ಶಿವಮೊಗ್ಗ, ಜೂನ್ 22: 17 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಜುಲೈ 23, 2019ರಲ್ಲಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಬಹುಮತ ಕಳೆದುಕೊಂಡು ಪತನಗೊಂಡಿತ್ತು. ಬಳಿಕ ಜುಲೈ 26, 2019ರಂದು ಬಿ.ಎಸ್. ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ವೇಳೆ ಬಿಜೆಪಿ ಕುದುರೆ ವ್ಯಾಪಾರ ನಡೆಸಿರುವ ಆರೋಪವನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಮಾಡಿದ್ದವು. ಆದರೆ ಬಿಜೆಪಿ ಮಾತ್ರ ಇದನ್ನು ಅಲ್ಲಗಳೆದಿತ್ತು. ಆದರೀಗ ಮಾಜಿ ಸಚಿವ, ಬಿಜೆಪಿಯಿಂದ ಉಚ್ಛಾಟಿತರಾಗಿರುವ ನಾಯಕ ಕೆ.ಎಸ್. ಈಶ್ವರಪ್ಪ ನೀಡಿರುವ ಹೇಳಿಕೆಯೊಂದು 2019ರ ಚರ್ಚೆ ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿದೆ.
ಅಷ್ಟಕ್ಕೂ ಈಶ್ವರಪ್ಪ ಹೇಳಿದ್ದೇನು?
ಪರಿಷತ್ ಚುನಾವಣೆಯಲ್ಲಿ ಕೆಲ ಬಿಜೆಪಿ ಶಾಸಕರಿಂದ ಅಡ್ಡ ಮತದಾನ ವಿಚಾರವಾಗಿ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿ ಮಾತನಾಡಿರುವ ಈಶ್ವರಪ್ಪ, ಹಿಂದೆ 17 ಕಾಂಗ್ರೆಸ್ ಶಾಸಕರಿಗೆ ಹಣ ನೀಡಿ ಖರೀದಿಸಿ ನಾವು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದ್ದೆವು. ಆ ನಿರ್ಧಾರದಿಂದ ಆಗ ನಮಗೆ ತಾತ್ಕಾಲಿಕ ಜಯ ಸಿಕ್ಕಿತ್ತಾದರೂ ಅಂತಿಮವಾಗಿ ನಮ್ಮ ಸರ್ಕಾರ ಹಾಳಾಗಲು ಅದುವೇ ಕಾರಣವಾಯಿತು ಎಂದು ಈಶ್ವರಪ್ಪ ಹೇಳಿರೋದೀಗ ಈ ಹಿಂದಿನ ಆರೋಪಗಳಿಗೆ ಪುಷ್ಠಿ ನೀಡಿದೆ.
ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್; ಆಣೆ ಪ್ರಮಾಣಕ್ಕೆ ಮುಂದಾದ ಬಿಜೆಪಿಗರಿಗೆ ಹೆಚ್.ಡಿ. ಕುಮಾರಸ್ವಾಮಿ ಕಿವಿಮಾತು
ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ಕೋಟ್ಯಂತರ ಭಕ್ತರು ಇದ್ದಾರೆ. ಹೀಗಾಗಿ ಮೊದಲು ಈ ನಿರ್ಧಾರದಿಂದ ವಿಜಯೇಂದ್ರ ಹಿಂದೆ ಸರಿಯಬೇಕು. ಅಡ್ಡ ಮತದಾನ ಮಾಡಿದವರು ಮಂಜುನಾಥನ ಮುಂದೆ ಆಣೆ ಮಾಡಿ, ಅಣ್ಣಪ್ಪ ಸ್ವಾಮಿ ಮುಂದೆ ಕ್ಷಮೆ ಕೇಳಿದರೆ ಯಾವುದೇ ಬೆಲೆ ಇರಲ್ಲ. ಹಿಂದೆ ಶಿವಮೊಗ್ಗ ವಾರ್ಡ್ ಚುನಾವಣೆ ವೇಳೆ ಆಣೆ ಪ್ರಮಾಣ ನಡೆದಿತ್ತು. ಅಭ್ಯರ್ಥಿಯೊಬ್ಬ ಸಿಗಂದೂರು ಚೌಡೇಶ್ವರಿ ದೇವಿಯ ಫೋಟೋ ನೀಡಿ, 5 ರೂಪಾಯಿ ಕೊಟ್ಟು ಮತಹಾಕುವಂತೆ ಆಣೆ ಪ್ರಮಾಣ ಮಾಡಿಸಿದ್ದ. ಮರುದಿನ ಮತ್ತೊಬ್ಬ ಅಭ್ಯರ್ಥಿ ಮಾರಮ್ಮನ ಫೋಟೋ ಜೊತೆ 10 ರೂಪಾಯಿ ಕೊಟ್ಟು ಮತ ಹಾಕುವಂತೆ ಆಣೆ ಮಾಡಿಸಿದ್ದ. ಕೊನೆಗೆ 10 ರೂಪಾಯಿ ಕೊಟ್ಟವನೇ ಚುನಾವಣೆಯಲ್ಲಿ ಗೆದ್ದ ಎಂದು ಈಶ್ವರಪ್ಪ ಉದಾಹರಣೆ ನೀಡಿದ ಪ್ರಸಂಗವೂ ಇದೇ ವೇಳೆ ನಡೆದಿದೆ. ಅಡ್ಡ ಮತದಾನ ವಿಚಾರದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಹೀಗಾಗಿ ಈ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದೂ ಅವರು ಆಗ್ರಹಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.