ನವಜಾತ ಶಿಶುವಿನ ರಕ್ಷಣೆImage Credit source: Tv9 Kannada
ಶಿವಮೊಗ್ಗ, ಜುಲೈ 06: ಜಿಲ್ಲೆಯ ಹೊಸನಗರ ತಾಲೂಕಿನ ಗವಟೂರಿನಲ್ಲಿ ಅಮಾನವೀಯ ಕೃತ್ಯವೊಂದು ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಅನಾಥವಾಗಿ ಬಿಟ್ಟು ಹೋಗಿರುವ ನವಜಾತ ಹೆಣ್ಣು ಶಿಶುವೊಂದು ಬಸ್ ನಿಲ್ದಾಣದ ಸಮೀಪ ಪತ್ತೆಯಾಗಿದ್ದು, ಹೃದಯ ಹೀನರು ಮಾಡಿರುವ ಈ ಕೃತ್ಯ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಗವಟೂರು ಹೊಳೆ ಬಳಿ ಬಸ್ ನಿಲ್ದಾಣದಲ್ಲಿ ಹೆಣ್ಣು ಶಿಶು ಪತ್ತೆಯಾಗಿದ್ದು, ಮಗು ಜನಿಸಿ ಸುಮಾರು 10ರಿಂದ 15 ದಿನಗಳಾಗಿರಬಹುದೆಂದು ಅಂದಾಜಿಸಲಾಗಿದೆ. ಶಿಶುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೈಚೀಲದಲ್ಲಿ ಪತ್ತೆಯಾದ ನವಜಾತ ಶಿಶು
ಕೈಚೀಲವೊಂದರಲ್ಲಿ ಬಟ್ಟೆಯಲ್ಲಿ ಸುತ್ತಿಲ ಮಗುವನ್ನು ಅನಾಥವಾಗಿ ಬಿಟ್ಟು ಹೋಗಲಾಗಿದ್ದು, ಜೊತೆಗೆ ಒಂದು ಹಾಲಿನ ಬಾಟಲ್ ಕೂಡ ಇಟ್ಟು ಗವಟೂರು ಹೊಳೆ ಸಮೀಪದ ನಿರ್ಜನ ಪ್ರದೇಶದಲ್ಲಿರುವ ಬಸ್ ನಿಲ್ದಾಣದಲ್ಲಿ ಶಿಶುವನ್ನು ಬಿಟ್ಟು ಹೋಗಿರೋದು ಕಂಡುಬಂದಿದೆ. ರಾತ್ರಿ 9 ಗಂಟೆ ಸಮಯದಲ್ಲಿ ಬಸ್ ನಿಲ್ದಾಣದ ಹಿಂಭಾಗದ ನಿವಾಸಿಗೆ ಮಗುವಿನ ಅಳುವಿನ ಶಬ್ದ ಕೇಳಿಸಿದ್ದು, ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಕಢ ಸ್ಥಳೀಯರು ರಿಪ್ಪನ್ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದು, ರಿಪ್ಪನ್ಪೇಟೆ ಠಾಣೆಯ ಪಿಎಸ್ಐ ರಾಜುರೆಡ್ಡಿ ಮತ್ತುಸಿಬ್ಬಂದಿ ಮಗುವನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ: ವಿಶ್ವ ವಿಖ್ಯಾತ ಜೋಗ್ ಫಾಲ್ಸ್ ಗೆ ರಾಜಕಳೆ; ರಾಜ, ರಾಣಿ, ರೋರರ್, ರಾಕೆಟ್ ಭೋರ್ಗರೆತ
ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ
ಇನ್ನು 1.6 ಕೆಜಿ ತೂಕವಿರುವ ಹೆಣ್ಣು ಶಿಶುವಿಗೆ ರಿಪ್ಪನ್ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಆರೈಕೆ ನೀಡಿ ಬಳಿಕ ಚಿಕಿತ್ಸೆ ಹಾಗೂ ಪಾಲನೆಗಾಗಿ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ . ಮಗುವನ್ನು ಯಾರು ಮತ್ತು ಯಾವ ಕಾರಣಕ್ಕಾಗಿ ಇಲ್ಲಿ ಬಿಟ್ಟು ಹೋಗಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಕುರಿತು ರಿಪ್ಪನಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 1:39 pm, Mon, 6 July 26