Headlines

ಹೊಸ ತಂತ್ರ: ಟ್ರಂಪ್ ನಡವಳಿಕೆ ಅಧ್ಯಯನ ಮಾಡಲು ಮನಃಶಾಸ್ತ್ರಜ್ಞರ ನೇಮಿಸಿದ ಇರಾನ್ – Kannada News | Iran’s Diplomatic Breakthrough: Psychologists Analyze Trump for US Iran Peace Talks

ಟೆಹ್ರಾನ್, ಜೂನ್ 16: ಅಮೆರಿಕ ಮತ್ತು ಇರಾನ್ ನಡುವಿನ ಸುದೀರ್ಘ ಸಂಘರ್ಷವನ್ನು ಕೊನೆಗೊಳಿಸಲು ಇರಾನ್ ಸರ್ಕಾರವು ಅತ್ಯಂತ ವಿಭಿನ್ನ ಹಾಗೂ ರಹಸ್ಯ ರಾಜತಾಂತ್ರಿಕ ತಂತ್ರವೊಂದನ್ನು ಬಳಸಿರುವುದು ಬೆಳಕಿಗೆ ಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರ ವಿಶಿಷ್ಟ ನಿರ್ಧಾರಗಳು ಮತ್ತು ವರ್ತನೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅದಕ್ಕೆ ತಕ್ಕಂತೆ ಮಾತುಕತೆಯ ಕಾರ್ಯತಂತ್ರವನ್ನು ರೂಪಿಸಲು ಇರಾನ್ ತನ್ನ ರಾಜತಾಂತ್ರಿಕ ತಂಡಕ್ಕೆ ಇಬ್ಬರು ಹಿರಿಯ ಮನಶ್ಶಾಸ್ತ್ರಜ್ಞರನ್ನು (Psychologists) ಸೇರಿಸಿಕೊಂಡಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಮನಃಶಾಸ್ತ್ರಜ್ಞರ ಸಲಹೆಯಂತೆ ಬದಲಾದ ಸಂದೇಶ
ಇರಾನಿನ ಅಧಿಕಾರಿಯೊಬ್ಬರ ಪ್ರಕಾರ, ಏಪ್ರಿಲ್‌ನಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆದ ಮೊದಲ ಸುತ್ತಿನ ಪರೋಕ್ಷ ಮಾತುಕತೆಯ ನಂತರ ಈ ಇಬ್ಬರು ಹಿರಿಯ ಮನಃಶಾಸ್ತ್ರಜ್ಞರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಡೊನಾಲ್ಡ್ ಟ್ರಂಪ್ ಅವರ ವರ್ತನೆಯ ಮಾದರಿಯನ್ನು ಅಧ್ಯಯನ ಮಾಡಿ, ಅಮೆರಿಕಕ್ಕೆ ಕಳುಹಿಸುವ ಲಿಖಿತ ಪತ್ರಗಳು ಹಾಗೂ ಸಂದೇಶಗಳನ್ನು ಯಾವ ಶೈಲಿಯಲ್ಲಿ ರೂಪಿಸಬೇಕು ಎಂದು ಈ ತಜ್ಞರು ಇರಾನ್ ತಂಡಕ್ಕೆ ಮಾರ್ಗದರ್ಶನ ನೀಡಿದರು. ವಿಶೇಷವೆಂದರೆ, ಈ ಬದಲಾವಣೆಗಳನ್ನು ಜಾರಿಗೆ ತಂದ ನಂತರ ಟ್ರಂಪ್ ಅವರಿಂದ ಬಂದ ಪ್ರತಿಕ್ರಿಯೆಗಳು ಹೆಚ್ಚು ಸಕಾರಾತ್ಮಕ ಮತ್ತು ರಚನಾತ್ಮಕವಾಗಿದ್ದವು ಎಂದು ಮೂಲಗಳು ತಿಳಿಸಿವೆ.

ಮಾತುಕತೆಯ ವೇಳೆ ಉಭಯ ದೇಶಗಳ ನಡುವೆ ವಿನಿಮಯವಾಗುವ ಪ್ರತಿಯೊಂದು ಪಠ್ಯ ಮತ್ತು ಪತ್ರಗಳು ಭವಿಷ್ಯದಲ್ಲಿ ಐತಿಹಾಸಿಕ ದಾಖಲೆಗಳಾಗಲಿವೆ ಎಂಬುದನ್ನು ಇರಾನ್ ಗಮನದಲ್ಲಿಟ್ಟುಕೊಂಡಿದೆ. ಮುಂದಿನ ದಿನಗಳಲ್ಲಿ ಇವು ಸಾರ್ವಜನಿಕವಾಗಿ ಬಿಡುಗಡೆಯಾದಾಗ, ಇರಾನ್ ಎಷ್ಟು ಜಾಣ್ಮೆ ಮತ್ತು ಅತ್ಯಾಧುನಿಕ ರಾಜತಾಂತ್ರಿಕ ತಂತ್ರದಿಂದ ಮಾತುಕತೆ ನಡೆಸಿತ್ತು ಎಂಬುದು ಜಗತ್ತಿಗೆ ತಿಳಿಯಲಿ ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.

ಮತ್ತಷ್ಟು ಓದಿ: ನಾಳೆಯೇ ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ; ತಕ್ಷಣವೇ ಹಾರ್ಮುಜ್ ತೆರೆಯಲಾಗುವುದು ಎಂದ ಟ್ರಂಪ್

ಜೂನ್ 19 ರಂದು ಶಾಂತಿ ಒಪ್ಪಂದಕ್ಕೆ ಸಹಿ
ಈ ರಾಜತಾಂತ್ರಿಕ ಪ್ರಯತ್ನಗಳು ಈಗ ಯಶಸ್ಸಿನ ಹಾದಿಗೆ ಬಂದಿವೆ. ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಸಂಘರ್ಷವನ್ನು ಕೊನೆಗೊಳಿಸಲು ಡೊನಾಲ್ಡ್ ಟ್ರಂಪ್ ಹಾಗೂ ಇರಾನ್ ಅಧಿಕಾರಿಗಳು ಪ್ರಾಥಮಿಕ ತಿಳುವಳಿಕೆ ಒಪ್ಪಂದಕ್ಕೆ (MoU) ಒಪ್ಪಿಗೆ ಸೂಚಿಸಿದ್ದಾರೆ. ಜೂನ್ 19 ರಂದು ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಈ ಐತಿಹಾಸಿಕ ಒಪ್ಪಂದಕ್ಕೆ ಉಭಯ ದೇಶಗಳು ಅಧಿಕೃತವಾಗಿ ಸಹಿ ಹಾಕುವ ನಿರೀಕ್ಷೆಯಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ವೈದ್ಯಕೀಯ ತಪಾಸಣೆಯಲ್ಲಿ ಬರೋಬ್ಬರಿ 22 ವೈದ್ಯಕೀಯ ತಜ್ಞರು ಭಾಗವಹಿಸಿದ್ದರು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಇದು ಹಿಂದಿನ ತಪಾಸಣೆಗಳಿಗಿಂತ ದುಪ್ಪಟ್ಟು ಸಂಖ್ಯೆಯಾಗಿದ್ದು, ಅಮೆರಿಕ ಅಧ್ಯಕ್ಷರ ಆರೋಗ್ಯ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲಿರುವ ಜಾಗತಿಕ ನಿಗಾವನ್ನು ತೋರಿಸುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *