Headlines

3 ತಿಂಗಳು ಜೈಲು ಶಿಕ್ಷೆ: ಬಾಲಿವುಡ್ ನಟ ರಾಜ್‌ಪಾಲ್ ಯಾದವ್‌ಗೆ ದೆಹಲಿ ಹೈಕೋರ್ಟ್ ಬಿಗ್ ಶಾಕ್ – Kannada News | Rajpal Yadav Sentenced to 3 months Jail by Delhi High Court in Cheque Bounce Case

ನವದೆಹಲಿ: ಬಾಲಿವುಡ್​ನ ಖ್ಯಾತ ಹಾಸ್ಯ ನಟ ರಾಜ್‌ಪಾಲ್ ಯಾದವ್ ಅವರಿಗೆ ದೆಹಲಿ ಹೈಕೋರ್ಟ್ ಭಾರಿ ಆಘಾತ ನೀಡಿದೆ. ಹಲವು ಚೆಕ್ ಬೌನ್ಸ್ (Cheque Bounce) ಪ್ರಕರಣಗಳಿಗೆ ಸಂಬಂಧಿಸಿದಂತೆ ನಟನಿಗೆ ವಿಧಿಸಲಾಗಿದ್ದ ಮೂರು ತಿಂಗಳ ಜೈಲು (Jail) ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ. ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರಿದ್ದ ಪೀಠವು ಈ ತೀರ್ಪು ನೀಡಿದ್ದು, ರಾಜ್‌ಪಾಲ್ ಯಾದವ್ (Rajpal Yadav) ವಿರುದ್ಧದ 7 ಪ್ರಕರಣಗಳಲ್ಲಿ ತಲಾ 3 ತಿಂಗಳ ಸಾದಾ ಜೈಲು ಶಿಕ್ಷೆಯನ್ನು ವಿಧಿಸಿದೆ. ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ಚಾಲ್ತಿಯಲ್ಲಿರಲಿವೆ ಎಂದು ಕೋರ್ಟ್ ತಿಳಿಸಿದೆ. ಇದರೊಂದಿಗೆ, ಪ್ರತಿ ಪ್ರಕರಣದಲ್ಲೂ ದೂರುದಾರರಿಗೆ ತಲಾ 1.05 ಕೋಟಿ ರೂಪಾಯಿ ಪಾವತಿಸುವಂತೆ ನಟನಿಗೆ ಆದೇಶಿಸಲಾಗಿದೆ.

ಪತ್ನಿಗೂ ದಂಡದ ಬಿಸಿ:

ಕೇವಲ ರಾಜ್‌ಪಾಲ್ ಯಾದವ್ ಮಾತ್ರವಲ್ಲದೆ, ಅವರ ಪತ್ನಿ ರಾಧಾ ಯಾದವ್ ಅವರಿಗೂ ಕೋರ್ಟ್ ಭಾರಿ ಮೊತ್ತದ ದಂಡ ವಿಧಿಸಿದೆ. ಪ್ರತಿ ಪ್ರಕರಣದಲ್ಲೂ ದೂರುದಾರರಿಗೆ ತಲಾ 5 ಕೋಟಿ 51 ಲಕ್ಷದ 380 ರೂಪಾಯಿಗಳನ್ನು ಪಾವತಿಸುವಂತೆ ರಾಧಾ ಯಾದವ್ ಅವರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಈ ಹಿಂದೆ ರಾಜ್‌ಪಾಲ್ ಯಾದವ್ ಪಾವತಿಸಿದ್ದ 2.25 ಕೋಟಿ ರೂಪಾಯಿಗಳನ್ನು ಬಾಕಿ ಮೊತ್ತದಲ್ಲಿ ಕಡಿತಗೊಳಿಸಿ ಹೊಂದಾಣಿಕೆ ಮಾಡಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಜೈಲಿಗೆ ಹೋಗಲು ಸಿದ್ಧ ಎಂದಿದ್ದ ನಟ

ಸಂಧಾನದ ಮೂಲಕ ಹಣ ಪಾವತಿಸುವುದಾಗಿ ರಾಜ್‌ಪಾಲ್ ಯಾದವ್ ಕೋರ್ಟ್‌ಗೆ ಈ ಹಿಂದೆ ಹಲವು ಬಾರಿ ಭರವಸೆ ನೀಡಿದ್ದರು. ಸೆಟಲ್‌ಮೆಂಟ್ ಮಾಡಿಕೊಳ್ಳಲು ನ್ಯಾಯಾಲಯವು ಅವರಿಗೆ ಹತ್ತಾರು ಬಾರಿ ಅವಕಾಶಗಳನ್ನು ನೀಡಿತ್ತಾದರೂ, ಅವರು ತಮ್ಮ ಮಾತನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ವಿಚಾರಣೆಯ ಕೊನೆಯ ಹಂತದಲ್ಲಿ, ದೂರುದಾರ ಕಂಪನಿಯಾದ ‘ಮೆಸರ್ಸ್ ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್’ಗೆ ಇನ್ನು ಮುಂದೆ ಯಾವುದೇ ಹಣ ಪಾವತಿಸಲು ಸಾಧ್ಯವಿಲ್ಲ, ಬದಲಿಗೆ ತಾವು ಜೈಲಿಗೆ ಹೋಗಲು ಸಿದ್ಧ ಎಂದು ರಾಜ್‌ಪಾಲ್ ಯಾದವ್ ಹೇಳಿಕೆ ನೀಡಿದ್ದರು ಎನ್ನಲಾಗಿದೆ.

ಸುಪ್ರೀಂ ಕೋರ್ಟ್ ಮೆಟ್ಟಿಲೇರಲು 2 ತಿಂಗಳ ಕಾಲಾವಕಾಶ:

ಸದ್ಯ ದೆಹಲಿ ಹೈಕೋರ್ಟ್ ನೀಡಿರುವ ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ರಾಜ್‌ಪಾಲ್ ಯಾದವ್ ಅವರಿಗೆ ನ್ಯಾಯಾಲಯವು 2 ತಿಂಗಳ ಕಾಲಾವಕಾಶ ನೀಡಿದೆ. ಅಲ್ಲಿಯವರೆಗೆ ಅವರ ಶಿಕ್ಷೆ ಜಾರಿಗೆ ತಡೆ ಇರಲಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ಅವರಿಗೆ ಪರಿಹಾರ ಸಿಗಲಿದೆಯೇ ಅಥವಾ ಜೈಲು ಪಾಲಾಗಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಜೈಲಿನಲ್ಲಿ ಧೂಮಪಾನಕ್ಕೆ ಪ್ರತ್ಯೇಕ ಜಾಗ ಬೇಕು: ರಾಜ್​ಪಾಲ್ ಯಾದವ್ ಬೇಡಿಕೆ

‘ಯಾವುದೇ ವ್ಯಕ್ತಿ ಒಂದು ನಿರ್ದಿಷ್ಟ ರಂಗ ಅಥವಾ ಸಿನಿಮಾ ಉದ್ಯಮಕ್ಕೆ ಸೇರಿದವನು ಎಂಬ ಕಾರಣಕ್ಕೆ ನ್ಯಾಯಾಲಯವು ಅವರಿಗಾಗಿ ವಿಶೇಷ ರಿಯಾಯಿತಿ ಅಥವಾ ನಿಯಮಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ’ ಎಂದು ಈ ಹಿಂದೆ ಕೋರ್ಟ್ ಕಠಿಣವಾಗಿ ಹೇಳಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 3:25 pm, Fri, 10 July 26

Source link

Leave a Reply

Your email address will not be published. Required fields are marked *