Headlines

1921ರ ದಂಗೆ, ಬಿಟಿಷರ ಬಾಲ್ ಬಾಯ್ಸ್, ಕೇರಳಂ ಫುಟ್​​ಬಾಲ್ ಕ್ರೇಝ್! – Kannada News | The Epic Journey of Kerala Football

“ಭಾರತದ ನಕ್ಷೆಯಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದು ಸಂಭ್ರಮಿಸುವ ಕೋಟ್ಯಂತರ ಜನರ ನಡುವೆ, ಕಾಲಿಗೆ ಚೆಂಡು ಸಿಕ್ಕರೆ ಸಾಕು ಇಡೀ ಜಗತ್ತನ್ನೇ ಮರೆಯುವ ಒಂದು ಸುಂದರ ರಾಜ್ಯವಿದೆ, ಅದುವೇ ಕೇರಳಂ! ಇಡೀ ದೇಶ ಕ್ರಿಕೆಟ್ ಜ್ವರದಲ್ಲಿ ಮುಳುಗಿರುವಾಗ, ಕೇರಳದ ಮಲಬಾರ್ ಗದ್ದೆಗಳಲ್ಲಿ ಮತ್ತು ಕರಾವಳಿಯ ತೀರಗಳಲ್ಲಿ ಮಾತ್ರ ಫುಟ್‌ಬಾಲ್ ಎಂಬ ಮಾಂತ್ರಿಕ ಆಟದ ಸದ್ದು ಮೊಳಗುತ್ತಿರುತ್ತದೆ. ಅಲ್ಲಿನ ಜನರಿಗೆ ಫುಟ್‌ಬಾಲ್ ಕೇವಲ 90 ನಿಮಿಷಗಳ ಆಟವಲ್ಲ, ಅದೊಂದು ಭಾವನೆ, ಉಸಿರು ಮತ್ತು ಪರಂಪರೆ. ಆದರೆ, ಭಾರತೀಯ ಫುಟ್‌ಬಾಲ್ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಕೇರಳದ ಮಣ್ಣಿನಲ್ಲಿ ಈ ಕ್ರೀಡೆಯ ಬೇರುಗಳು ಇಷ್ಟೊಂದು ಆಳವಾಗಿ ಇಳಿಯಲು ಒಂದು ಶತಮಾನದ ಹಿಂದಿನ ರೋಚಕ ಇತಿಹಾಸ ಮತ್ತು ಬ್ರಿಟಿಷ್ ಸೈನಿಕರ ವಿರುದ್ಧ ನಡೆದ ‘ಬರಿಗಾಲಿನ ಪ್ರತಿರೋಧ’ ಕಾರಣ ಎಂಬುದು ತಿಳಿಯುತ್ತದೆ. ಆ ರೋಚಕ ಕಥೆಯ ವಿವರ ಇಲ್ಲಿದೆ…”

ಕೇರಳದ ಫುಟ್​​ಬಾಲ್ ಹಿಸ್ಟರಿ ಶುರುವಾಗುವುದು 1921 ರಿಂದ. ಅಂದರೆ ಸ್ವಾತಂತ್ರ ಪೂರ್ವದಲ್ಲೇ ಕೇರಳದಲ್ಲಿ ಕಾಲ್ಚೆಂಡಿನಾಟದ ಕ್ರೇಝ್ ಶುರುವಾಗಿತ್ತು. ಇಂತಹದೊಂದು ಕ್ರೇಝ್ ಹುಟ್ಟುಹಾಕಿದ್ದು ಬ್ರಿಟಿಷರು.

1921ರಲ್ಲಿ ನಡೆದ ಮಲಬಾರ್ ದಂಗೆಯನ್ನು ಹತ್ತಿಕ್ಕಲು ಬ್ರಿಟಿಷರು ಮಲಪ್ಪುರಂ ಅನ್ನು ತಮ್ಮ ಪ್ರಮುಖ ಮಿಲಿಟರಿ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು. ಅಲ್ಲದೆ ಇದಕ್ಕಾಗಿ ಮಲಬಾರ್ ಸ್ಪೆಷಲ್ ಪೊಲೀಸ್ (MSP) ದಳವನ್ನು ಸಹ ಸ್ಥಾಪಿಸಿದ್ದರು.

