20 ವರ್ಷದ ಹಿಂದೆಯೇ 16,700 ರೂ ಕಟ್ಟಿದ್ರೂ ಇದುವರೆಗೂ ಇ ಖಾತಾ ಸಿಕ್ಕಿಲ್ಲ, ಇದು ಅಧಿಕಾರಿಗಳ ಕಾರ್ಯವೈಖರಿ

20 ವರ್ಷದ ಹಿಂದೆಯೇ 16,700 ರೂ ಕಟ್ಟಿದ್ರೂ ಇದುವರೆಗೂ ಇ ಖಾತಾ ಸಿಕ್ಕಿಲ್ಲ, ಇದು ಅಧಿಕಾರಿಗಳ ಕಾರ್ಯವೈಖರಿ

ಬೆಂಗಳೂರು, (ಮಾರ್ಚ್ 12): ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಯಾವುದೇ ಆಸ್ತಿ ವಹಿವಾಟು ನೋಂದಣಿಗೆ ಇ-ಖಾತಾ ಕಡ್ಡಾಯಗೊಳಿಸಿದೆ. ಇದರಿಂದ ಹಲವು ಸಮಸ್ಯೆಗಳು ಸಹ ಉಂಟಾಗಿದ್ದು, ಇ ಖಾತಾಕ್ಕಾಗಿ ಸಾರ್ವಜನಿಕರು ಪರದಾಡುತ್ತಿದ್ದಾರೆ. ಜಿಬಿಎ ಅಧಿಕಾರಿಗಳು ಮಾತ್ರ ಜನರ ಸಮಸ್ಯೆ ಏನು ಎನ್ನುವುದನ್ನೂ ತಿಳಿದುಕೊಳ್ಳುವ ಗೋಚಿಗೂ ಹೋಗಲ್ಲ. ಇದಕ್ಕೆ ಪೂರಕವೆಂಬಂತೆ ಬೆಂಗಳೂರಿನ ರಂಗನಾಯಕಿ ಮಹಿಳೆಯೊಬ್ಬರು ಇ ಖಾತಾಕ್ಕಾಗಿ ಇಪ್ಪತ್ತು ವರ್ಷಗಳಿಂದ ಹಿಂದೆ ಅಂದ್ರೆ 2006ರಲ್ಲಿ 16,700 ರೂಪಾಯಿ ಶುಲ್ಕ ಕಟ್ಟಿದ್ದಾರೆ. ಆದ್ರೆ, ಇಪ್ಪತ್ತು ವರ್ಷವಾದರೂ ಸಹ ರಂಗನಾಯಕಿಗೆ ಇ ಖಾತಾ ಸಿಕ್ಕಿಲ್ಲ. ಇದು ಅಧಿಕಾರಗಳು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಾರೆ ಎನ್ನುವುದನ್ನು ತೋರಿಸಿಕೊಡುತ್ತದೆ. ಇನ್ನು ಈ ಬಗ್ಗೆ ಸ್ವತಃ ರಂಗನಾಯಕಿ ಅವರೇ ಜಿಬಿಎ ಆಯುಕ್ತರಿಗೂ ಸಹ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ. ಇನ್ನು  ಇ ಖಾತಾಕ್ಕಾಗಿ ಪಟ್ಟ ಕಷ್ಟ, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ  ಮಹಿಳೆ ಎಳೆ ಎಳೆಯಾಗಿ ಬಿಟ್ಟಿದ್ದು, ಅದು ಈ ಕೆಳಗಿನಂತಿದೆ ಓದಿ.

ನಾನು ಸಮಸ್ಯೆ ಹೇಳಿಕೊಳ್ಳಲು ವೇದಿಕೆ ಹಾಗೂ ನನ್ನ ಸಮಸ್ಯೆಯನ್ನು ಕೇಳಿಸಿಕೊಳ್ಳಲು ಎರಡು ಕಿವಿಗಳು ಸಿಗದ ಕಾರಣಕ್ಕೆ ಇದನ್ನು ಎಲ್ಲರೆದುರು ಹೇಳಿಕೊಳ್ಳಲು ಮಾಧ್ಯಮವೊಂದನ್ನು ಆಯ್ಕೆ ಮಾಡಿಕೊಂಡೆ. ನನ್ನ ಹೆಸರು ರಂಗನಾಯಕಿ. ಅಗತ್ಯಕ್ಕೆ ತಕ್ಕಷ್ಟು ಸ್ವಲ್ಪ ಓದು, ಸಾಸಿವೆ ಡಬ್ಬಿ, ಮನೆ ವ್ಯವಹಾರಕ್ಕೆ ಬೇಕಾದಷ್ಟು ತಿಳಿವಳಿಕೆ ಇರುವ ವ್ಯಕ್ತಿ ನಾನು. ಬೆಂಗಳೂರಿನ, ಬನಶಂಕರಿ ಮೂರನೇ ಹಂತದ, ಹೊಸಕೆರೆಹಳ್ಳಿಯ, ದತ್ತಾತ್ರೇಯನಗರದ ಮೂರನೇ ಮುಖ್ಯರಸ್ತೆಯಲ್ಲಿ ನನ್ನ ಮನೆ ಇದೆ; ಸ್ವಂತದ್ದು. ಆ ನಿವೇಶನ ‘ಬಿ’ ಖಾತಾ ಹೊಂದಿದೆ. ಇತ್ತೀಚೆಗೆ ಬಿ ಖಾತಾಗಳನ್ನು ಎ ಖಾತಾಗೆ ಮಾಡಿಕೊಡುವ ಬಗ್ಗೆ ಡಿಕೆ ಶಿವಕುಮಾರ್ ಅವರು ಹೇಳಿದರಲ್ಲ, ಅದಕ್ಕೆ ಅರ್ಜಿ ಹಾಕಿಕೊಳ್ಳಬೇಕು ಎಂಬಷ್ಟರಲ್ಲಿ ನನಗೆ ನೆನಪಾದ ಸಂಗತಿ ಏನೆಂದರೆ, 2006ನೇ ಇಸವಿಯ ಆಗಸ್ಟ್ ತಿಂಗಳಿನಲ್ಲಿಯೇ ಅಭಿವೃದ್ಧಿ ಶುಲ್ಕ 16,700 ರೂಪಾಯಿ ಪಾವತಿ ಮಾಡಿಯಾಗಿದೆ, ಆಗ ಹಣ ಕಟ್ಟಿದ್ದಕ್ಕೆ ನನ್ನ ಬಳಿ ರಸೀದಿಯೂ ಇದೆ.

ಇದನ್ನೂ ಓದಿ: ಇನ್ಮುಂದೆ ಇ-ಖಾತಾ ಪಡೆಯುವುದು ಬಲು ಸುಲಭ: ಇಲ್ಲಿದೆ ಹಂತ ಹಂತದ ಮಾಹಿತಿ

ಹಣ ಪಾವತಿ ಮಾಡಿದ ಮೇಲೆ ನಮಗೆ ಎ ಖಾತಾ ಮಾಡಿಕೊಡಲೇ ಇಲ್ಲ. ನಿರಂತರವಾಗಿ ನಮ್ಮ ವಾರ್ಡ್ ವ್ಯಾಪ್ತಿಯ ಅಧಿಕಾರಿಗಳನ್ನೆಲ್ಲ ಭೇಟಿ ಮಾಡಿದೆ, ಅವರಿಗೆ ನಾನು ಹಣ ಪಾವತಿ ಮಾಡಿದ್ದ ರಸೀದಿ ತೋರಿಸಿದೆ, ಎ ಖಾತಾ ಮಾಡಿಕೊಡಿ ಎಂದು ಕೇಳಿಕೊಂಡೆ. ನನ್ನ ಅಕ್ಕ-ಪಕ್ಕದ ಮನೆಯೆಲ್ಲ ಎ ಖಾತಾ ಆಸ್ತಿಗಳಿವೆ. ನಾನು ಹೀಗೆ 16,700 ರೂಪಾಯಿ ಅಭಿವೃದ್ಧಿ ಶುಲ್ಕ ಪಾವತಿ ಸಹ ಮಾಡಿಯಾಗಿದೆ ಎಂದು ಹೇಳಿದೆ. ಹೀಗೆ ನನ್ನ ಮನವಿ ಹೇಗೆ ಒಂದೇ ಥರ ಇರುತ್ತಿತ್ತೋ ಅಧಿಕಾರಿಗಳ ಉತ್ತರವೂ ಒಂದೇ ಇರುತ್ತಿತ್ತು: ಇನ್ನೂ ಎ ಖಾತಾ ಬಿಟ್ಟಿಲ್ಲ, ಬಿಟ್ಟಾಗ ಮಾಡಿಕೊಡ್ತೀವಿ. ಹೀಗೆ ವರ್ಷ ಇಪ್ಪತ್ತು ಕಳೆದುಹೋಗಿದೆ.

ಒಂದು ವೇಳೆ ಆಸ್ತಿ ಕಂದಾಯ ಬಾಕಿ ಉಳಿಸಿಕೊಂಡರೆ ವರ್ಷಕ್ಕೆ ಹನ್ನೆರಡು ಪರ್ಸೆಂಟ್ ಬಡ್ಡಿ ಹಾಕಿ, ಬಿಬಿಎಂಪಿಗೆ ಹಣ ಕಟ್ಟಿಸಿಕೊಳ್ಳುವ ಪರಿಪಾಠ ಇದೆ. ಆದರೆ ನಾವು ಕಟ್ಟಿದ ಹಣ ಮತ್ತು ಹಾಗೆ ಕಟ್ಟಿಸಿಕೊಂಡಿದ್ದಕ್ಕೆ ಮಾಡಿಕೊಡಬೇಕಾದ ಕೆಲಸದ ಬಗ್ಗೆ ಯಾರಿಂದಲೂ ನೆಟ್ಟಗಿನ ಉತ್ತರ ಇಲ್ಲ.

ಈಚೆಗೆ, ಮಾರ್ಚ್ ಆರನೇ ತಾರೀಕು ಬೆಂಗಳೂರು ಪಶ್ಚಿಮ ವಿಭಾಗದ ಆಯಕ್ತರಾದ ರಾಜೇಂದ್ರ ಅವರ ಕಚೇರಿಗೆ ನನ್ನ ಮನವಿ ಪತ್ರವನ್ನು ಮಗನ ಕೈಲಿ ಕೊಟ್ಟು ಕಳಿಸಿದೆ. ಆ ನಂತರ ಮಾರ್ಚ್ ಹನ್ನೊಂದನೇ ತಾರೀಕು ಆ ಅರ್ಜಿ ಸ್ಥಿತಿ ಏನು ಅಂತ ಕೇಳಿದಾಗ, ರಾಜರಾಜೇಶ್ವರಿ ನಗರದ ಆಫೀಸ್ ಗೆ ಕಳಿಸಿದ್ದೀವಿ ಅಂತ ಹೇಳಿದರು. ಓಹ್, ನಮಗೆ ಉತ್ತರ ಸಿಗಬಹುದು ಅಂದುಕೊಂಡು, ಆರ್ಆರ್ ನಗರದಲ್ಲಿ ಇರುವ ಆಫೀಸ್ ಗೆ ಮಗನನ್ನು ಕಳಿಸಿದರೆ, ಅಲ್ಲಿ ಇದ್ದವರು ಆರತಿ ಆನಂದ್ ಅನ್ನೋ ಮೇಡಂ ಅಂತೆ.

ಆಗ ಕಟ್ಟಿರೋ ಹದಿನಾರು ಸಾವಿರಕ್ಕೆ ಈಗ ನಾನೇನು ಮಾಡಬೇಕು? ಕಮಿಷನರ್ ಆಫೀಸಿಂದ ನನಗೆ ನೀವು ಕೊಟ್ಟ ಪತ್ರ ಬರಲಿ, ಆಗ ನಿಮಗೆ ನ್ಯಾಯ ಕೊಡಿಸ್ತೀನಿ ಅಂತ ಹೇಳಿ, ಆ ನಂತರ ಕ್ಷಣವೂ ಅಲ್ಲಿ ನಿಲ್ಲದೆ, ತಮ್ಮ ಮನೆಗೆ ಹೊರಟರಂತೆ. ನಾವು ಸಲ್ಲಿಸಿದ್ದ ಅರ್ಜಿಯ ನಕಲನ್ನು, ನಾವು ಏನು ಹೇಳುತ್ತೇವೆ ಎಂದು ಕೇಳಿಸಿಕೊಳ್ಳುವ ವ್ಯವಧಾನವ ತೋರದ ಆರಂತಿ ಆನಂದ್ ಅವರಿಂದ ‘ನ್ಯಾಯ’ ಸಿಗುವುದು ಹೇಗೋ ನನಗಂತೂ ಗೊತ್ತಾಗಲಿಲ್ಲ. ನಮ್ಮ ಕುಟುಂಬದಲ್ಲಿಯೇ ಓದಿಕೊಂಡಿರುವ ಒಬ್ಬೇಒಬ್ಬ, ಅದೂ ನನ್ನ ಮಗನಿಗೆ ಗೊತ್ತಾಗಬಹುದಾ? ಗೊತ್ತಿಲ್ಲ.

