Headlines

ಹುಬ್ಬಳ್ಳಿ-ಧಾರವಾಡ ಪಾಲಿಕೆ ವಿಭಜನೆಗೆ ಬಿಜೆಪಿಯಿಂದ ಹೊಸ ತಗಾದೆ: ಇಲ್ಲಿದೆ ಅಸಲಿ ಕಾರಣ – Kannada News | Hubballi Dharwad Corporation Split Controversy: whats BJP’s demand; Here is the real reason

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ Image Credit source: tv9 kannada

ಧಾರವಾಡ, ಮೇ 03: ಬೆಂಗಳೂರು ಬಿಟ್ಟರೆ ರಾಜ್ಯದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರವೇ (Hubballi-Dharwad Corporation) ದೊಡ್ಡದು. ಇದೇ ವೇಳೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಧಾರವಾಡಕ್ಕೆ ಹೆಚ್ಚಿನ ಅನುದಾನ ಸಿಗುತ್ತಿಲ್ಲ ಅನ್ನೋ ಕಾರಣಕ್ಕೆ ಪ್ರತ್ಯೇಕ ಪಾಲಿಕೆಗಾಗಿ ಹೋರಾಟ ನಡೆಯಿತು. ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಧಾರವಾಡ (Dharwad) ಪ್ರತ್ಯೇಕ ಪಾಲಿಕೆಗೆ ನಿರ್ಣಯ ಮಂಡಿಸಿ, ಸರಕಾರಕ್ಕೆ ಕಳಿಸಲಾಗಿತ್ತು. ಒತ್ತಡ ಹೆಚ್ಚಾಗಿದ್ದರಿಂದಾಗಿ ಸಿಎಂ ಸಿದ್ದರಾಮಯ್ಯ ಕಳೆದ ವರ್ಷವಷ್ಟೇ ಧಾರವಾಡ ಪ್ರತ್ಯೇಕ ಪಾಲಿಕೆ ಘೋಷಣೆ ಮಾಡಿದ್ದರು. ಆದರೆ ಇದೀಗ ಪಾಲಿಕೆಯಲ್ಲಿ ಆಡಳಿತಾರೂಢ ಬಿಜೆಪಿ (Bjp) ಪ್ರತ್ಯೇಕ ಪಾಲಿಕೆ ಬೇಡ ಅಂತಾ ನಿರ್ಣಯಿಸಿ, ಬೃಹತ್ ಮಹಾನಗರ ಪಾಲಿಕೆಗೆ ಬೇಡಿಕೆ ಇಟ್ಟು, ನಿರ್ಣಯ ಮಂಡಿಸಿದೆ. ಇದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಮಹಾನಗರ ಪಾಲಿಕೆ ಅನ್ನೋ ಖ್ಯಾತಿಗೆ ಒಳಗಾಗಿದ್ದು, ಒಟ್ಟು 82 ವಾರ್ಡ್​ಗಳನ್ನು ಹೊಂದಿದೆ. ಸದ್ಯಕ್ಕೆ ಯೋಜಿತ 13 ಲಕ್ಷ ಜನಸಂಖ್ಯೆ ಹೊಂದಿರುವ ಈ ಪಾಲಿಕೆಯಿಂದ ಧಾರವಾಡವನ್ನು ಪ್ರತ್ಯೇಕ ಪಾಲಿಕೆಯನ್ನಾಗಿ ಮಾಡಬೇಕೆನ್ನೋದು ಹಲವಾರು ವರ್ಷಗಳ ಬೇಡಿಕೆ. ಹುಬ್ಬಳ್ಳಿ ರಾಜಕೀಯ ಕೇಂದ್ರವಾಗಿರೋದ್ರಿಂದಾಗಿ ಅಲ್ಲಿಗೆ ಹೆಚ್ಚಿನ ಅನುದಾನ ಬಳಕೆಯಾಗುತ್ತೆ ಅನ್ನೋದು ಧಾರವಾಡಿಗರ ಆಕ್ಷೇಪ. ಅಲ್ಲದೇ ಪಾಲಿಕೆ ವ್ಯಾಪ್ತಿಯಲ್ಲಿ ಎಷ್ಟೇ ಅನುದಾನ ಬಳಕೆಯಾದರೂ ಹೆಚ್ಚಿನ ಪಾಲು ಹುಬ್ಬಳ್ಳಿಗೆ ಹೋಗುತ್ತೆ ಅನ್ನೋದು ಕೂಡ ಧಾರವಾಡಿಗರ ಆಕ್ರೋಶ. ಇದೇ ಕಾರಣಕ್ಕೆ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕು ಅನ್ನೋ ಕೂಗು ಹಲವಾರು ವರ್ಷಗಳಿಂದ ಕೇಳಿ ಬರುತ್ತಲೇ ಇತ್ತು.

ಬಿಜೆಪಿ ಹೊಸ ವರಸೆ

ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ಸೇರಿಕೊಂಡು ಸಾಮಾನ್ಯ ಸಭೆಯಲ್ಲಿ ಪ್ರತ್ಯೇಕ ಪಾಲಿಕೆಗೆ ನಿರ್ಣಯ ಮಂಡಿಸಿ, ರಾಜ್ಯ ಸರಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿದ್ದವು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕಳೆದ ವರ್ಷ ಪ್ರತ್ಯೇಕ ಪಾಲಿಕೆಯ ಘೋಷಣೆ ಮಾಡಿದ್ದರು. ಆದರೆ ಇದೀಗ ಅದೇ ಆಡಳಿತಾರೂಢ ಬಿಜೆಪಿ ಹೊಸ ವರಸೆಯೊಂದನ್ನು ತೆಗೆದಿದ್ದು, ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಬದಲು ಇದೇ ಹುಬ್ಬಳ್ಳಿ-ಧಾರವಾಡ ಬೃಹತ್ ಮಹಾನಗರ ಪಾಲಿಕೆ ಅಂತಾ ಘೋಷಿಸಲು ನಿರ್ಣಯ ಮಂಡಿಸಿದೆ. ಇದು ಧಾರವಾಡ ಜನರ ಕಂಗೆಣ್ಣಿಗೆ ಗುರಿಯಾಗಿದೆ.

ಬಿಜೆಪಿಗರ ವಾದವೇನು?

ಪಾಲಿಕೆಯ ಈ ಹೊಸ ನಿರ್ಣಯದ ಹಿಂದೆ ಬೇರೆಯದೇ ಆದ ಉದ್ದೇಶವಿದೆ ಅನ್ನೋದು ಬಿಜೆಪಿಗರ ಹೇಳಿಕೆ. ಧಾರವಾಡ ಪ್ರತ್ಯೇಕ ಪಾಲಿಕೆ ಘೋಷಣೆಯಾದಾಗ ಈಗಿರುವ ವಾರ್ಡುಗಳನ್ನು ಸಮಾನಾಂತರವಾಗಿ ವಿಭಜಿಸಲಾಗುತ್ತೆ ಅಂದುಕೊಳ್ಳಲಾಗಿತ್ತು. ಅದರೆ 82 ವಾರ್ಡುಗಳಲ್ಲಿ ಧಾರವಾಡಕ್ಕೆ ಕೇವಲ 26 ವಾರ್ಡುಗಳನ್ನು ಬಿಟ್ಟುಕೊಟ್ಟರೆ ಪಾಲಿಕೆಯ ಆರ್ಥಿಕ ಪರಿಸ್ಥಿತಿಯ ಕಥೆ ಏನು ಅನ್ನೋದು ಬಿಜೆಪಿ ಸದಸ್ಯರ ವಾದ. ಅಲ್ಲದೇ ಧಾರವಾಡ ತಾಲೂಕಿನ ನಾಲ್ಕು ಗ್ರಾಮ ಪಂಚಾಯತ್​​ಗಳನ್ನು ಧಾರವಾಡ ಪಾಲಿಕೆಗೆ ಸೇರಿಸಬೇಕು ಅನ್ನೋದು ಸರಕಾರದ ಲೆಕ್ಕಾಚಾರವಾಗಿತ್ತು. ಆದರೆ ಆ ಗ್ರಾಮ ಪಂಚಾಯತ್​ನವರು ಇದಕ್ಕೆ ಒಪ್ಪಲೇ ಇಲ್ಲ. ಇದೇ ಕಾರಣಕ್ಕೆ ಗ್ರಾಮ ಪಂಚಾಯತ್ ಜಾಗವನ್ನಷ್ಟೇ ಪಾಲಿಕೆಗೆ ಸೇರಿಸಿ, ಆ ನಾಲ್ಕೂ ಗ್ರಾಮ ಪಂಚಾಯತ್​ಗಳನ್ನು ಹಾಗೆಯೇ ಬಿಡಲು ಯೋಜನೆ ರೂಪಿಸಲಾಯಿತು. ಇದರಿಂದಾಗಿ ಸಮಸ್ಯೆ ಹೆಚ್ಚಾಗುತ್ತೆಯೇ ಹೊರತು ಪರಿಹಾರ ಸಿಗುವುದಿಲ್ಲ.

ಇದನ್ನು ಓದಿ: ಹುಬ್ಬಳ್ಳಿ-ಧಾರವಾಡ ಪಾಲಿಕೆ ವಿಭಜನೆ ಫೈಟ್: ಬೃಹತ್ ಪಾಲಿಕೆಗೆ ಬಿಜೆಪಿ ಪಟ್ಟು, ವಿಭಜನೆಯೇ ಲೇಸು ಎಂದ ಕಾಂಗ್ರೆಸ್

ಅಲ್ಲದೇ ಮೈಸೂರು ಮಹಾನಗರ ಪಾಲಿಕೆಗಿಂತ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ದೊಡ್ಡದು. ಇದೀಗ ಸಿಎಂ ಸಿದ್ದರಾಮಯ್ಯ ಅವರು ಮೈಸೂರನ್ನು ಬೃಹತ್ ಮಹಾನಗರ ಪಾಲಿಕೆ ಮಾಡಲು ಹೊರಟಿದ್ದಾರೆ. ಒಂದು ವೇಳೆ ಹುಬ್ಬಳಿ-ಧಾರವಾಡ ಮಹಾನಗರ ಪಾಲಿಕೆ ಅಸ್ವಿತ್ವದಲ್ಲಿದ್ದರೆ ಮೊದಲಿಗೆ ಇದನ್ನೇ ಬೃಹತ್ ಮಹಾನಗರ ಪಾಲಿಕೆ ಮಾಡಬೇಕಾಗುತ್ತೆ. ಹೀಗಾಗಿ ಇದನ್ನು ಒಡೆದು, ಬಳಿಕ ಮೈಸೂರನ್ನು ಬೃಹತ್ ಮಹಾನಗರ ಪಾಲಿಕೆ ಮಾಡಲು ತಂತ್ರ ರೂಪಿಸಿದ್ದಾರೆ ಅನ್ನೋದು ಬಿಜೆಪಿ ಮುಖಂಡರ ಆರೋಪ. ಹೀಗಾಗಿ ಯಾವುದೇ ಕಾರಣಕ್ಕೂ ಪ್ರತ್ಯೇಕ ಪಾಲಿಕೆ ಮಾಡೋದು ಬೇಡ ಅನ್ನೋದು ಅವರ ವಾದ.

ಅನುದಾನಕ್ಕೂ ಕೊರತೆ?

ಇನ್ನು 16ನೇ ಹಣಕಾಸು ಆಯೋಗದಿಂದ ಸುಮಾರು 56 ಸಾವಿರ ಕೋಟಿ ರೂ ಅನುದಾನ ಬರುತ್ತೆ. ಈ ಅನುದಾನ ಸಿಗಬೇಕೆಂದರೆ ಪಾಲಿಕೆಯ ವ್ಯಾಪ್ತಿಯಲ್ಲಿ 10 ರಿಂದ 40 ಲಕ್ಷ ಜನಸಂಖ್ಯೆ ಇರಬೇಕು ಅನ್ನೋ ನಿಯಮವಿದೆ. ಇದೀಗ ಅವಳಿ ನಗರದ ಪಾಲಿಕೆ ವಿಭಜನೆಯಾದರೆ ಎರಡರಲ್ಲೂ 10 ಲಕ್ಷಕ್ಕೂ ಕಡಿಮೆ ಜನಸಂಖ್ಯೆ ಆಗುತ್ತೆ. ಇದರಿಂದಾಗಿ ಅನುದಾನ ಸಿಗುವುದಿಲ್ಲ. ಅಲ್ಲದೇ ಇಂಥ ಅನೇಕ ತಾಂತ್ರಿಕ ಸಮಸ್ಯೆಗಳು ತಲೆದೋರೋದರಿಂದಾಗಿ ಎರಡೂ ಪಾಲಿಕೆಗಳಿಗೆ ಅನುದಾನ ಸಿಗೋದೇ ಕಡಿಮೆಯಾಗುತ್ತೆ ಅನ್ನೋದು ಕೂಡ ಆಡಳಿತಾರೂಢ ಬಿಜೆಪಿ ಸದಸ್ಯರ ವಾದ. ಒಟ್ಟಿನಲ್ಲಿ ಈ ಪ್ರಕರಣ ಮುಂದೆ ಎಲ್ಲಿಗೆ ಬಂದು ನಿಲ್ಲುತ್ತೆ ಅನ್ನೋದೇ ಇದೀಗ ಕುತೂಹಲಕಾರಿ ವಿಚಾರವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *