Headlines

ಹುಟ್ಟುಹಬ್ಬದ ಸಂಭ್ರಮದಲ್ಲೇ ದುರಂತ: ಮಸ್ಸೂರಿ ಹೋಂಸ್ಟೇಯಲ್ಲಿ ಮಹಿಳೆ ನಿಗೂಢ ಸಾವು, ತಿಂಗಳ ಬಳಿಕ ಟೆಕ್ಕಿ ಪತಿ ಅರೆಸ್ಟ್ – Kannada News | Mussoorie Homestay Tragedy: Techie Husband Arrested for Wife’s Mysterious Death on Birthday Trip

ನವದೆಹಲಿ, ಜುಲೈ 12: ಪತಿಯ ಹುಟ್ಟುಹಬ್ಬವನ್ನು ಆಚರಿಸಲು ಮಸ್ಸೂರಿಗೆ ಪ್ರವಾಸ(Tour) ಬಂದಿದ್ದ 27 ವರ್ಷದ ಮಹಿಳೆಯೊಬ್ಬರು ಹೋಂಸ್ಟೇ ಕೋಣೆಯಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಭೀಕರ ಪ್ರಕರಣಕ್ಕೆ ಈಗ ದೊಡ್ಡ ತಿರುವು ಸಿಕ್ಕಿದೆ. ಘಟನೆ ನಡೆದು ಒಂದು ತಿಂಗಳ ನಂತರ, ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಪತಿಯೇ ಈ ಕೊಲೆಯಲ್ಲಿ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದ್ದು, ಪೊಲೀಸರು ಆತನನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ.

ಡೆಹ್ರಾಡೂನ್ ಪೊಲೀಸರು ಮಸ್ಸೂರಿ ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್ ಪಡೆದು, ಶನಿವಾರ ಪೂರ್ವ ದೆಹಲಿಯ ಮಧು ವಿಹಾರ್ ಪ್ರದೇಶದಲ್ಲಿ ದಾಳಿ ನಡೆಸಿ ಆರೋಪಿ ಪತಿಯನ್ನು ವಶಕ್ಕೆ ಪಡೆದಿದ್ದಾರೆ. ನ್ಯಾಯಾಲಯ ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಹುಟ್ಟುಹಬ್ಬದ ಪಾರ್ಟಿ ನಡೆದ ರೂಮಿನಲ್ಲಿ ರಕ್ತದ ಕಲೆಗಳು

ಮೂಲತಃ ಆಂಧ್ರಪ್ರದೇಶದ ವಿಶಾಖಪಟ್ಟಣದವರಾದ ಈ ಜೋಡಿ ನವೆಂಬರ್ 8, 2025 ರಂದು ವಿವಾಹವಾಗಿದ್ದರು. ಈಗ ದೆಹಲಿಯಲ್ಲಿ ವಾಸಿಸುತ್ತಿದ್ದ ಇವರು ಪತಿಯ ಬರ್ತ್‌ಡೇ ಆಚರಿಸಲು ಜೂನ್ ತಿಂಗಳಿನಲ್ಲಿ ಮಸ್ಸೂರಿ-ಧನೋಲ್ಟಿ ರಸ್ತೆಯಲ್ಲಿರುವ ಹೋಂಸ್ಟೇಯೊಂದಕ್ಕೆ ಬಂದಿದ್ದರು.

ಆದರೆ, ಜೂನ್ 15 ರಂದು ಪತ್ನಿ ಪಿ. ರಾಧಾ ಗಾಯತ್ರಿ (27) ಕೋಣೆಯ ನೆಲದ ಮೇಲೆ ಶವವಾಗಿ ಪತ್ತೆಯಾಗಿದ್ದರು. “ನಾವು ಜೂನ್ 15 ರ ಬೆಳಗಿನ ಜಾವ 3.30 ರವರೆಗೆ ಮದ್ಯ ಸೇವಿಸಿ ಮಲಗಿದ್ದೆವು, ಬೆಳಗ್ಗೆ ಎದ್ದು ನೋಡುವಾಗ ಪತ್ನಿ ಮೃತಪಟ್ಟಿದ್ದಳು” ಎಂದು ಪತಿ ಪೊಲೀಸರಿಗೆ ಕಥೆ ಕಟ್ಟಿದ್ದ. ಆದರೆ ಪೊಲೀಸರು ಕೋಣೆಯನ್ನು ಪರಿಶೀಲಿಸಿದಾಗ ಸತ್ಯ ಬೇರೆಯದೇ ಇತ್ತು. ರಾಧಾ ಅವರ ಮೃತದೇಹ ಬಟ್ಟೆಗಳಿಲ್ಲದೆ ನೆಲದ ಮೇಲೆ ಬಿದ್ದಿತ್ತು ಹಾಗೂ ಹಾಸಿಗೆಯ ಬೆಡ್‌ಶೀಟ್ ಮೇಲೆ ರಕ್ತದ ಕಲೆಗಳಿದ್ದವು. ಕೋಣೆಯಲ್ಲಿ ಖಾಲಿ ಮದ್ಯದ ಬಾಟಲಿಗಳು ಚೆಲ್ಲಾಪಿಲ್ಲಿಯಾಗಿದ್ದವು.

ಮತ್ತಷ್ಟು ಓದಿ: ಉದ್ಯಮಿ ಕೇತನ್ ಹತ್ಯೆ : ಸೋನಮ್ ರಘುವಂಶಿಯಿಂದ ‘ಕೊಲೆ ಸ್ಕೆಚ್’ ಕಲಿತಿದ್ದ ಸಿಯಾ ಗೋಯಲ್

ತಂದೆಯ ದೂರಿನ ಬೆನ್ನಲ್ಲೇ ಬಯಲಾದ ರಹಸ್ಯ

ಮಗಳ ಸಾವು ಸಾಮಾನ್ಯ ಸಾವಲ್ಲ, ಇದರ ಹಿಂದೆ ಅಳಿಯನ ಕೈವಾಡವಿದೆ ಎಂದು ಸಂತ್ರಸ್ತೆ ರಾಧಾ ಅವರ ತಂದೆ ಪಿ. ಸುಧಾಕರ್ ಪೊಲೀಸರಿಗೆ ಗಂಭೀರ ದೂರು ನೀಡಿದ್ದರು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಮಗಳಿಗೆ ನೀಡಲಾಗುತ್ತಿದ್ದ ಕಿರುಕುಳ ಹಾಗೂ ಘಟನಾ ಸ್ಥಳದಲ್ಲಿದ್ದ ಸಾಕ್ಷ್ಯಗಳು ಪತಿಯ ವಿರುದ್ಧವಾಗಿದ್ದರಿಂದ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು.

ಸುದೀರ್ಘ ಒಂದು ತಿಂಗಳ ವೈದ್ಯಕೀಯ ವರದಿ ಹಾಗೂ ಸಾಕ್ಷ್ಯಗಳ ಪರಿಶೀಲನೆಯ ನಂತರ, ಪತಿಯೇ ಈ ಕೊಲೆಯಲ್ಲಿ ನೇರವಾಗಿ ಭಾಗಿಯಾಗಿರುವುದು ಪತ್ತೆಯಾಗಿದೆ. ಮದ್ಯದ ಅಮಲಿನಲ್ಲಿ ಇಬ್ಬರ ನಡುವೆ ಗಲಾಟೆ ನಡೆದು ಈ ಕೊಲೆ ನಡೆದಿದೆಯೇ ಅಥವಾ ಆಡಳಿತಾತ್ಮಕ ಯೋಜಿತ ಕೊಲೆಯೇ ಎಂಬ ಕೋನದಲ್ಲಿ ತನಿಖೆ ಮುಂದುವರೆದಿದೆ.

ಹೋಂಸ್ಟೇಗಳಲ್ಲಿ ಸುರಕ್ಷತೆಯ ಆತಂಕ

ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರು ಹೋಟೆಲ್‌ಗಳಿಗಿಂತ ಹೆಚ್ಚಾಗಿ ಪ್ರಕೃತಿಯ ಮಡಿಲಿನಲ್ಲಿರುವ ಹೋಂಸ್ಟೇಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಅನೇಕ ಹೋಂಸ್ಟೇಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕೊರತೆ, ಸರಿಯಾದ ರಿಜಿಸ್ಟರ್ ನಿರ್ವಹಣೆ ಇಲ್ಲದಿರುವುದು ಮತ್ತು ಭದ್ರತಾ ಸಿಬ್ಬಂದಿ ಇಲ್ಲದಿರುವುದು ಇಂತಹ ಅಪರಾಧಗಳು ನಡೆದಾಗ ಸಾಕ್ಷ್ಯ ನಾಶಪಡಿಸಲು ಆರೋಪಿಗಳಿಗೆ ಸುಲಭವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಉತ್ತರಾಖಂಡ ಪ್ರವಾಸೋದ್ಯಮ ಮತ್ತು ಪೊಲೀಸ್ ಇಲಾಖೆಯು ಮಸ್ಸೂರಿ ಹಾಗೂ ನೈನಿತಾಲ್ ಭಾಗದ ಎಲ್ಲಾ ಹೋಂಸ್ಟೇಗಳಲ್ಲಿ ಪ್ರವಾಸಿಗರ ಸುರಕ್ಷತೆ ಹಾಗೂ ಕಡ್ಡಾಯ ಸಿಸಿಟಿವಿ ಅಳವಡಿಕೆಗೆ ನಿಯಮಗಳನ್ನು ಬಿಗಿಗೊಳಿಸಲು ನಿರ್ಧರಿಸಿದೆ. ಸದ್ಯ ದೆಹಲಿ ಟೆಕ್ಕಿಯ ಕರಾಳ ಮುಖವಾಡ ಕಳಚಿದ್ದು, ಹೆಚ್ಚಿನ ಪೊಲೀಸ್ ವಿಚಾರಣೆ ನಡೀತಾ ಇದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *