Headlines

ಹೈದರಾಬಾದ್ ರಸ್ತೆಗೆ ‘ಡೊನಾಲ್ಡ್ ಟ್ರಂಪ್’ ಹೆಸರು: ರೇವಂತ್ ರೆಡ್ಡಿ ಸರ್ಕಾರದ ನಿರ್ಧಾರಕ್ಕೆ ತೀವ್ರ ರಾಜಕೀಯ ವಿರೋಧ – Kannada News | Hyderabad Road Named After Donald Trump: Telangana Govt Move Sparks Political Row

ಹೈದರಾಬಾದ್, ಜೂನ್ 17: ಜಾಗತಿಕ ಐಟಿ ಮತ್ತು ಹೂಡಿಕೆ ಹಬ್ ಆಗಿ ಬೆಳೆಯುತ್ತಿರುವ ಹೈದರಾಬಾದ್‌ನ ರಸ್ತೆಯೊಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರ ಹೆಸರಿಡಲು ತೆಲಂಗಾಣದ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ಆದರೆ, ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಈ ನಿರ್ಧಾರಕ್ಕೆ ಎಡಪಕ್ಷಗಳಿಂದ ತೀವ್ರ ರಾಜಕೀಯ ವಿರೋಧ ವ್ಯಕ್ತವಾಗಿದ್ದು, ಇದು ಕಾಂಗ್ರೆಸ್‌ನ ಸದ್ಧಾಂತಿಕ ನಿಲುವನ್ನೇ ಪ್ರಶ್ನಿಸುವಂತೆ ಮಾಡಿದೆ.

ಸರ್ಕಾರದ ನಿರ್ಧಾರವೇನು? ಯೋಜನೆ ಏನು?
ಹೈದರಾಬಾದ್‌ನ ಐಟಿ ಕಾರಿಡಾರ್‌ನಲ್ಲಿರುವ ಅಮೆರಿಕನ್ ಕಾನ್ಸುಲೇಟ್‌ಗೆ (ಅಮೆರಿಕ ರಾಯಭಾರ ಕಚೇರಿ) ಸಂಪರ್ಕ ಕಲ್ಪಿಸುವ ರಸ್ತೆಗೆ ‘ಡೊನಾಲ್ಡ್ ಟ್ರಂಪ್ ಅವೆನ್ಯೂ’ ಎಂದು ಹೆಸರಿಡಲು ತೆಲಂಗಾಣ ಸರ್ಕಾರ ತೀರ್ಮಾನಿಸಿದೆ. ಜುಲೈ 4ರ ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಗೆ ಕೆಲವು ದಿನಗಳ ಮುಂಚಿತವಾಗಿ, ಅಂದರೆ ಜೂನ್ 23 ರಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಅವರ ಸಮ್ಮುಖದಲ್ಲಿ ಈ ರಸ್ತೆಯನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ತೆಲಂಗಾಣ ಮತ್ತು ಅಮೆರಿಕ ನಡುವಿನ ವ್ಯಾಪಾರ ಹಾಗೂ ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ತೆಲಂಗಾಣ ಸರ್ಕಾರದ ಈ ಹೆಜ್ಜೆಯನ್ನು ಸಿಪಿಐ(ಎಂ) ಹಿರಿಯ ನಾಯಕಿ ಎಂ.ಎ. ಬೇಬಿ ತೀವ್ರವಾಗಿ ಖಂಡಿಸಿದ್ದಾರೆ. ವಿಯೆಟ್ನಾಂ ಯುದ್ಧದ ಸಮಯದಲ್ಲಿ ಅಮೆರಿಕದ ಸಾಮ್ರಾಜ್ಯಶಾಹಿಯನ್ನು ವಿರೋಧಿಸಿ ಭಾರತವು ಕೋಲ್ಕತ್ತಾದ ಅಮೆರಿಕ ಕಾನ್ಸುಲೇಟ್ ರಸ್ತೆಗೆ ಕಮ್ಯುನಿಸ್ಟ್ ನಾಯಕ ‘ಹೋ ಚಿ ಮಿನ್ಹ್’ ಹೆಸರಿಟ್ಟಿದ್ದ ಇತಿಹಾಸವನ್ನು ಅವರು ನೆನಪಿಸಿದ್ದಾರೆ.

ಇಂದು ಇರಾನ್ ಬಿಕ್ಕಟ್ಟು, ಗಾಜಾ ಮಾರಣಹೋಮ ಮತ್ತು ವೆನೆಜುವೆಲಾದಲ್ಲಿ ಅಮೆರಿಕದ ದೌರ್ಜನ್ಯ ಮುಂದುವರೆದಿದೆ. ಇತ್ತೀಚೆಗಷ್ಟೇ ಅಮೆರಿಕದ ದಾಳಿಗೆ ಮೂವರು ಭಾರತೀಯ ನಾವಿಕರು ಬಲಿಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ನಮ್ಮ ಕಾಲದ ಹಿಟ್ಲರ್‌ನಂತಿರುವ ಡೊನಾಲ್ಡ್ ಟ್ರಂಪ್ ಹೆಸರನ್ನು ರಸ್ತೆಗೆ ಇಡುತ್ತಿರುವುದು ಭಾರತದ ಸಾರ್ವಭೌಮತ್ವ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ತರುವಂತಹದ್ದು ಎಂದು ಬೇಬಿ ಕಿಡಿಕಾರಿದ್ದಾರೆ. ಈ ನಿರ್ಧಾರವನ್ನು ತಕ್ಷಣವೇ ಹಿಂಪಡೆಯುವಂತೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸಬೇಕು ಎಂದು ಅವರು ವಿನಂತಿಸಿದ್ದಾರೆ.

ಮತ್ತಷ್ಟು ಓದಿ: ಇಸ್ರೇಲ್ ಕೈಲಾಗದಿದ್ದರೆ ಸಿರಿಯಾ ನಿಭಾಯಿಸಲಿ; ಹೆಜ್ಬುಲ್ಲಾ ನಿಗ್ರಹಕ್ಕೆ ಟ್ರಂಪ್ ಐಡಿಯಾ

ಹೈದರಾಬಾದ್‌ನಲ್ಲಿ ಜಾಗತಿಕ ಕಂಪನಿಗಳ ಹೂಡಿಕೆ ಮಹಾಪೂರ
ಮತ್ತೊಂದೆಡೆ, ಅಮೆರಿಕ ಮತ್ತು ಜಾಗತಿಕ ಕಂಪನಿಗಳನ್ನು ಆಕರ್ಷಿಸುವಲ್ಲಿ ಹೈದರಾಬಾದ್ ಮುಂಚೂಣಿಯಲ್ಲಿದೆ. ಗೂಗಲ್, ಮೈಕ್ರೋಸಾಫ್ಟ್ ಮತ್ತು ಅಮೆಜಾನ್ ಮಾತ್ರವಲ್ಲದೆ ಇತ್ತೀಚಿನ ವರ್ಷಗಳಲ್ಲಿ ಕಾಸ್ಟ್ಕೊ, ಮೆಕ್‌ಡೊನಾಲ್ಡ್ಸ್, ವ್ಯಾನ್‌ಗಾರ್ಡ್ ಮತ್ತು ಟಿ-ಮೊಬೈಲ್‌ನಂತಹ ಫಾರ್ಚೂನ್ 500 ಕಂಪನಿಗಳು ನಗರದಲ್ಲಿ ತಮ್ಮ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (GCC) ಸ್ಥಾಪಿಸಿವೆ. ನಾಸ್ಕಾಂ (NASSCOM) ಸಂಸ್ಥೆಯ ‘GCC ಲ್ಯಾಂಡ್‌ಸ್ಕೇಪ್ ವರದಿ – 2026’ ಪ್ರಕಾರ, ಭಾರತದಲ್ಲಿ ಆರಂಭವಾದ ಹೊಸ ಬ್ಯಾಂಕಿಂಗ್ ಮತ್ತು ಆರ್ಥಿಕ ಸೇವಾ ಕೇಂದ್ರಗಳಲ್ಲಿ ಅರ್ಧದಷ್ಟು ಹೈದರಾಬಾದ್‌ನಲ್ಲೇ ಇವೆ.

ಇದೇ ಕಾರಣಕ್ಕೆ ಗೂಗಲ್ ಹಾಗೂ ಮೈಕ್ರೋಸಾಫ್ಟ್ ಕಂಪನಿಗಳ ಹೆಸರನ್ನೂ ಪ್ರಮುಖ ರಸ್ತೆಗಳಿಗೆ ಇಡಲು ಸರ್ಕಾರ ಆಲೋಚಿಸುತ್ತಿದೆ.

ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ಅವರು ರಾಷ್ಟ್ರಮಟ್ಟದಲ್ಲಿ ಅಮೆರಿಕದ ವಿದೇಶಾಂಗ ನೀತಿಗಳು ಮತ್ತು ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಗಳನ್ನು ಬಹಿರಂಗವಾಗಿ ಟೀಕಿಸುತ್ತಿರುತ್ತಾರೆ. ಆದರೆ, ಅದೇ ಕಾಂಗ್ರೆಸ್ ಆಡಳಿತವಿರುವ ತೆಲಂಗಾಣದಲ್ಲಿ ಟ್ರಂಪ್ ಅವರಿಗೆ ರಸ್ತೆ ಹೆಸರಿಡುವ ಮೂಲಕ ಮಣೆ ಹಾಕುತ್ತಿರುವುದು ಈಗ ದೊಡ್ಡ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *