
ಬೆಂಗಳೂರು, (ಮಾರ್ಚ್ 14): ಇಸ್ರೆಲ್-ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧದ (War) ಭಾರತದ (India) ಮೇಲೂ ಪರಿಣಾಮ ಬೀರುತ್ತಿದೆ. ಗಲ್ಫ್ ರಾಷ್ಟ್ರಗಳಿಂದ ಬರುತ್ತಿದ್ದ ವಸ್ತುಗಳು ನಿಂತುಕೊಂಡಿವೆ. ಅದರಲ್ಲೂ ಮುಖ್ಯವಾಗಿ ಕಚ್ಚಾ ತೈಲ ಆಮದು ಕಡಿಮೆಯಾಗಿದೆ. ಇದರಿಂದ ಗ್ಯಾಸ್ ಸಿಲಿಂಡರ್ (LPG cylinders) ಅಭಾವ ಉಂಟಾಗಿದೆ. ಕರ್ನಾಟದಲ್ಲೂ (Karnataka) ಸಹ ಕಮರ್ಷಿಯಲ್ ಸಿಲಿಂಡರ್ ಸರಬರಾಜು ಸ್ಥಗಿತಗೊಂಡಿರುವ ಬೆನ್ನಲ್ಲೇ ಹೋಟೆಲ್ ಉದ್ಯಮ ಕಂಗಾಲಾಗಿದೆ. ಇನ್ನು ಹೋಟೆಲ್, ರೆಸ್ಟೋರೆಂಟ್ ಉದ್ಯಮವನ್ನ ನಂಬಿಕೊಂಡ ವ್ಯಾಪಾರ ವಹಿವಾಟಿಗೂ ತೀವ್ರ ಹೊಡೆತ ಬಿದ್ದಿದ್ದು, ಕೆಲ ಕಡೆ ಗೃಹಬಳಕೆ ಸಿಲಿಂಡರ್ ಬಳಸಲಾಗುತ್ತಿದ್ದು, ಈ ಸಂಬಂಧ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (karnataka food and civil supplies department) ದಾಳಿ ನಡೆಸಿ ಇದುವರೆಗೆ ಒಟ್ಟು 316 ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದೆ.
ಈ ಸಂಬಂಧ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಇಂದು (ಮಾರ್ಚ್ 14) ಪ್ರಕಟಣೆ ಹೊರಡಿಸಿದ್ದು, ಕೆಲ ಕಡೆ ಗೃಹಬಳಕೆ ಸಿಲಿಂಡರ್ ಬಳಸಲಾಗುತ್ತಿದ್ದು, ಈ ಸಂಬಂಧ ರಾಜ್ಯ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಒಟ್ಟು 316 ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಶ ಪಡೆದುಕೊಂಡಿದ್ದಾರೆ. ಇನ್ನು ಗೃಹಬಳಕೆ ಗ್ಯಾಸ್ ಸಿಲಿಂಡರ್ ವಾಣಿಜ್ಯ ಉದ್ದೇಶಕ್ಕೆ ಬಳಸಿದರೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಗ್ಯಾಸ್ ಬುಕಿಂಗ್ ಆಗುತ್ತಿಲ್ಲವೇ? ವಾಟ್ಸಾಪ್ ಮೂಲಕ ಸುಲಭವಾಗಿ LPG ಬುಕ್ ಮಾಡುವುದು ಹೇಗೆ?
ಗೃಹ ಬಳಕೆ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದ ಸಂಬಂಧ ಬೆಂಗಳೂರಿನ ಪೀಣ್ಯದಲ್ಲಿ 45, ಚಿಕ್ಕಜಾಲದಲ್ಲಿ 209, ಶಿವಮೊಗ್ಗದಲ್ಲಿ 3, ಯಾದಗಿರಿ-46, ದಾವಣಗರೆಯಲ್ಲಿ 13 ಸಿಲಿಂಡರ್ಗಳನ್ನ ಜಪ್ತಿ ಮಾಡಿಕೊಳ್ಳಲಾಗಿದೆ. ಜೊತೆಗೆ ಅವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955 ರ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಕೆಜಿಎಫ್ನಲ್ಲಿ ಅಕ್ರಮ ರಿಫಿಲ್ಲಿಂಗ್ ನಡೆಸುತ್ತಿದ್ದ ಗ್ಯಾಸ್ ಏಜೆನ್ಸಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಒಟ್ಟು ಶೇ.20ರಷ್ಟು ಸಿಲಿಂಡರ್‌ಗಳನ್ನು ಕೇಂದ್ರ ಸರ್ಕಾರದ ಮಾರ್ಗಸೂಚನೆಗಳಂತೆ ಆಸ್ಪತ್ರೆ, ಶಾಲಾ ಶಿಕ್ಷಣ ಸಂಸ್ಥೆಗಳು, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣಗಳ ಕ್ಯಾಂಟೀನ್, ಪ್ರಮುಖ ದೇವಸ್ಥಾನಗಳಲ್ಲಿ ಪ್ರಸಾದ ವಿನಿಯೋಗ ಮಾಡಲು ಮತ್ತು ಸರ್ಕಾರಿ ಕಚೇರಿ, ವೃದ್ದಾಶ್ರಮ, ಪ್ರಮುಖ ಖಾಸಗಿ ವಲಯದ ಕಚೇಗಳಿಗೆ ಆದ್ಯತೆ ಮೇರೆಗೆ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನು ವಿತರಿಸಲು ಆಹಾರ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.
ರಾಜ್ಯದೆಲ್ಲೆಡೆ 14.2 kgಯ ಗೃಹ ಬಳಕೆಯ ಒಟ್ಟು 3,86,363 ಸಿಲಿಂಡರ್ ಹಾಗೂ ವಾಣಿಜ್ಯ ಬಳಕೆಯ 6,371 ಸಿಲಿಂಡರ್ಗಳನ್ನ ವಿತರಿಸಲಾಗಿದೆ. ಗೃಹ ಬಳಕೆಯ ಸಿಲಿಂಡರ್ಗಳ ಉಪಯೋಗಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲಾಗಿದೆ ಎಂದು ಆಹಾರ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಗ್ಯಾಸ್ ಬುಕ್ಕಿಂಗ್ ಬಗ್ಗೆ ಇರಲಿ ಎಚ್ಚರ
ಗ್ಯಾಸ್ ಸಿಲಿಂಡರ್ಗಳ ಕೊರತೆಯನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಸೈಬರ್ ಕಿರಾತಕರು, ಗ್ಯಾಸ್ ಏಜೆನ್ಸಿಗಳ ಸೋಗಿನಲ್ಲಿ ಲಿಂಕ್ಗಳನ್ನು ಕಳುಹಿಸಿ ವಂಚಿಸುವ ಸಾಧ್ಯತೆಯಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ದೇಶದೆಲ್ಲೆಡೆ ಗ್ಯಾಸ್ ಸಿಲಿಂಡರ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಇದರಿಂದ ಆತಂಕಗೊಳ್ಳುತ್ತಿರುವ ನಾಗರಿಕರೂ ಗೃಹ ಬಳಕೆಯ ಸಿಲಿಂಡರ್ಗಳಿಗಾಗಿ ಗ್ಯಾಸ್ ಬುಕ್ ಮಾಡುತ್ತಿದ್ಧಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಸೈಬರ್ ಖದೀಮರು, ಗ್ಯಾಸ್ ಏಜೆನ್ಸಿಗಳ ಹೆಸರಿನಲ್ಲಿ ಲಿಂಕ್ ಕಳುಹಿಸಿ ವಂಚಿಸುವ ಸಾಧ್ಯತೆಯಿದೆ. ಸಾರ್ವಜನಿಕರು ಈ ಬಗ್ಗೆ ಎಚ್ಚರದಿಂದ ಇರಬೇಕೆಂದು ಸಾಮಾಜಿಕ ಜಾಲತಾಣದ ಮೂಲಕ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.