ಕರ್ನಾಟಕ ಹೈಕೋರ್ಟ್Image Credit source: Getty Images
ಬೆಂಗಳೂರು, ಜುಲೈ 23: ಹಿಂದೂ ವಿವಾಹವು ಕೇವಲ ಒಪ್ಪಂದವಲ್ಲ, ಅದು ಜೀವಿತಾವಧಿಯ ಪವಿತ್ರ ಸಂಸ್ಕಾರವಾಗಿದೆ. ದಾಂಪತ್ಯ ಜೀವನದಲ್ಲಿ ಆಸಕ್ತಿ ಕಳೆದುಕೊಂಡಿದ್ದೇನೆ ಎಂಬ ಕಾರಣ ಹೇಳಿ ಸಂಗಾತಿಯನ್ನು ತೊರೆಯಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪತ್ನಿಯಿಂದ ವಿಚ್ಛೇದನ ಕೋರಿ ಸಲ್ಲಿಸಿದ್ದ ಪತಿಯ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಟಿ.ಎಂ. ನದಾಫ್ ಅವರ ವಿಭಾಗೀಯ ಪೀಠವು, ಮೈಸೂರು ಕುಟುಂಬ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.
ಪ್ರಕರಣ ಏನು?
2003ರ ಡಿಸೆಂಬರ್ 15ರಂದು ಅಂತರ್ಜಾತಿ ಪ್ರೇಮ ವಿವಾಹವಾಗಿದ್ದ ದಂಪತಿ ಸಂಬಂಧದಲ್ಲಿ ಬಿರುಕುಂಟಾದ ಕಾರಣ ಮದುವೆಯಾಗಿ ಸುಮಾರು 21 ವರ್ಷಗಳ ಬಳಿಕ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು. ಈ ದಂಪತಿಗೆ ಬಹುತೇಕ ಪ್ರಾಪ್ತವಯಸ್ಕಳಾಗಿರುವ ಮಗಳೂ ಇದ್ದು, ಈ ಹಿಂದೆ ಪತಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಮತ್ತೊಂದೆಡೆ ಪತ್ನಿ ಹಿಂದೂ ವಿವಾಹ ಕಾಯ್ದೆ, 1955ರ ಸೆಕ್ಷನ್ 9 ಅಡಿಯಲ್ಲಿ ದಾಂಪತ್ಯ ಜೀವನ ಮರುಸ್ಥಾಪನೆಗೆ (Restitution of Conjugal Rights) ಅರ್ಜಿ ಸಲ್ಲಿಸಿದ್ದರು. ಎರಡೂ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸಿದ ಕುಟುಂಬ ನ್ಯಾಯಾಲಯವು ಪತಿಯ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿ, ಪತ್ನಿಯ ಅರ್ಜಿಯನ್ನು ಅಂಗೀಕರಿಸಿತ್ತು.
ಇದನ್ನೂ ಓದಿ: ಕೆಪಿಎಸ್ಸಿ ನೇಮಕಾತಿ ಅಕ್ರಮ; ರಾಜ್ಯ ಸರ್ಕಾರ, ಸಿಬಿಐಗೆ ಕರ್ನಾಟಕ ಹೈಕೋರ್ಟ್ ನೋಟಿಸ್
ಪತಿ ಪರ ವಕೀಲರ ವಾದವೇನು?
ನಂತರ, ಸೆಕ್ಷನ್ 13(1A) ಅಡಿಯಲ್ಲಿ, ದಾಂಪತ್ಯ ಜೀವನ ಮರುಸ್ಥಾಪನೆಗೆ ಆದೇಶ ಬಂದರೂ ಒಂದು ವರ್ಷಕ್ಕೂ ಹೆಚ್ಚು ಕಾಲ ಸಹಜೀವನ ಪುನರಾರಂಭವಾಗಿಲ್ಲ ಎಂಬ ಆಧಾರದ ಮೇಲೆ ಪತಿ ಮತ್ತೊಮ್ಮೆ ವಿಚ್ಛೇದನ ಕೋರಿ ಹೊಸ ಅರ್ಜಿ ಸಲ್ಲಿಸಿದ್ದರು. ಹಿಂದಿನ ತೀರ್ಪಿನ ಬಳಿಕ ಪತ್ನಿ ತನ್ನೊಂದಿಗೆ ವಾಸಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ. ತಾನು ಹಲವು ಬಾರಿ ಮನವಿ ಮಾಡಿದರೂ ಪತ್ನಿ ಸ್ಪಂದಿಸಲಿಲ್ಲ. ಹೀಗಾಗಿ ಈ ವಿವಾಹ ಸಂಪೂರ್ಣವಾಗಿ ಮುರಿದುಬಿದ್ದಿದೆ ಎಂದು ಪತಿ ಪರ ವಕೀಲರು ವಾದಿಸಿದ್ದರು.
ತಾನು ಪತಿ ಹಾಗೂ ಅತ್ತೆ-ಮಾವರನ್ನು ಪ್ರೀತಿ, ಗೌರವದಿಂದ ನೋಡಿಕೊಂಡಿದ್ದೇನೆ. ತಾನು ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಕಾರಣ ಮನೆಯ ಮೊದಲ ಮಹಡಿಯಲ್ಲಿ ಪೂಜೆ ಹಾಗೂ ಅಡುಗೆ ಮಾಡಲು ಪತಿಯ ಪೋಷಕರು ಸೂಚಿಸಿದಂತೆ ನಡೆದುಕೊಂಡಿದ್ದೇನೆ. ಪ್ರತ್ಯೇಕ ಮನೆಗಾಗಿ ಎಂದಿಗೂ ಒತ್ತಾಯಿಸಿಲ್ಲ. ಪತಿ ಅಥವಾ ಅವರ ಕುಟುಂಬದವರೊಂದಿಗೆ ಜಗಳವಾಡಿಲ್ಲ ಎಂದು ಪತ್ನಿ ನ್ಯಾಯಾಲಯಕ್ಕೆ ತಿಳಿಸಿದ್ದರು.
ನ್ಯಾಯಪೀಠ ಹೇಳಿದ್ದೇನು?
ಕುಟುಂಬ ನ್ಯಾಯಾಲಯದಲ್ಲಿ ಪತ್ನಿಯ ವಿರುದ್ಧ ಪತಿ ಮಾಡಿದ್ದ ಕ್ರೌರ್ಯದ ಆರೋಪಗಳು ಸಾಬೀತಾಗಿರಲಿಲ್ಲ. ಅಲ್ಲದೆ ವಿಚಾರಣೆ ವೇಳೆ ಪತಿಯೇ, ನನಗೆ ದಾಂಪತ್ಯ ಜೀವನ ಮುಂದುವರಿಸುವ ಆಸಕ್ತಿ ಇಲ್ಲದ ಕಾರಣ ಸಹಜೀವನ ಪುನರಾರಂಭ ಮಾಡಿಲ್ಲ ಎಂದು ಒಪ್ಪಿಕೊಂಡಿದ್ದರು. ಈ ವಿಚಾರವನ್ನು ಉಲ್ಲೇಖಿಸಿದ ಹೈಕೋರ್ಟ್, ಹಿಂದೂ ವಿವಾಹವು ಒಪ್ಪಂದವಲ್ಲ; ಅದು ಪವಿತ್ರ ಸಂಸ್ಕಾರ. ದಾಂಪತ್ಯ ಜೀವನದಲ್ಲಿ ಆಸಕ್ತಿ ಇಲ್ಲ ಎಂಬ ಕಾರಣವೊಂದನ್ನೇ ಆಧಾರ ಮಾಡಿಕೊಂಡು ವಿವಾಹ ಬಂಧನದಿಂದ ಹೊರಬರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿ ಪತಿಯ ಮೇಲ್ಮನವಿಯನ್ನು ವಜಾಗೊಳಿಸಿರೋದಾಗಿ ಲೈವ್ ಲಾ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 2:57 pm, Thu, 23 July 26