ಕ್ರಿಕೆಟ್ ಲೋಕದಲ್ಲಿ ಈಗಷ್ಟೇ ನೆಲೆ ಕಂಡುಕೊಳ್ಳುತ್ತಿರುವ ಐರ್ಲೆಂಡ್ ತಂಡ (Ireland Cricket) ಕೇವಲ 24 ಗಂಟೆಗಳ ಅಂತರದಲ್ಲಿ 2 ಐತಿಹಾಸಿಕ ಗೆಲುವು ಸಾಧಿಸಿದೆ. ಒಂದೆಡೆ ಐರ್ಲೆಂಡ್ ಪುರುಷರ ತಂಡ, ಟೀಂ ಇಂಡಿಯಾ ವಿರುದ್ಧದ ಮೊದಲ ಟಿ20 ಪಂದ್ಯವನ್ನು 34 ರನ್‌ಗಳಿಂದ ಗೆದ್ದುಕೊಂಡಿತು. ಇದು ಕ್ರಿಕೆಟ್ ಇತಿಹಾಸದಲ್ಲಿ ಟೀಂ ಇಂಡಿಯಾ ವಿರುದ್ಧ ಯಾವುದೇ ಮಾದರಿಯಲ್ಲಿ ಐರ್ಲೆಂಡ್ ತಂಡದ ಮೊದಲ ಜಯವಾಗಿತ್ತು. ಈ ಪಂದ್ಯ ಮುಗಿದು 24 ಗಂಟೆಗಳ ಅಂತರದಲ್ಲಿ ಐರ್ಲೆಂಡ್ ಮಹಿಳಾ ತಂಡ ಟಿ20 ವಿಶ್ವಕಪ್ನಲ್ಲಿ (T20 World Cup) ಮತ್ತೊಂದು ಐತಿಹಾಸಿಕ ಗೆಲುವು ಸಾಧಿಸಿದೆ. ಈ ಪಂದ್ಯಾವಳಿಯಲ್ಲಿ ಕೊನೆಯ ಲೀಗ್ ಪಂದ್ಯವನ್ನು ಆಡಿದ ಐರ್ಲೆಂಡ್, ಬಲಿಷ್ಠ ವೆಸ್ಟ್ ತಂಡವನ್ನು ಸೋಲಿಸುವ ಮೂಲಕ ಪಂದ್ಯಾವಳಿಯ ಇತಿಹಾಸದಲ್ಲಿ ತಮ್ಮ ಮೊದಲ ಜಯವನ್ನು ದಾಖಲಿಸಿತು.
21 ಪಂದ್ಯಗಳ ಸೋಲಿಗೆ ಬ್ರೇಕ್
ಜೂನ್ 26 ರಂದು ಐರ್ಲೆಂಡ್ ರಾಜಧಾನಿ ಬೆಲ್‌ಫಾಸ್ಟ್‌ನಲ್ಲಿ ನಡೆದ ಮೊದಲ ಮೊದಲ ಟಿ20 ಪಂದ್ಯದಲ್ಲಿ ಐರ್ಲೆಂಡ್ ಪುರುಷರ ತಂಡ ಭಾರತವನ್ನು 34 ರನ್‌ಗಳಿಂದ ಸೋಲಿಸುವ ಮೂಲಕ ಇತಿಹಾಸ ಸೃಷ್ಟಿಸಿತು. 11 ಸೋಲುಗಳ ನಂತರ ಯಾವುದೇ ಸ್ವರೂಪದಲ್ಲಿ ಭಾರತದ ವಿರುದ್ಧ ಐರ್ಲೆಂಡ್ ಗಳಿಸಿದ ಮೊದಲ ಗೆಲುವು ಇದಾಗಿದೆ. ಇತ್ತ ಇಂಗ್ಲೆಂಡ್‌ನ ಬ್ರಿಸ್ಟಲ್‌ನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಐರ್ಲೆಂಡ್ ಮಹಿಳಾ ತಂಡ ತನ್ನ ಮೊದಲ ಗೆಲುವಿನೊಂದಿಗೆ ಇತಿಹಾಸ ಸೃಷ್ಟಿಸಿತು. ಈ ಮೂಲಕ ಟಿ20 ವಿಶ್ವಕಪ್ನಲ್ಲಿ ಐರ್ಲೆಂಡ್ ತಂಡ ಸತತ 21 ಪಂದ್ಯಗಳ ಸೋಲಿಗೆ ಅಂತ್ಯ ಹಾಡಿತು. ಈ ಪಂದ್ಯಕ್ಕೂ ಮುನ್ನ ಆಡಿದ್ದ ಎಲ್ಲಾ ಪಂದ್ಯಗಳನ್ನು ಐರ್ಲೆಂಡ್ ಸೋತಿತ್ತು.
