ಹ್ಯಾಕರ್ ಶ್ರೀಕಿಯ ಐಷಾರಾಮಿ ಜೀವನದಿಂದಲೇ ನಲಪಾಡ್ಗೆ ಕುತ್ತು ಬಂದಿದ್ದು ಹೇಗೆ ಗೊತ್ತಾ? ಇಲ್ಲಿದೆ ನೋಡಿImage Credit source: tv9
ಬೆಂಗಳೂರು, ಏಪ್ರಿಲ್ 21: ಬಿಟ್ ಕಾಯಿನ್ ಹಗರಣಕ್ಕೆ (Bitcoin Scam) ಸಂಬಂಧಿಸಿದಂತೆ ಕಿಂಗ್ ಪಿನ್ ಶ್ರೀಕಿ ನಿವಾಸದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ತನಿಖೆ ಏಪ್ರಿಲ್ 21 ರಂದೂ ಮುಂದುವರಿದಿದೆ. ಬೆಂಗಳೂರಿನ ಜಯನಗರದಲ್ಲಿರುವ ಶ್ರೀಕಿ ಮನೆಯಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಶೋಧ ಕಾರ್ಯ ನಡೆಯುತ್ತಿದೆ. ಕಾಂಗ್ರೆಸ್ (Congress) ಶಾಸಕ ಎನ್.ಎ. ಹ್ಯಾರಿಸ್ (NA Haris) ಮಗ ನಲಪಾಡ್ ಮತ್ತು ಶ್ರೀಕಿ ನಡುವೆ 4.65 ಕೋಟಿ ರೂಪಾಯಿಗಳ ಹಣಕಾಸು ವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದ್ದು, ಇದರ ಬಗ್ಗೆ ಇಡಿ ತೀವ್ರ ತನಿಖೆ ನಡೆಸುತ್ತಿದೆ.
ಈ ಹಗರಣ ಈಗ ಹ್ಯಾರಿಸ್ ಕುಟುಂಬಕ್ಕೂ ಸಂಕಷ್ಟ ತಂದೊಡ್ಡಿದೆ. ಇಡಿ ಅಧಿಕಾರಿಗಳು ಶ್ರೀಕಿಯನ್ನು ವಿಚಾರಣೆ ನಡೆಸುತ್ತಿದ್ದು, ಬ್ಯಾಂಕ್ ಖಾತೆಗಳ ಪರಿಶೀಲನೆಗಾಗಿ ಇಂದು ಬ್ಯಾಂಕ್ಗೆ ಕರೆದೊಯ್ಯುವ ಸಾಧ್ಯತೆಯಿದೆ. ಶ್ರೀಕಿಯ ಐಷಾರಾಮಿ ಜೀವನಶೈಲಿಗೆ ನಲಪಾಡ್ ಹಣಕಾಸು ಒದಗಿಸಿದ್ದರ ಕುರಿತು ಸಾಕ್ಷ್ಯಗಳನ್ನು ಇಡಿ ಕಲೆಹಾಕುತ್ತಿದೆ.
ನಲಪಾಡ್, ಶ್ರೀಕಿ ಮತ್ತು ಡಿಜಿಪಿ ಪುತ್ರ ರಿಷಬ್ ಒಟ್ಟಾಗಿ ಲಾವೆಲ್ಲೆ ರಸ್ತೆಯ ಸೆಕೆಂಡ್ ಹ್ಯಾಂಡ್ ಶೋರೂಂನಲ್ಲಿ ಪೋರ್ಷೆ ಕಾರ್ ಖರೀದಿಗೆ ಬಂದಿದ್ದರು. ಟೆಸ್ಟ್ ಡ್ರೈವ್ ಮಾಡುವಾಗ ಶ್ರೀಕಿ ಕಾರಿನಲ್ಲಿ ಸಿಗರೆಟ್ ಸೇದಲು ಯತ್ನಿಸಿದ್ದು, ಶೋರೂಂ ಸಿಬ್ಬಂದಿ ನಿರಾಕರಿಸಿದಾಗ ಜಗಳ ತೆಗೆದಿದ್ದ. ನಂತರ ಈ ಗ್ಯಾಂಗ್ 57 ಲಕ್ಷ ರೂಪಾಯಿಗೆ ಕಾರು ಖರೀದಿಸಿತ್ತು.
ಪೋರ್ಷೆ ಕಾರನ್ನೇ ಆಷ್ಟ್ರೇ ಆಗಿ ಬಳಸಿ, ಸಿಗರೆಟ್ ಬೂದಿ ಉದುರಿಸಿದ್ದ ಶ್ರೀಕಿ!
ಶ್ರೀಕಿ ಕಾರನ್ನು ಆಷ್ಟ್ರೇ ಆಗಿ ಬಳಸಿ, ಸಿಗರೆಟ್ ಬೂದಿ ಉದುರಿಸಿದ್ದಲ್ಲದೆ, ಲೈಟರ್ನಿಂದ ಕಾರಿನ ಸೀಟಿಗೆ ಬೆಂಕಿ ಕೂಡ ಹಾಕಿದ್ದ ಎನ್ನಲಾಗಿದೆ. ಬಳಿಕ ಇದೇ ಕಾರನ್ನು 47 ಲಕ್ಷ ರೂಪಾಯಿಗೆ ಅದೇ ಶೋರೂಂಗೆ ವಾಪಸ್ ಮಾರಾಟ ಮಾಡಿದ್ದರು. ಈ ಹಣಕಾಸು ವ್ಯವಹಾರವನ್ನು ನಲಪಾಡ್ ಮತ್ತು ರಿಷಬ್ ನಿರ್ವಹಿಸಿದ್ದರು. ಈ ಘಟನೆಯ ಬಗ್ಗೆ 2024ರಲ್ಲಿ ಸಿಐಡಿ ಎಸ್ಐಟಿ ತಂಡ ನಲಪಾಡ್ ಮತ್ತು ರಿಷಬ್ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿತ್ತು. ಶ್ರೀಕಿಯ ಹಣಕಾಸು ವ್ಯವಹಾರಕ್ಕೆ ನಲಪಾಡ್ ಸಹಕರಿಸಿದ್ದರಿಂದ ಈಗ ಆತನಿಗೆ ಸಂಕಷ್ಟ ಎದುರಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಹ್ಯಾರಿಸ್ ಕುಟುಂಬಕ್ಕೆ ಇ.ಡಿ ಶಾಕ್: ನಲಪಾಡ್ಗೆ ಉರುಳಾಯ್ತಾ ಬಿಟ್ ಕಾಯಿನ್ ಹಗರಣ!
ಪೋರ್ಷೆ ಕಾರು ಖರೀದಿ ಸೇರಿದಂತೆ ಅವರ ಹಿಂದಿನ ಹಲವು ವ್ಯವಹಾರಗಳು ಈಗ ಇಡಿ ಪರಿಶೀಲನೆಗೆ ಒಳಪಟ್ಟಿವೆ. ತನಿಖೆಗೆ ಶ್ರೀಕಿ ಸಹಕರಿಸುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 11:40 am, Tue, 21 April 26