ಹೀಗೆ ಮಲಬಾರ್ ತೀರಕ್ಕೆ ಬಂದ ಬ್ರಿಟಿಷ್ ಸೈನಿಕರು ತಮ್ಮ ದೈಹಿಕ ಫಿಟ್‌ನೆಸ್ ಹಾಗೂ ಬಿಡುವಿನ ವೇಳೆಯ ವಿನೋದಕ್ಕಾಗಿ ಬ್ಯಾರಾಕ್ಸ್ ಮೈದಾನಗಳಲ್ಲಿ ಫುಟ್‌ಬಾಲ್ ಆಡಲು ಆರಂಭಿಸಿದರು.

ಬ್ರಿಟಿಷರ ಕಾಲ್ಚೆಂಡಾಟವನ್ನು ಸ್ಥಳೀಯ ಮಲಯಾಳಿ ಯುವಕರು ಮೈದಾನದ ಬೇಲಿಯ ಆಚೆಯಿಂದ ನಿಂತು ಕುತೂಹಲದಿಂದ ಗಮನಿಸುತ್ತಿದ್ದರು. ಈ ಕುತೂಹಲವೇ ಯುವಕರನ್ನು ಹೊಸ ಕ್ರೀಡೆಯತ್ತ ಸೆಳೆಯಿತು.

ಬಾಲ್ ಬಾಯ್ಸ್​:

ಆರಂಭದಲ್ಲಿ ಬ್ರಿಟಿಷ್ ಸೈನಿಕರಿಗೆ ಬಾಲ್ ಬಾಯ್ಸ್ ಆಗಿ ಕೆಲಸ ಮಾಡುತ್ತಿದ್ದ ಸ್ಥಳೀಯ ಯುವಕರು, ಕ್ರಮೇಣ ತಾವೂ ಆಟವನ್ನು ಕಲಿತರು. ಅಲ್ಲದೆ  ಸುಗ್ಗಿಯ ನಂತರದ ಗದ್ದೆಗಳಲ್ಲಿ ಆಡಲು ಆರಂಭಿಸಿದರು.

ಹೀಗೆ ಶುರುವಾದ ಆಟ ಆ ಬಳಿಕ ಬ್ರಿಟಿಷರೊಂದಿಗೆ ಜಿದ್ದಾಟವಾಗಿ ಬದಲಾಯಿತು. ಮಲಬಾರ್‌ನ ಯುವಕರಿಗೆ ಬ್ರಿಟಿಷರನ್ನು ಮೈದಾನದಲ್ಲಿ ಸೋಲಿಸುವುದು ಕೇವಲ ಆಟವಾಗಿರಲಿಲ್ಲ, ಅದು ತಮ್ಮನ್ನು ತುಳಿದಿದ್ದ ವಸಾಹತುಶಾಹಿ ಆಡಳಿತದ ವಿರುದ್ಧ ಕ್ರೀಡೆಯ ಮೂಲಕ ಸೇಡು ತೀರಿಸಿಕೊಳ್ಳುವ ತೀವ್ರವಾದ ರಾಷ್ಟ್ರೀಯತಾ ಭಾವನೆಯಾಗಿತ್ತು.

ಫುಟ್​ಬಾಲ್ ಮೆಕ್ಕಾ: ಮಲಪ್ಪುರಂ

MSP ದಳವು ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ತಂಡಕ್ಕೆ ಸೇರಿಸಿಕೊಳ್ಳಲು ಆರಂಭಿಸಿದಾಗ, ಫುಟ್‌ಬಾಲ್ ಇಡೀ ಮಲಬಾರ್‌ನ ಹಳ್ಳಿ ಹಳ್ಳಿಗಳಿಗೆ ಹರಡಿತು. ಮಲಪ್ಪುರಂ ಜಿಲ್ಲೆಯು ಎಷ್ಟು ಪ್ರಸಿದ್ಧವಾಯಿತೆಂದರೆ, ಅದನ್ನು “ಕೇರಳದ ಫುಟ್‌ಬಾಲ್ ಮೆಕ್ಕಾ” ಎಂದು ಕರೆಯಲಾಯಿತು. ಇಲ್ಲಿಂದಲೇ ಮುಂದೆ ಭಾರತ ತಂಡವನ್ನು ಪ್ರತಿನಿಧಿಸಿದ ಒಲಿಂಪಿಯನ್ ರೆಹಮಾನ್ ಅವರಂತಹ ದಂತಕಥೆಗಳು ಹೊರಹೊಮ್ಮಿದರು.

ಬ್ರೆಝಿಲ್ ಕನೆಕ್ಷನ್‌ಗೆ ಮುನ್ನುಡಿ:

ಬ್ರಿಟಿಷರಿಂದ ಫುಟ್‌ಬಾಲ್ ಕಲಿತರೂ, ಕೇರಳದ ಜನರಿಗೆ ಬ್ರಿಟಿಷ್ ಶೈಲಿಯ ‘ಲಾಂಗ್ ಬಾಲ್’ ಆಟ ಇಷ್ಟವಾಗಲಿಲ್ಲ. ಲಾಂಗ್ ಬಾಲ್ ಆಟ ಎಂದರೆ ಮೈದಾನದ ಒಂದು ಕಡೆಯಿಂದ ಮತ್ತೊಂದು ಕಡೆಗೆ, ಅಂದರೆ ದೂರದಲ್ಲಿರುವ ತನ್ನದೇ ತಂಡದ ಆಟಗಾರನಿಗೆ ಚೆಂಡನ್ನು ಗಾಳಿಯಲ್ಲೇ ಎತ್ತಿ ಪಾಸ್ ಮಾಡುವ ಒಂದು ಪ್ರಮುಖ ತಂತ್ರವಾಗಿದೆ.

ಆದರೆ ಫುಟ್​​ಬಾಲ್ ಕರಗತವಾಗುತ್ತಿದ್ದಂತೆ ಮಲಯಾಳಿಗಳು ಈ ಲಾಂಗ್ ಬಾಲ್​​ ಆಟದಿಂದ ದೂರ ಸರಿಯಲಾರಂಭಿಸಿದರು. ಬದಲಿಗೆ ಅವರು ಮೈದಾನದಲ್ಲೇ ಸಣ್ಣ ಸಣ್ಣ ಪಾಸ್‌ಗಳನ್ನು ನೀಡುತ್ತಾ ಕಲಾತ್ಮಕವಾಗಿ ಆಡಲು ಬಯಸುತ್ತಿದ್ದರು.

ಮುಂದೆ 1950-70ರ ದಶಕದಲ್ಲಿ ಬ್ರೆಝಿಲ್ ತಂಡದ ‘ಸಾಂಬಾ ಶೈಲಿ’ ಮತ್ತು ‘ಜೋಗಾ ಬೋನಿಟೋ’ ಜಗತ್ತಿಗೆ ಪರಿಚಯವಾದಾಗ, ಮಲಬಾರ್‌ನ ಜನರಿಗೆ ತಮ್ಮದೇ ಆಟದ ಸುಧಾರಿತ ರೂಪ ಬ್ರೆಝಿಲ್‌ನವರ ಆಟದಲ್ಲಿ ಕಂಡಿತು. ಬ್ರಿಟಿಷರ ಮೇಲಿನ  ಕೋಪ ಮತ್ತು ಬ್ರೆಝಿಲ್‌ನ ಆಟದ ಮೇಲಿನ ಪ್ರೀತಿ ಎರಡೂ ಸೇರಿ ಇಂದಿನ ಹಳದಿ-ಹಸಿರು ಉನ್ಮಾದಕ್ಕೆ ಕಾರಣವಾಯಿತು.

ಪೆಲೆ ಎಂಬ ಜಾದೂಗಾರ:

ಒಂದೆಡೆ ಸಾಂಬಾ ಶೈಲಿಯ ಫುಟ್​​ಬಾಲ್ ಅನ್ನು ಪ್ರೀತಿಸಲಾರಂಭಿಸಿದ ಮಲಯಾಳಿಗಳಿಗೆ ಹೀರೋ ಆಗಿ ಪೆಲೆ ಎಂಬ ಜಾದೂಗಾರ ಸಿಕ್ಕಿದ. 1958, 1962 ಮತ್ತು 1970ರಲ್ಲಿ ಬ್ರೆಝಿಲ್ ವಿಶ್ವಕಪ್ ಗೆದ್ದಾಗ ಪೆಲೆ, ಗಾರಿಂಚಾ ಕೇರಳದಲ್ಲಿ ಮನೆ ಮಾತಾದರು.

ಅದರಲ್ಲೂ ಕಡುಬಡತನದಿಂದ ಬಂದ ಕಪ್ಪು ವರ್ಣದ ಆಟಗಾರರು ಫುಟ್​​​ಬಾಲ್ ಜಗತ್ತನ್ನು ಆಳುತ್ತಿರುವುದು ಮಲಯಾಳಿಗಳನ್ನು ಹೆಚ್ಚು ಆಕರ್ಷಿಸಿತು. ಇದು ಮಲಬಾರಿನ ಜನಸಾಮಾನ್ಯರಲ್ಲಿ ಮತ್ತು ಶೋಷಿತ ವರ್ಗದಲ್ಲಿ ತಾವೂ ಏನನ್ನಾದರೂ ಸಾಧಿಸಬಹುದು ಎಂಬ ದೊಡ್ಡ ಭರವಸೆ ಮೂಡಿಸಿತು.

ಈ ಭರವಸೆ ಮುಂದೆ ಕನಸುಗಳಾಯಿತು. ಈ ಕನಸುಗಳು ಫುಟ್​​ಬಾಲ್ ಉನ್ಮಾದವಾಯಿತು. ಇದೇ ಕಾರಣಕ್ಕೆ ಇಂದಿಗೂ ವಿಶ್ವಕಪ್ ಬಂದಾಗ ಮಲಬಾರ್‌ನ ಹಳ್ಳಿಹಳ್ಳಿಗಳಲ್ಲಿ ಬ್ರೆಝಿಲ್‌ನ ಹಳದಿ-ಹಸಿರು ಧ್ವಜಗಳು, ಪೆಲೆ, ರೊನಾಲ್ಡೊ, ರೊನಾಲ್ಡಿನೊ ಮತ್ತು ನೇಮರ್ ಅವರ ದೈತ್ಯ ಕಟೌಟ್‌ಗಳು ರಾರಾಜಿಸುತ್ತವೆ.

ಇದನ್ನೂ ಓದಿ: FIFA World cup 2026: ಫುಟ್‌ಬಾಲ್ ಆಟವನ್ನೇ ಬದಲಿಸಲಿದೆ ಹೊಸ ನಿಯಮಗಳು!

ಒಟ್ಟಾರೆಯಾಗಿ, ಮಲಬಾರ್‌ನ ಈ ಹಳದಿ-ಹಸಿರು ಉನ್ಮಾದವು ಕೇವಲ 90 ನಿಮಿಷಗಳ ಆಟಕ್ಕೆ ಸೀಮಿತವಾದದ್ದಲ್ಲ, ಅದು ತಲೆಮಾರುಗಳಿಂದ ಹರಿದುಬಂದಿರುವ ಒಂದು ಜೀವಂತ ಪರಂಪರೆ. ಬ್ರೆಝಿಲ್‌ನ ಮಣ್ಣಿನ ‘ಜೋಗಾ ಬೋನಿಟೋ’ ಶೈಲಿ ಮತ್ತು ಮಲಬಾರ್‌ನ ಜನರ ಸಾಂಸ್ಕೃತಿಕ ಅಸ್ಮಿತೆ ಎರಡೂ ಒಂದಾಗಿ, ಭೌಗೋಳಿಕ ಗಡಿಗಳನ್ನು ಮೀರಿ ನಿಂತಿರುವ ಅಪರೂಪದ ಪ್ರೇಮಕಾವ್ಯವಿದು. ಜಗತ್ತಿನ ನಕ್ಷೆಯಲ್ಲಿ ಬ್ರೆಝಿಲ್ ಎಲ್ಲೋ ದೂರದಲ್ಲಿದ್ದರೂ, ವಿಶ್ವಕಪ್ ಬಂದಾಗಲೆಲ್ಲಾ ಮಲಬಾರ್‌ನ ಪ್ರತಿಯೊಂದು ಹಳ್ಳಿಯೂ ಮತ್ತೊಂದು ಪುಟ್ಟ ಬ್ರೆಝಿಲ್ ಆಗಿ ರೂಪಾಂತರಗೊಳ್ಳುತ್ತದೆ. ಫುಟ್‌ಬಾಲ್ ಕೇವಲ ಕ್ರೀಡೆಯಲ್ಲ, ಅದು ಮಲಬಾರಿನ ಪಾಲಿಗೆ ಒಂದು ಧರ್ಮ, ಒಂದು ಸಂಭ್ರಮ ಎಂಬುದೇ ಸತ್ಯ!

ಕೇರಳದ ಬ್ರೆಝಿಲ್​ ಪ್ರೇಮಿಗಳಿಗೆ ಅರ್ಜೆಂಟೀನಾ ಎದುರಾಳಿ ಆಗಿದ್ದು ಹೇಗೆ? ನಿರೀಕ್ಷಿಸಿ…

Source link

Leave a Reply

Your email address will not be published. Required fields are marked *