Headlines

200 ರನ್​ ಕಷ್ಟವೇನಲ್ಲ… ಒಳ್ಳೆಯವರಿಗೆ ಒಳ್ಳೆದೇ ಆಗುತ್ತೆ…! – Kannada News | Suryakumar yadav post match presentation after IND vs WI Match

T20 World Cup 2026: ಟಿ20 ವಿಶ್ವಕಪ್​ನ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಸೂಪರ್-8 ಸುತ್ತಿನ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ 20 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 195 ರನ್​ಗಳು.

196 ರನ್​ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಪರ ಸಂಜು ಸ್ಯಾಮ್ಸನ್ ಅಜೇಯ 97 ರನ್ ಬಾರಿಸಿದರು. ಈ ಮೂಲಕ ಭಾರತ ತಂಡವು 19.2 ಓವರ್​ಗಳಲ್ಲಿ 199 ರನ್​ಗಳಿಸಿ 5 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸೆಮಿಫೈನಲ್​ಗೆ ಪ್ರವೇಶಿಸಿದೆ.

ಈ ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ತಂಡದ ಪ್ರದರ್ಶನಕ್ಕೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ಪಂದ್ಯವು ಒಂದು ಅದ್ಭುತ ಅನುಭವ. ಕ್ವಾರ್ಟರ್ ಫೈನಲ್​ ಆಗಿದ್ದ ಈ ಪಂದ್ಯದಲ್ಲಿ ನಾವು ಆಡಿದ ರೀತಿಯೇ ಅದ್ಭುತವಾಗಿತ್ತು. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ನಮ್ಮ ಹುಡುಗರು ವಹಿಸಿದ ಪಾತ್ರ ಅತ್ಯುತ್ತಮವಾಗಿತ್ತು. ಈ ಅದ್ಭುತ ಪ್ರದರ್ಶನದ ಫಲವಾಗಿ ನಾವು ಗೆದ್ದಿದ್ದೇವೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಇದೇ ವೇಳೆ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸೂರ್ಯ, ನೋಡಿ, ನಾನು ಯಾವಾಗಲೂ ಹೇಳುತ್ತೇನೆ, ಕಾಯುವ, ತಾಳ್ಮೆ ಹೊಂದಿರುವ ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ . ನಾನು ಸಂಜುನನ್ನು ಭೇಟಿಯಾದಾಗಲೂ ಅದನ್ನು ಈಗ ಹೇಳಿದ್ದೆ. ಆದರೆ ಅದು ಅವರ ಕಠಿಣ ಪರಿಶ್ರಮ, ಅವರು ಆಡದಿದ್ದಾಗ ಹಿಂಬದಿಯಲ್ಲಿ ಹಿಂದೆ ಏನು ಮಾಡುತ್ತಿದ್ದಾರೆ, ಮತ್ತು ಅವರು ಅದರ ಫಲವನ್ನು ಪರಿಪೂರ್ಣ ಹಂತದಲ್ಲಿ ಪಡೆದಿದ್ದಾರೆ.

ನಿಜವಾಗಿಯೂ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಮಾಡಿದ ರೀತಿ ತಂಡವನ್ನು ಸಂಪೂರ್ಣವಾಗಿ ಗೆಲುವಿನತ್ತ ಕೊಂಡೊಯ್ದಿತು ಎಂದರೆ ತಪ್ಪಾಗಲಾರದು. ಹೀಗಾಗಿ ಈ ಗೆಲುವಿನ ಅವರ ಪಾತ್ರ ಪ್ರಮುಖವಾಗಿತ್ತು. ಮೊದಲೇ ಹೇಳಿದಂತೆ ಒಳ್ಳೆಯವರಿಗೆ ಒಳ್ಳೆದೇ ಆಗುತ್ತೆ ಎಂದು ನಾನು ನಂಬುತ್ತೇನೆ ಎಂದು ಟೀಮ್ ಇಂಡಿಯಾ ನಾಯಕ ಹೇಳಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಬೌಲರ್​ಗಳ ಪ್ರದರ್ಶನಕ್ಕೂ ಪ್ರಶಂಸೆ ವ್ಯಕ್ತಪಡಿಸಿದ ಸೂರ್ಯಕುಮಾರ್ ಯಾದವ್, ಎಲ್ಲರೂ ಯೋಜನೆಗಳ ಪ್ರಕಾರ ಬೌಲಿಂಗ್ ಮಾಡಿದ್ದಾರೆಂದು ನಾನು ಭಾವಿಸುತ್ತೇನೆ. ಈಡನ್‌ನಲ್ಲಿ ಇಬ್ಬನಿಯೊಂದಿಗೆ 200 ರನ್ ಚೇಸ್ ಮಾಡುವುದು ಕಷ್ಟವೇನಲ್ಲ. 200 ರನ್​ಗಳು ಯಾವಾಗಲೂ ಉತ್ತಮ ಸ್ಕೋರ್ ಎಂದು ನಮಗೆ ತಿಳಿದಿತ್ತು.

