ಮಹಿಳಾ ಟಿ20 ವಿಶ್ವಕಪ್ನ (Women’s T20 World Cup 2026) ಆರನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ಇಂದು (ಜೂ.14) ನಡೆಯಲಿರುವ ಈ ಪಂದ್ಯದ ವೇಳೆ ಉಭಯ ತಂಡಗಳ ಆಟಗಾರ್ತಿಯರು ‘ಹ್ಯಾಂಡ್‌ಶೇಕ್’ ಮಾಡಲಿದ್ದಾರೆಯೇ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಯನ್ನು ಟೀಮ್ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಮುಂದಿಡಲಾಗಿದೆ.
ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿರುವ ಹರ್ಮನ್‌ಪ್ರೀತ್ ಕೌರ್ಗೆ, “ಭಾರತ ತಂಡವು ಪಾಕಿಸ್ತಾನ್ ಆಟಗಾರ್ತಿಯರೊಂದಿಗೆ ಪಂದ್ಯದ ಆರಂಭದಲ್ಲಿ ಮತ್ತು ಕೊನೆಯಲ್ಲಿ ಹಸ್ತಲಾಘವ ಮಾಡಲಿದೆಯೇ?” ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಖಡಕ್ ಆಗಿ ಉತ್ತರಿಸಿದ ಹರ್ಮನ್‌ಪ್ರೀತ್ ಕೌರ್…
“ನೋಡಿ, ನಾವಿಲ್ಲಿ ಬಂದಿರುವುದು ಕ್ರಿಕೆಟ್ ಆಡಲು. ನಾವು ಕೇವಲ ಕ್ರಿಕೆಟ್ ಬಗ್ಗೆ ಮಾತ್ರ ಮಾತನಾಡುತ್ತೇವೆ. ಕ್ರಿಕೆಟ್ ಹೊರತುಪಡಿಸಿ ನಾವು ಬೇರೆ ಯಾವುದರ ಬಗ್ಗೆಯೂ ಯೋಚಿಸುವುದಿಲ್ಲ, ಮಾತನಾಡುವುದೂ ಇಲ್ಲ. ಮೊದಲ ದಿನದಿಂದಲೂ ಕ್ರಿಕೆಟ್ ನಮ್ಮ ಕನಸಾಗಿದೆ. ಮುಂದಿನ ಪಂದ್ಯವನ್ನು ನಾವು ಕೇವಲ ಮತ್ತೊಂದು ಸಾಮಾನ್ಯ ಪಂದ್ಯದಂತೆ ನೋಡುತ್ತಿದ್ದೇವೆ ಮತ್ತು ನಮ್ಮ ಗಮನವೆಲ್ಲಾ ಆಟದ ಮೇಲಷ್ಟೇ ಇದೆ.” ಎಂದಿದ್ದಾರೆ.
ಏನಿದು ‘ನೋ-ಹ್ಯಾಂಡ್‌ಶೇಕ್’ ವಿವಾದ?
ಕಳೆದ ಕೆಲವು ಸಮಯದಿಂದ ಭಾರತೀಯ ಕ್ರಿಕೆಟ್ ತಂಡಗಳು ಪಾಕಿಸ್ತಾನ್ ಆಟಗಾರರಿಗೆ ಹಸ್ತಲಾಘವ ನೀಡದಿರುವ ನೀತಿಯನ್ನು ಅನುಸರಿಸುತ್ತಾ ಬಂದಿವೆ. ಇದಕ್ಕೆ ಮುಖ್ಯ ಕಾರಣ ಪಹಲ್ಗಾಮ್ನಲ್ಲಿ ಪಾಕ್ ಭಯೋತ್ಪಾದಕರು ನಡೆಸಿದ ದಾಳಿ. ಈ ದಾಳಿಯನ್ನು ಖಂಡಿಸಿ ಹಾಗೂ ಸೈನಿಕರಿಗೆ ಬೆಂಬಲ ವ್ಯಕ್ತಪಡಿಸಿ ಭಾರತೀಯ ಆಟಗಾರರು ಹಾಗೂ ಆಟಗಾರ್ತಿಯರು ಪಾಕಿಸ್ತಾನ್ ಪ್ಲೇಯರ್ಸ್ ಜೊತೆ ಶೇಕ್ ಹ್ಯಾಂಡ್ ಮಾಡುತ್ತಿಲ್ಲ.
- ಆರಂಭ: ಏಷ್ಯಾ ಕಪ್ 2025 ರ ವೇಳೆ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು ಪಾಕಿಸ್ತಾನ್ ವಿರುದ್ಧದ ಪಂದ್ಯದ ಬಳಿಕ ಶೇಕ್ ಹ್ಯಾಂಡ್ ಮಾಡದೆ ಮೈದಾನ ತೊರೆದಾಗ ಈ ವಿವಾದ ಮುಂಚೂಣಿಗೆ ಬಂದಿತ್ತು.
- ಮುಂದುವರಿಕೆ: ಇದೇ ನೀತಿಯನ್ನು ಅಂಡರ್-19 ವಿಶ್ವಕಪ್ ಹಾಗೂ ಮಹಿಳಾ ಏಕದಿನ ವಿಶ್ವಕಪ್‌ಗಳಲ್ಲೂ ಭಾರತೀಯ ತಂಡಗಳು ಮುಂದುವರಿಸಿದ್ದವು.
- ಹಿಂದಿನ ಘಟನೆ: ಏಕದಿನ ವಿಶ್ವಕಪ್ ಸಂದರ್ಭದಲ್ಲಿ ಹರ್ಮನ್‌ಪ್ರೀತ್ ಕೌರ್ ಮತ್ತು ಪಾಕ್ ನಾಯಕಿ ಫಾತಿಮಾ ಸನಾ ಟಾಸ್ ವೇಳೆ ಹಸ್ತಲಾಘವ ಮಾಡದೆ ಕೇವಲ ನಮಸ್ಕಾರ ಮಾಡುವ ಮೂಲಕ ಈ ನೀತಿಯನ್ನು ಮುಂದುವರೆಸಿದ್ದರು.
ಇದನ್ನೂ ಓದಿ: ಮುಂಬೈ ಟಿ20 ಲೀಗ್ ಫೈನಲ್ನಲ್ಲಿ ಆಟಗಾರರ ನಡುವೆ ನೂಕಾಟ, ತಳ್ಳಾಟ, ಕಿತ್ತಾಟ!
ಟೀಮ್ ಇಂಡಿಯಾ ಕ್ಯಾಪ್ಟನ್ ಹರ್ಮನ್‌ಪ್ರೀತ್ ಕೌರ್ ಅವರು ಈಗ ನೀಡಿರುವ ಹೇಳಿಕೆಯನ್ನು ಗಮನಿಸಿದರೆ, ಈ ಬಾರಿಯ ವಿಶ್ವಕಪ್‌ನಲ್ಲೂ ಭಾರತ ತಂಡವು ಅದೇ ಹಳೆಯ ‘ನೋ-ಹ್ಯಾಂಡ್‌ಶೇಕ್’ ಸಂಪ್ರದಾಯವನ್ನು ಮುಂದುವರಿಸುವ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಭಾರತೀಯ ಆಟಗಾರ್ತಿಯರು ಶೇಕ್ ಹ್ಯಾಂಡ್ ನೀಡುವ ಸಾಧ್ಯತೆಯಿಲ್ಲ ಎಂದೇ ಹೇಳಬಹುದು.