ಕೊನೆ ಪ್ರಯತ್ನ ಅನ್ನೋ ಹಾಗೆ ಮಾಧ್ಯಮಗಳ ಮೂಲಕ ಜನರಿಗೆ ನನ್ನ ಸಮಸ್ಯೆ ಹೇಳಿಕೊಂಡು ಬಿಡೋಣ ಎಂದು ಇದನ್ನೆಲ್ಲ ನನ್ನ ಮಗನಿಗೇ ಹೇಳಿ ಬರೆಸಿದೆ. ನಾನು ಹಣ ಪಾವತಿ ಮಾಡಿದ ರಸೀದಿ ನಿಮ್ಮೆದುರು ಇಡುತ್ತಿದ್ದೇನೆ. ದಯವಿಟ್ಟು ಕರುಣೆಯ ಕಣ್ಣುಗಳಿಂದ ನೀವಾದರೂ ಇದನ್ನು ನೋಡಿ.

ಈಗ ಬಿ ಖಾತಾದಿಂದ ಎ ಖಾತಾಗೆ ಮಾಡಿಕೊಡುವುದಕ್ಕೆ ಶೇಕಡಾ ಐದರಷ್ಟು ಹಣ ಕಟ್ಟಬೇಕಂತೆ. ನಾನು ಇರುವ ಸೈಟಿನ ಅಳತೆಗೆ ಒಂದೂಮುಕ್ಕಾಲು ಲಕ್ಷದಿಂದ ಎರಡು ಲಕ್ಷ ರೂಪಾಯಿ ಕಟ್ಟಬೇಕಂತೆ. ಇಪ್ಪತ್ತು ವರ್ಷಗಳ ಹಿಂದೆ ಬೆಂಗಳೂರು ಮಹಾನಗರ ಪಾಲಿಗೆ ಎಂದಿದ್ದಾಗ ಕಟ್ಟಿದ್ದ 16,700 ರೂಪಾಯಿ ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ದಾಟಿ, ಗ್ರೇಟರ್ ಬೆಂಗಳೂರು ಅಥಾರಿಟಿ ತನಕ ಬಂದಿದೆ. ಈಗ ಶೇಕಡಾ ಐದರಷ್ಟು ಕಟ್ಟಬೇಕಾದ ಮೊತ್ತಕ್ಕೆ ಈ ಹಿಂದೆ ನಾನು ಕಟ್ಟಿದ್ದ ಹಣವನ್ನು ಪರಿಗಣಿಸಿ, ಸಂಪೂರ್ಣ ಮನ್ನಾ ಮಾಡಬೇಕು ಎಂಬುದು ನನ್ನ ಪ್ರಾರ್ಥನೆ.

ಇಪ್ಪತ್ತು ವರ್ಷದ ಹಿಂದಿನ 16,700 ರೂಪಾಯಿಯ ಇವತ್ತಿನ ಮೌಲ್ಯ ಏನು ಎಂಬುದನ್ನು ಡಿಕೆ ಶಿವಕುಮಾರ್ ಅವರಂಥ ದೊಡ್ಡ ಸಾಹೇಬ್ರು, ಕಮಿಷನರ್ ಸಾಹೇಬ್ರು ಎಲ್ಲ ಸೇರಿ ತೀರ್ಮಾನ ಮಾಡಲಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ.

ನಮ್ಮ ಆಸ್ತಿಯ ಇಪಿಐಡಿ ಸಂಖ್ಯೆ: 8849715443

ಆಸ್ತಿ ತೆರಿಗೆ ಪಾವತಿ ಅರ್ಜಿ ಸಂಖ್ಯೆ: 1600592919

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

Leave a Reply

Your email address will not be published. Required fields are marked *