳಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಎಡವಿದ್ದ ಕಾಂಗ್ರೆಸ್​​ (Congress) ಹೈಕಮಾಂಡ್ ಕರ್ನಾಟಕ ಕಾಂಗ್ರೆಸ್​​ನಲ್ಲಿ ತಲೆದೋರಿದ್ದ ಅಧಿಕಾರ ಹಂಚಿಕೆಯ ಕಗ್ಗಂಟನ್ನು ಯಶಸ್ವಿಯಾಗಿ ಬಿಡಿಸಿದೆ. ಸಿಎಂ‌ ಬದಲಾವಣೆ ಎಂಬ ಬೆಟ್ಟದಂತ ಸಮಸ್ಯೆ ಯನ್ನು ವರಿಷ್ಠರು ಯಶ್ವಸಿಯಾಗಿ ನಿರ್ವಹಿಸಿದೆ. ಈ ಹಿಂದೆ ವಿವಿಧ ರಾಜ್ಯ್ಲಲ್ಲಿ ನಾಯಕರ ತಪ್ಪು ನಿರ್ಧಾರದಿಂದ ಪಕ್ಷಕ್ಕೆ ಭಾರಿ ನಷ್ಟ ಉಂಟಾಗಿತ್ತು. ಹಲವು ರಾಜ್ಯಗಳೇ ಕಾಂಗ್ರೆಸ್​​ ಕೈತಪ್ಪಿ ಹೋಗಿತ್ತು ಎನ್ನುವುದು ಇತಿಹಾಸ.

ಪಂಜಾಬ್​​ನಲ್ಲಿ ಅಮರಿಂದರ್ ಸಿಂಗ್ vs ಸಿಧು

ಪಂಜಾಬ್​​ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿಧು ನಡುವಿನ ಭಿನ್ನಾಭಿಪ್ರಾಯದ ಹಿನ್ನೆಲೆ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಬದಲಾವಣೆ ಮಾಡಲಾಗಿತ್ತು.ಚುನಾವಣೆಗೆ ಕೆಲವೇ ತಿಂಗಳುಗಳ ಮುನ್ನ ಕ್ಯಾಪ್ಟರನ್ನು ಇಳಿಸಿ ಚರಣ್‌ಜಿತ್ ಸಿಂಗ್ ಚನ್ನಿಗೆ ವರಿಷ್ಠರು ಪಟ್ಟ ಕಟ್ಟಿದ್ದರು. ಆದರೆ ಸಿಧು ಮತ್ತು ಚನ್ನಿ ನಡುವಿನ ಆಂತರಿಕ ಕಲಹ ಬೀದಿಗೆ ಬಂದ ಪರಿಣಾಮ 2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲುಂಡಿತ್ತು.

ಇದನ್ನೂ ಓದಿ: ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

ಮಧ್ಯಪ್ರದೇಶದಲ್ಲಿ ಕಮಲ್​​ನಾಥ್ vs ಸಿಂಧಿಯಾ

ಮಧ್ಯಪ್ರದೇಶದಲ್ಲಿ 2018ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಹಿರಿಯ ನಾಯಕ ಕಮಲ್​​ನಾಥ್ ಅವರಿಗೆ ಸಿಎಂ ಪಟ್ಟ ನೀಡಲಾಗಿತ್ತು. ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಹೈಕಮಾಂಡ್ ಸಂಪೂರ್ಣವಾಗಿ ನಿರ್ಲಕ್ಷಿಸಿದ ಪರಿಣಾಮ ಭಿನ್ನಮತ ತಾರಕಕ್ಕೇರಿ ಸಿಂಧಿಯಾ ತಮ್ಮ ಬೆಂಬಲಿಗ 22 ಶಾಸಕರೊಂದಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಆ ಬಳಿಕ ಕಮಲನಾಥ್​​ ನೇತೃತ್ವದ ಸರ್ಕಾರ ಪತನಗೊಂಡು, ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ ಬಿಜೆಪಿ ಮತ್ತೆ ಅಧಿಕಾರ ಹಿಡಿದಿತ್ತು.