ವಿಂಡೀಸ್ ಮಣಿಸಿದ ಐರ್ಲೆಂಡ್
ಗುಂಪು ಹಂತದಲ್ಲಿ ತನ್ನ ಮೊದಲ ನಾಲ್ಕು ಪಂದ್ಯಗಳಲ್ಲಿ ಸೋತಿದ್ದ ಐರ್ಲೆಂಡ್ ಮಹಿಳಾ ತಂಡ ಅಧಿಕೃತವಾಗಿ 2026 ರ ಮಹಿಳಾ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿತ್ತು. ಹೀಗಾಗಿ ಔಪಚಾರಿಕ ಪಂದ್ಯದಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ತಂಡ, ಐರ್ಲೆಂಡ್ಗೆ ಎದುರಾಳಿಯಾಗಿತ್ತು. ಸೆಮಿಫೈನಲ್ ದೃಷ್ಟಿಯಿಂದ ಈ ಪಂದ್ಯ ವಿಂಡೀಸ್ ಪಡೆಗೆ ನಿರ್ಣಾಯಕವಾಗಿತ್ತು. ಆದರೆ ಮಾಜಿ ಚಾಂಪಿಯನ್ ವಿಂಡೀಸ್ ತಂಡಕ್ಕೆ ಮರ್ಮಾಘಾತ ನೀಡುವಲ್ಲಿ ಗ್ಯಾಬಿ ಲೂಯಿಸ್ ನಾಯಕತ್ವದ ಐರಿಶ್ ತಂಡ ಯಶಸ್ವಿಯಾಯಿತು.
ಹೀಗೊಂದು ಕಾಕತಾಳೀಯ; 2028 ರ ಟಿ20 ವಿಶ್ವಕಪ್ ಕೂಡ ಭಾರತದ್ದೇ
ಟಿ20 ವಿಶ್ವಕಪ್ ಪಂದ್ಯ ಹೀಗಿತ್ತು
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೇಲಿ ಮ್ಯಾಥ್ಯೂಸ್ ನಾಯಕತ್ವದ ವೆಸ್ಟ್ ಇಂಡೀಸ್ ತಂಡ ಕೇವಲ 128 ರನ್‌ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಶೆನೆಲ್ಲೆ ಹೆನ್ರಿ ಅತ್ಯಧಿಕ 27 ರನ್‌ಗಳ ಇನ್ನಿಂಗ್ಸ್ ಆಡಿದರು. ಇತ್ತ ಐರ್ಲೆಂಡ್ ಪರ ಕಾರಾ ಮುರ್ರೆ (2/13) ಮತ್ತು ಆಮಿ ಮ್ಯಾಗೈರ್ (2/22) ಬೌಲಿಂಗ್ನಲ್ಲಿ ಮಿಂಚಿದರು. ಈ ಗುರಿ ಬೆನ್ನಟ್ಟಿದ ಐರ್ಲೆಂಡ್ಗೂ ಉತ್ತಮ ಆರಂಭ ಸಿಗಲಿಲ್ಲ. ನಾಯಕಿ ಲೂಯಿಸ್ ಕೇವಲ 26 ರನ್‌ಗಳಿಗೆ ಔಟಾದರಾದರೂ ಓರ್ಲಾ ಪ್ರೆಂಡರ್‌ಗ್ಯಾಸ್ಟ್ ಏಕಾಂಗಿ ಹೋರಾಟ ನೀಡಿ 44 ಎಸೆತಗಳಲ್ಲಿ 63 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು ಮತ್ತು ತಂಡವನ್ನು ಗೆಲುವಿನ ಹತ್ತಿರಕ್ಕೆ ತಂದರು. ಅಂತಿಮವಾಗಿ ಐರ್ಲೆಂಡ್ 19 ನೇ ಓವರ್‌ನ ಮೊದಲ ಎಸೆತದಲ್ಲಿ ಗೆಲುವಿನ ರನ್ ಗಳಿಸಿ 6 ವಿಕೆಟ್‌ಗಳ ಜಯ ಸಾಧಿಸಿತು.