ಎರಡನೇ ಇನ್ನಿಂಗ್ಸ್‌ನಲ್ಲಿ ಪಿಚ್ ಆಗುವ ರೀತಿ, ಚೆಂಡು ಚೆನ್ನಾಗಿ ಬ್ಯಾಟ್‌ಗೆ ಬರುತ್ತದೆ ಎಂಬುದು ನಮಗೆ ಗೊತ್ತಿತ್ತು. ಅಲ್ಲದೆ ನಮ್ಮ ಬ್ಯಾಟರ್‌ಗಳು  ಸಣ್ಣ, ಸಣ್ಣ ಪಾಲುದಾರಿಕೆಗಳೊಂದಿಗೆ ಪ್ರತಿಕ್ರಿಯಿಸಿದ ರೀತಿ ಉತ್ತಮವಾಗಿತ್ತು. ಇದರಿಂದ ಪಂದ್ಯವನ್ನು ಆಳವಾಗಿ ತೆಗೆದುಕೊಂಡು ಹೋಗಲು ಸಾಧ್ಯವಾಗಿದೆ. ಈ ಮೂಲಕ 200 ರನ್​ಗಳನ್ನು ಬೆನ್ನತ್ತಿ ಗೆದ್ದಿದ್ದೇವೆ.

ಈ ಗೆಲುವಿನೊಂದಿಗೆ ಸೆಮಿಫೈನಲ್​ಗೆ ಪ್ರವೇಶಿಸಿರುವುದು ಖುಷಿಯ ವಿಷಯ. ನಾವು ಆಡಿದ ರೀತಿ, ಮೊದಲ ಪಂದ್ಯದಿಂದಲೇ, ಸೆಮಿಫೈನಲ್‌ಗೆ ಹೋಗುವ ಆ ಸ್ಥಾನಕ್ಕೆ ನಾವು ಅರ್ಹರು ಎಂದು ನಾನು ಭಾವಿಸುತ್ತೇನೆ. ಅದು ಕೂಡ ಮುಂಬೈನಲ್ಲಿ, ಆದರೆ ನಾವು ಈಗ ಅದರ ಬಗ್ಗೆ ಯೋಚಿಸುವುದಿಲ್ಲ. ವಿಶ್ರಾಂತಿ ಪಡೆಯುತ್ತೇವೆ. ನಾಳೆ ಮುಂಬೈಗೆ ಹೋಗಿ ತಲುಪಿದ ಬಳಿಕ ಸೆಮಿಫೈನಲ್​ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತೇವೆ.

ಇದನ್ನೂ ಓದಿ: Sanju Samson: ಶತಕ ಮಿಸ್… ವಿರಾಟ್ ಕೊಹ್ಲಿ ದಾಖಲೆ ಉಡೀಸ್

ಇದೇ ವೇಳೆ ತವರಿನಲ್ಲಿ ಆಡುತ್ತಿರುವುದರಿಂದ ಒತ್ತಡದಲ್ಲಿದ್ದೇವೆ ಎಂಬುದನ್ನು ಒಪ್ಪಿಕೊಂಡಿರುವ ಸೂರ್ಯಕುಮಾರ್ ಯಾದವ್, ಆ ಒತ್ತಡವನ್ನು ನಾವು  ಹೇಗೆ ಅರ್ಥಮಾಡಿಕೊಳ್ಳುತ್ತೀವಿ, ಅದನ್ನು ಹೇಗೆ ತೆಗೆದುಕೊಳ್ಳುತ್ತೀವಿ ಎಂಬುದು ಮುಖ್ಯವಾಗುತ್ತದೆ. ಇದೀಗ ನಿರ್ಣಾಯಕ ಪಂದ್ಯದಲ್ಲಿ ನಾವು ಒತ್ತಡವನ್ನು ಮೀರಿ ಗೆಲುವು ಸಾಧಿಸಿದ್ದೇವೆ. ತವರಿನಲ್ಲಿನ ಪಂದ್ಯಗಳಲ್ಲಿ ಇಂತಹ ಪ್ರದರ್ಶನವೇ ಮುಖ್ಯವಾಗುತ್ತದೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಈ ಮೂಲಕ ಸೆಮಿಫೈನಲ್​ನಲ್ಲೂ ಒತ್ತಡವನ್ನು ಮೀರಿ ಭಾರತ ತಂಡ ಗೆಲುವು ದಾಖಲಿಸುವ ವಿಶ್ವಾಸವನ್ನು ಸೂರ್ಯಕುಮಾರ್ ಯಾದವ್ ವ್ಯಕ್ತಪಡಿಸಿದ್ದಾರೆ.

Source link

Leave a Reply

Your email address will not be published. Required fields are marked *