ರಾಜಸ್ಥಾನದಲ್ಲಿ ಗೆಹ್ಲೋಟ್ vs ಪೈಲಟ್

ರಾಜಸ್ಥಾನದಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದ್ದ ಸಚಿನ್ ಪೈಲಟ್​​ಗೆ ಸಿಎಂ ಸ್ಥಾನ ನೀಡದೆ ಹಿರಿಯ ನಾಯಕ ಅಶೋಕ್ ಗೆಹ್ಲೋಟ್​​ಗೆ ಹೈಕಮಾಂಡ್ ಮಣೆ ಹಾಕಿತ್ತು. ಅಧಿಕಾರ ಹಂಚಿಕೆಯ ಸೂತ್ರದ ಗೊಂದಲದಿಂದಾಗಿ ಇಬ್ಬರ ನಡುವೆ ನಿರಂತರ ಶೀತಲ ಸಮರ ನಡೆಯುತ್ತಿತ್ತು. ಸಚಿನ್ ಪೈಲಟ್ ಬಂಡಾಯವೆದ್ದಾಗ ಹೈಕಮಾಂಡ್ ಮಧ್ಯಪ್ರವೇಶಿಸಿ ಡಿಸಿಎಂ ಸ್ಥಾನದಿಂದ ಅವರನ್ನು ವಜಾಗೊಳಿಸಿತ್ತು. ಐದು ವರ್ಷಗಳ ಕಾಲ ಸರಿಪಡಿಸಲಾಗದ ಆಂತರಿಕ ಭಿನ್ನಮತದಿಂದ ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಬೇಕಾಯಿತು.

ಅಸ್ಸಾಂನಲ್ಲಿ ಗೊಗೊಯ್ vs ಹಿಮಂತ್​​

ಅಸ್ಸಾಂ ಕಾಂಗ್ರೆಸ್​​ನಲ್ಲಿ ಈ ಹಿಂದೆ ಭಿನ್ನಮತ ಎದುರಾಗಿದ್ದಾಗ ಅಂದಿನ ಸಿಎಂ ತರುಣ್ ಗೊಗೊಯ್ ವಿರುದ್ಧ ಅಂದು ಕಾಂಗ್ರೆಸ್​​ನಲ್ಲಿದ್ದ ಹಿಮಂತ್​​ ಬಿಸ್ವಾ ಶರ್ಮಾ ಬಂಡಾಯವೆದ್ದಿದ್ದರು. ಆದರೆ ಹೈಕಮಾಂಡ್​​ ಭೇಟಿಗೆ ಬಂದ ಹಿಮಂತ್​​ರನ್ನು ವರಿಷ್ಠರು ನಿರಾಕರಿಸಿದ ಕಾರಣ ತೀವ್ರ ಅಸಮಾಧಾನಗೊಂಡ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಇದರ ಪರಿಣಾಮವಾಗಿ ಅಸ್ಸಾಂನಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ.

ಛತ್ತೀಸ್‌ಗಢದಲ್ಲಿ ಬಘೇಲ್ vs ಸಿಂಗ್ ದೇವ್

2018ರಲ್ಲಿ ಕಾಂಗ್ರೆಸ್​​ ಅಧಿಕಾರಕ್ಕೆ ಬಂದ ಬಳಿಕ ಎರಡುವರೆ ವರ್ಷಗಳ ನಂತರ ಸಿಎಂ ಬದಲಾವಣೆ ಎಂಬ ಸೂತ್ರ ಹೆಣೆಯಲಾಗಿತ್ತು. ಆದರೆ ಭೂಪೇಶ್ ಬಘೇಲ್ ಅವಧಿ ಮುಗಿದ ನಂತರವೂ ಹೈಕಮಾಂಡ್ ಸಿಎಂ ಬದಲಾವಣೆ ಮಾಡಲು ಧೈರ್ಯ ತೋರಲಿಲ್ಲ. ಟಿ.ಎಸ್.ಸಿಂಗ್ ದೇವ್ ಕಡೆಗಣಿಸಿದ ಪರಿಣಾಮ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತ್ತು.

ಈ ಎಲ್ಲ ರಾಜ್ಯಗಳಲ್ಲಿ ತನ್ನ ನಿರ್ಧಾರದಿಂದ ಭಾರಿ ನಷ್ಟ ಅನುಭವಿಸಿರುವ ಹಿನ್ನೆಲೆ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ವೇಳೆ ಚಾಣಾಕ್ಷತೆ ಮೆರೆದಿದೆ. ಸಿದ್ದರಾಮಯ್ಯನವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಜೊತೆ ಜೊತೆಗೆ, ಎಲ್ಲ ಸಮುದಾಯಗಳಿಗೂ ಸರ್ಕಾರದಲ್ಲಿ ಪ್ರಾಮುಖ್ಯತೆ ನೀಡುವ ನಿರ್ಧಾರ ಮಾಡಿದೆ. ಯಾವುದೇ ರೀತಿಯಲ್ಲಿಯೂ ತಮ್ಮ ನಿರ್ಧಾರ ವೋಟ್​​ ಬ್ಯಾಂಕ್​​ ಅಥವಾ ಪಕ್ಷ ನಾಯಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರದ ರೀತಿಯಲ್ಲಿ ತಂತ್ರ ರೂಪಿಸಿಯೇ ಅಂತಿಮ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:20 pm, Thu, 28 May 26

Source link

Leave a Reply

Your email address will not be published. Required fields are marked *